ADVERTISEMENT

ಕೆ.ಆರ್‌.‍ಪುರ ಆಸ್ಪತ್ರೆ ಅವ್ಯವಸ್ಥೆಗೆ ಆಕ್ರೋಶ

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಭೇಟಿ

​ಪ್ರಜಾವಾಣಿ ವಾರ್ತೆ
Published 3 ಡಿಸೆಂಬರ್ 2017, 18:53 IST
Last Updated 3 ಡಿಸೆಂಬರ್ 2017, 18:53 IST
ಕೆ.ಆರ್‍.ಪುರ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಮಾಹಿತಿ ಪಡೆದರು
ಕೆ.ಆರ್‍.ಪುರ ಸಾರ್ವಜನಿಕ ಆಸ್ಪತ್ರೆಗೆ ಭಾನುವಾರ ಭೇಟಿ ನೀಡಿದ್ದ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀಬಾಯಿ ಮಾಹಿತಿ ಪಡೆದರು   

ಬೆಂಗಳೂರು: ಆಸ್ಪತ್ರೆಗೆ ತಪಾಸಣೆಗೆ ಬರುವ ಮಹಿಳಾ ರೋಗಿಗಳ ಅರೆನಗ್ನ ಚಿತ್ರಗಳನ್ನು ಸೆರೆ ಹಿಡಿದು ನೌಕರನೊಬ್ಬ ಅಮಾನತುಗೊಂಡು ಸುದ್ದಿಗೆ ಗ್ರಾಸವಾಗಿರುವ ಕೆ.ಆರ್.ಪುರ ಸಾರ್ವಜನಿಕ ಆಸ್ಪತ್ರೆಗೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ದಿಢೀರ್‌ ಭೇಟಿ ನೀಡಿದರು. ಆಸ್ಪತ್ರೆಯಲ್ಲಿರುವ ಅವ್ಯವಸ್ಥೆಗೆ ಕಂಡು ಅಸಮಾಧಾನ ವ್ಯಕ್ತಪಡಿಸಿದರು.

100 ಹಾಸಿಗೆಯ ಆಸ್ಪತ್ರೆಯಲ್ಲಿರುವ ಅನೈರ್ಮಲ್ಯ, ಸಿಬ್ಬಂದಿ ಕೊರತೆ, ಶೌಚಾಲಯಗಳ ದುಃಸ್ಥಿತಿ, ಕುಡಿಯುವ ನೀರಿನ ಸಮಸ್ಯೆಯ ಪ್ರತ್ಯಕ್ಷ ದರ್ಶನ ಮಾಡಿದ ಅಧ್ಯಕ್ಷರು, ‘ಆಸ್ಪತ್ರೆಯೇ ರೋಗವಾಹಕ ತಾಣವಾಗಿದೆ’ ಎಂದು ವೈದ್ಯಾಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಮಹಿಳೆಯರ ಅರೆ ನಗ್ನ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆ ಹಿಡಿಯುತ್ತಿದ್ದ ಡಿ ದರ್ಜೆ ನೌಕರ ರಘು ಎಂಬಾತನನ್ನು ಅಮಾನತ್ತಿಲ್ಲರಿಸಿದರೆ ಸಾಲದು. ಆತನನ್ನು ಕೆಲಸದಿಂದಲೇ ಕಿತ್ತುಹಾಕಬೇಕಿದೆ. ಆಯೋಗದಿಂದಲೂ ಸಹ ಸ್ವಯಂ ದೂರು ದಾಖಲಿಸಿಕೊಂಡು, ಕಠಿಣ ಕ್ರಮಕ್ಕೆ ಗುರಿಪಡಿಸಲಾಗುವುದು’ ಎಂದರು.

ADVERTISEMENT

‘ಡಿ ದರ್ಜೆ ಅಥವಾ ಇನ್ನಾವುದೇ ವರ್ಗದ ನೌಕರರನ್ನು ನೇಮಿಸಿಕೊಳ್ಳುವಾಗ ಅವರ ವ್ಯಕ್ತಿತ್ವ ನಡವಳಿಕೆಯ ಬಗ್ಗೆ ಕೂಲಂಕಶ ವಿಚಾರಿಸಿ, ನೇಮಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇಂತಹ ಅವಘಡಗಳು ನಡೆಯುವ ಸಾಧ್ಯತೆ ಇರುತ್ತದೆ. ನೌಕರರ ನೇಮಕದಲ್ಲಿ ಸೂಕ್ಷ್ಮತೆ ಮತ್ತು ಎಚ್ಚರಿಕೆ ವಹಿಸಬೇಕು’ ಎಂದು ವೈದ್ಯಾಧಿಕಾರಿಗಳಿಗೆ ಸೂಚಿಸಿದರು.

ಪುರುಷರು ಮತ್ತು ಮಹಿಳೆಯರ ಶೌಚಾಲಯಗಳನ್ನು ನಿರ್ವಹಣೆ ಮಾಡದೆ, ಕೆಲವು ಕಡೆ ಶಾಶ್ವತ ಬಾಗಿಲು ಮುಚ್ಚಲಾಗಿತ್ತು. ಇನ್ನು ಕೆಲವೆಡೆ ದುರಸ್ತಿ ಪಡಿಸಿಯೂ ಇರಲಿಲ್ಲ. ಮಹಿಳಾ ಮತ್ತು ಪುರುಷ ರೋಗಿಗಳನ್ನು ಒಂದೇ ವಾರ್ಡ್‍ನಲ್ಲಿ ಇರಿಸಿರುವುದನ್ನು ನೋಡಿ, ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

**

ಆಸ್ಪತ್ರೆ ಅಧಿಕಾರಿಗಳು ಮತ್ತು ಸಿಬ್ಬಂದಿ ನಡುವೆ ಸಮನ್ವಯ ಕೊರತೆ ಇರುವುದು ಎದ್ದು ಕಾಣುತ್ತಿದೆ. ಸೂಕ್ತ ಕ್ರಮಕ್ಕೆ ಶಿಫಾರಸ್ಸು ಮಾಡಲಾಗುವುದು.
–ನಾಗಲಕ್ಷ್ಮೀ ಬಾಯಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.