ADVERTISEMENT

ಕುಮಾರಸ್ವಾಮಿ ಆಡಳಿತದ ಬಗ್ಗೆ ಆರೋಪ ಪಟ್ಟಿ ನೀಡಲು ಸಾಧ್ಯವಿಲ್ಲ: ಎಚ್.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2018, 10:49 IST
Last Updated 14 ಮಾರ್ಚ್ 2018, 10:49 IST
ಎಚ್‌.ಡಿ. ದೇವೇಗೌಡ
ಎಚ್‌.ಡಿ. ದೇವೇಗೌಡ   

ಬೆಂಗಳೂರು: ಬಿಜೆಪಿ, ಕಾಂಗ್ರೆಸ್ ಪಕ್ಷದವರು ಪರಸ್ಪರ ಆರೋಪ ಪಟ್ಟಿ (ಚಾರ್ಜ್‌ಶೀಟ್) ಬಿಡುಗಡೆ ಮಾಡಿದ್ದಾರೆ. ಆದರೆ ಕುಮಾರಸ್ವಾಮಿ ನಡೆಸಿದ್ದ 20 ತಿಂಗಳ ಆಡಳಿತದ ಬಗ್ಗೆ ಆರೋಪ ಪಟ್ಟಿ ಬಿಡುಗಡೆ ಮಾಡಲು ಯಾರಿಂದಲ್ಲೂ ಸಾಧ್ಯವಿಲ್ಲ. ಕಡಿಮೆ ಅವಧಿಯಲ್ಲಿ ಉತ್ತಮ ಆಡಳಿತ ನೀಡಿದ್ದರು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ. ದೇವೇಗೌಡ ಹೇಳಿದರು. 

ನಗರದ ಮಹಾಲಕ್ಷ್ಮಿ ಲೇಔಟ್‌ ವಿಧಾನಸಭಾ ಕ್ಷೇತ್ರದ ಗೆಳೆಯರ ಬಳಗ ವೃತ್ತದಲ್ಲಿ ಬುಧವಾರ ನಡೆದ ‘ವಿಕಾಸ ಪರ್ವ’ ಪಾದಯಾತ್ರೆಯಲ್ಲಿ ಅವರು ಮಾತನಾಡಿದರು.

‘ರಾಜ್ಯದಲ್ಲಿ ಮತ್ತೆ ಉತ್ತಮ ಆಡಳಿತ ನಡೆಯಬೇಕಾದರೆ ಬಹುಮತದ ಸರ್ಕಾರ ಅಧಿಕಾರಕ್ಕೆ ಬರಬೇಕು. ಬಡವರಿಗೆ ಅಕ್ಕಿ, ಗೋಧಿ ನೀಡುವ ಕೆಲಸ ಅಂದು ಮಾಡಿದ್ದೆ. ಕಾಂಗ್ರೆಸ್‌ನವರು ಈಗ ಅನ್ನಭಾಗ್ಯ ಎನ್ನುತ್ತಿದ್ದಾರೆ’ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.  

ADVERTISEMENT

ಇದೀಗ ಬಿಬಿಎಂಪಿಯಲ್ಲಿ ನೈಸ್ ಹರಗಣದ ಬಗ್ಗೆ ಪದ್ಮನಾಭ ರೆಡ್ಡಿ ಮಾತನಾಡುತ್ತಾರೆ. ಅಂದು ಕುಮಾರಸ್ವಾಮಿ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಕ್ಕೆ ಬಿಜೆಪಿ ಬೆಂಬಲ ಕೊಟ್ಟಿರಲಿಲ್ಲ. ಇಲ್ಲದಿದ್ದರೆ ಅಂದೇ ಮಹಾವಂಚಕ (ಅಶೋಕ್‌ ಖೇಣಿ) ಅವರಿಂದ ಭೂಮಿಯನ್ನು ಹಿಂಪಡೆಯಬಹುದಿತ್ತು. ನೈಸ್ ಯೋಜನೆಯನ್ನೇ ಸರ್ಕಾರದ ಸುಪರ್ದಿಗೆ ಪಡೆಯಲು ಕುಮಾರಸ್ವಾಮಿ ಮುಂದಾಗಿದ್ದರು. ಇದ್ಯಾವುದಕ್ಕೂ ಬಿಜೆಪಿ ಬೆಂಬಲ ಕೊಡಲಿಲ್ಲ ಎಂದರು. 

ಬೆಂಗಳೂರಿನ ನಾಗರಿಕರಿಗೆ ಪ್ರಬುದ್ಧತೆ ಇದೆ. ರಾಜ್ಯದ ರಾಜಕಾರಣ ಅರ್ಥಮಾಡಿಕೊಳ್ಳುವ ಶಕ್ತಿ ಇದೆ ಎಂದರು.  

2007ರಲ್ಲಿ ಕಾವೇರಿ ವಿಚಾರದಲ್ಲಿ ನಮಗೆ ವ್ಯತಿರಿಕ್ತ ತೀರ್ಪು ಬಂದಾಗ ನಾನು ಹೋರಾಟ ಮಾಡಿದ್ದೆ. ಈಗ ತೀರ್ಪು ಬಂದಾಗ ಮುಖ್ಯಮಂತ್ರಿ ಸೇರಿದಂತೆ ಸಚಿವರು ಸಿಹಿ ಹಂಚಿ ಸಂಭ್ರಮಿಸುತ್ತಾರೆ. ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದರು. 

‘ಹ್ಯಾರೀಸ್ ಮಗ ನಲಪಾಡ್ ಹಲ್ಲೆ ಮಾಡಿದ ರೀತಿಯಲ್ಲೇ ಮಾಗಡಿಯಲ್ಲಿ ಜೆಡಿಎಸ್ ಪುರಸಭಾ ಸದಸ್ಯನ ಮೇಲೆ ಹಲ್ಲೆ ಮಾಡಲಾಗಿದೆ. ಇದೆಲ್ಲ ನೋಡಿದರೆ ನಮ್ಮ ರಾಜ್ಯದ ಕಾನೂನು ಸುವ್ಯವಸ್ಥೆ ಹೇಗಿದೆ ಎಂಬುದು ಗೊತ್ತಾಗುತ್ತದೆ’ ಎಂದು ರಾಜ್ಯ ಸರ್ಕಾರದ ವೈಪಲ್ಯದ ಬಗ್ಗೆ ಬೇಸರ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.