ADVERTISEMENT

ಕುಣಿದು ಕುಪ್ಪಳಿಸಿದ ಜೆಡಿಎಸ್, ಪಕ್ಷೇತರ ಶಾಸಕರು

​ಪ್ರಜಾವಾಣಿ ವಾರ್ತೆ
Published 11 ಜೂನ್ 2012, 19:30 IST
Last Updated 11 ಜೂನ್ 2012, 19:30 IST

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯ ಫಲಿತಾಂಶ ಸೋಮವಾರ ಸಂಜೆ ಹೊರ ಬೀಳುತ್ತಿದ್ದಂತೆಯೇ ಜೆಡಿಎಸ್ ಮತ್ತು ಪಕ್ಷೇತರ ಶಾಸಕರು ಕುಣಿದು ಕುಪ್ಪಳಿಸಿದರು.

ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಅತಿ ಹೆಚ್ಚು ಮತಗಳನ್ನು ಪಡೆಯುವ ಮೂಲಕ ಜಯಶಾಲಿಯಾದ ಬಿ.ಎಸ್.ಸುರೇಶ್ ಅವರನ್ನು ಜೆಡಿಎಸ್ ಶಾಸಕ ಜಮೀರ್ ಅಹಮದ್ ಅವರು ತಬ್ಬಿಕೊಂಡು ಸಂಭ್ರಮಿಸಿದರು. ಪಕ್ಷೇತರ ಶಾಸಕರೂ ಈ ಸಂಭ್ರಮಕ್ಕೆ ಸಾಕ್ಷಿಯಾದರು.

ವಿಧಾನ ಸೌಧದ ಮೊದಲನೇ ಮಹಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಸುರೇಶ್ ಬೆಂಬಲಿಗರು ಫಲಿತಾಂಶ ಘೋಷಣೆಯಾಗುತ್ತಿದ್ದಂತೆಯೇ ಹರ್ಷ ವ್ಯಕ್ತಪಡಿಸಿ ಶುಭ ಕೋರಲು ಮುಂದಾದರು. ಮೊದಲ ಸುತ್ತಿನಲ್ಲಿ ಕಾಂಗ್ರೆಸ್‌ನ ಮೋಟಮ್ಮ, ಎಂ.ಆರ್.ಸೀತಾರಾಂ, ಜೆಡಿಎಸ್‌ನ ಸೈಯದ್ ಮುದೀರ್ ಆಗಾ, ಪಕ್ಷೇತರ ಅಭ್ಯರ್ಥಿ ಬಿ.ಎಸ್.ಸುರೇಶ್, ಬಿಜೆಪಿಯ ಬಿ.ಜೆ.ಪುಟ್ಟಸ್ವಾಮಿ, ಡಿ.ಎಸ್. ವೀರಯ್ಯ, ಸೋಮಣ್ಣ ಬೇವಿನಮರದ ಅವರು ಜಯ ಗಳಿಸಿದರು.

ಇವರೆಲ್ಲ ಸಂಭ್ರಮದಿಂದ ಮತಗಟ್ಟೆಯಿಂದ ಹೊರ ಬಂದು ಸಂತಸ ಹಂಚಿಕೊಂಡರು. ಆದರೆ ಮೊದಲ ಸುತ್ತಿನಲ್ಲಿ ಗೆಲುವಿಗೆ ಅಗತ್ಯವಿರುವ ಮತಗಳನ್ನು ಪಡೆಯಲು ಸಾಧ್ಯವಾಗದ ಕೆ.ಗೋವಿಂದರಾಜು, ಇಕ್ಬಾಲ್ ಅಹ್ಮದ್ ಸರಡಗಿ, ಬಿಜೆಪಿಯ ಭಾನುಪ್ರಕಾಶ್, ರಘನಾಥ ಮಲ್ಕಾಪುರೆ, ವಿಮಲಾಗೌಡ ಅವರ ಆತಂಕ ಮತ್ತಷ್ಟು ಹೆಚ್ಚಾಯಿತು.

ನಾಲ್ಕನೇ ಅಭ್ಯರ್ಥಿಯಾಗಿದ್ದ ಸೀತಾರಾಂ ಮೊದಲ ಸುತ್ತಿನಲ್ಲೇ ಜಯಗಳಿಸಿದ್ದರಿಂದ ಖುಷಿಗೊಂಡ ಬೆಂಬಲಿಗರು ಜಯಕಾರ ಹಾಕಿದರು. ಆದರೆ ಅಧಿಕೃತ ಅಭ್ಯರ್ಥಿಯಾಗಿದ್ದರೂ ಸೋತ ಸರಡಗಿ ಯಾರ ಕಣ್ಣಿಗೂ ಬೀಳದೆ ಮತಗಟ್ಟೆಯಿಂದ ಜಾಗ ಖಾಲಿ ಮಾಡಿದರು.

ಬೆಳಿಗ್ಗೆ 9 ಗಂಟೆಗೆ ಮತದಾನ ಶುರುವಾಯಿತು, ಪಕ್ಷೇತರ ಶಾಸಕ ಡಿ.ಸುಧಾಕರ್, ಬಿಜೆಪಿಯ ಎನ್.ಎಸ್.ನಂದೀಶ್ ರೆಡ್ಡಿ ಅವರನ್ನು ಹೊರತುಪಡಿಸಿದರೆ ಉಳಿದೆಲ್ಲ ಶಾಸಕರು ಮಧ್ಯಾಹ್ನ 1.40ಕ್ಕೆ ಮುಂಚೆ ಮತದಾನ ಮಾಡಿದರು. ಬಿಜೆಪಿ ಎಸ್.ಎಸ್.ಶಂಕರಲಿಂಗೇಗೌಡ ಮೊದಲಿಗರಾಗಿ ಮತ ಚಲಾಯಿಸಿದರು. ವಿಧಾನ ಸೌಧದ ಮೊದಲ ಮಹಡಿಯ 106ನೇ ಕೊಠಡಿಯಲ್ಲಿ ಮತದಾನ ನಡೆಯಿತು. ಎರಡು ಬೂತ್‌ಗಳ ವ್ಯವಸ್ಥೆ ಮಾಡಲಾಗಿತ್ತು.

ಅನಂತ್‌ಕುಮಾರ್ ಭಾಗಿ: ಮಧ್ಯಾಹ್ನ ಒಂದು ಗಂಟೆವರೆಗೂ ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತ್‌ಕುಮಾರ್ ಅವರು ಶಾಸಕರೊಂದಿಗೆ ಅನೌಪಚಾರಿಕವಾಗಿ ಚರ್ಚೆ ನಡೆಸುತ್ತಿದ್ದರು. ಬೆಳಿಗ್ಗೆ ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಸೇರಿದಂತೆ ಸಚಿವರು, ಶಾಸಕರು ಪಾಲ್ಗೊಂಡಿದ್ದರು.

ಸುಧಾಕರ್‌ಗಾಗಿ ಪರದಾಟ

ಪಕ್ಷೇತರ ಶಾಸಕರಾದ ಪಿ.ಎಂ.ನರೇಂದ್ರಸ್ವಾಮಿ, ಗೂಳಿಹಟ್ಟಿ ಶೇಖರ್, ಶಿವರಾಜ ತಂಗಡಗಿ, ವೆಂಕರಮಣಪ್ಪ ಅವರು ಒಟ್ಟಾಗಿ ಬಂದು ಮತ ಚಲಾಯಿಸಿದರು. ಮತ್ತೊಬ್ಬ ಪಕ್ಷೇತರ ಶಾಸಕ ಡಿ.ಸುಧಾಕರ್ ಮಧ್ಯಾಹ್ನ ಎರಡು ಗಂಟೆಯಾದರೂ ಮತಗಟ್ಟೆಯತ್ತ ಸುಳಿಯಲಿಲ್ಲ. ಇದರಿಂದ ಆತಂಕಕ್ಕೆ ಒಳಗಾದ ನಾಲ್ವರು ಪಕ್ಷೇತರ ಶಾಸಕರು ನಿರಂತರವಾಗಿ ಸುಧಾಕರ್‌ಗೆ ದೂರವಾಣಿ ಕರೆ ಮಾಡಿದರೂ ಪ್ರತಿಕ್ರಿಯೆಗೆ ಸಿಗಲಿಲ್ಲ. ಕೊನೆಗೆ ಮೂರು ಗಂಟೆ ಸುಮಾರಿಗೆ ಸುಧಾಕರ್ ಮತ ಚಲಾಯಿಸಿದಾಗ ಪಕ್ಷೇತರ ಶಾಸಕರು, ಅಭ್ಯರ್ಥಿ ಬಿ.ಎಸ್.ಸುರೇಶ್ ನೆಮ್ಮದಿಯ ನಿಟ್ಟುಸಿರುಬಿಟ್ಟರು.

ಆತ್ಮಸಾಕ್ಷಿ ಮತ: ಬಿಜೆಪಿ ವಿಪ್ ನೀಡಿದರೂ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಚಲಾಯಿಸಿರುವುದಾಗಿ ಶ್ರೀರಾಮುಲು ಆಪ್ತ ಶಾಸಕರಾದ ಜಿ.ಸೋಮಶೇಖರ್ ರೆಡ್ಡಿ, ಸುರೇಶ್‌ಬಾಬು ತಿಳಿಸಿದರು. ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿರುವ ಹಿನ್ನೆಲೆಯಲ್ಲಿ ವಿಪ್ ನೀಡಿದ್ದಾರೆ. ಆದರೆ ನಮ್ಮ ಗೆಲುವಿಗೆ ಶ್ರೀರಾಮುಲು ಕಾರಣ. ಹೀಗಾಗಿ ಅವರ ಸಲಹೆಯಂತೆ ಮತ ಹಾಕಿದ್ದೇವೆ. ಫಲಿತಾಂಶ ಏನಾಗುತ್ತದೆ ಎಂಬುದನ್ನು ಕಾದು ನೋಡಿ ಎಂದು ಮಾರ್ಮಿಕವಾಗಿ ಹೇಳಿದರು. ಶ್ರೀರಾಮುಲು ಜತೆ ಗುರುತಿಸಿಕೊಂಡಿರುವ ಬಿ.ನಾಗೇಂದ್ರ ಪ್ರತ್ಯೇಕವಾಗಿ ಬಂದು ಮತ ಚಲಾಯಿಸಿದರು.

ಮುಂದಿನ ಚುನಾವಣೆಯಲ್ಲಿ ಬಿಎಸ್‌ಆರ್ ಪಕ್ಷದಿಂದಲೇ ಸ್ಪರ್ಧಿಸುತ್ತೇವೆ. ಒಂದು ವರ್ಷ ಬಿಜೆಪಿ ಶಾಸಕರಾಗಿ ಮುಂದುವರಿಯುತ್ತೇವೆ. ದೈಹಿಕವಾಗಿ, ಮಾನಸಿಕವಾಗಿ ಈಗಲೂ ಶ್ರೀರಾಮುಲು ಅವರೊಂದಿಗೆ ಇದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.