ಬೆಂಗಳೂರು: ಕರ್ನಾಟಕ ಆಡಳಿತ ನ್ಯಾಯಮಂಡಳಿಯ (ಕೆ.ಎ.ಟಿ) ಪೀಠವನ್ನು ಬೆಂಗಳೂರಿನ ಇಂದಿರಾ ನಗರದಿಂದ ಕೆಂಪೇಗೌಡ ರಸ್ತೆಯಲ್ಲಿರುವ `ಕಂದಾಯ ಭವನ'ದ ಕಟ್ಟಡಕ್ಕೆ ಸೆಪ್ಟೆಂಬರ್ ವೇಳೆಗೆ ಸ್ಥಳಾಂತರ ಮಾಡಬೇಕು ಎಂದು ಹೈಕೋರ್ಟ್ ಸರ್ಕಾರ ಮತ್ತು ಕೆಎಟಿ ರಿಜಿಸ್ಟ್ರಾರ್‌ಗೆ ಶುಕ್ರವಾರ ನಿರ್ದೇಶನ ನೀಡಿದೆ.
ವಕೀಲ ಎನ್.ಪಿ. ಅಮೃತೇಶ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ಎಚ್. ವಘೇಲಾ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠಕ್ಕೆ ವಿವರಣೆ ನೀಡಿದ ಸರ್ಕಾರದ ಪರ ವಕೀಲರು, `ಕಂದಾಯ ಭವನದಲ್ಲಿ ಕೆಎಟಿ ಪೀಠ ಸ್ಥಾಪನೆಗೆ ಅಗತ್ಯ ಕೆಲಸ ನಡೆಯುತ್ತಿದೆ. ಶೇಕಡ 70ರಷ್ಟು ಪೂರ್ಣಗೊಂಡಿದೆ. ಎರಡು ತಿಂಗಳ ಕಾಲಾವಕಾಶ ನೀಡಿ, ಕೆಲಸ ಪೂರ್ಣಗೊಳ್ಳುತ್ತದೆ' ಎಂದರು.
ಕೆಲಸ ಪೂರ್ಣಗೊಂಡ ಒಂದೂವರೆ ತಿಂಗಳಲ್ಲಿ, ಅಲ್ಲಿಗೆ ಪೀಠವನ್ನು ಸ್ಥಳಾಂತರ ಮಾಡಲಾಗುವುದು ಎಂದು ಕೆಎಟಿ ಪರ ವಕೀಲರು ತಿಳಿಸಿದರು. ಇದನ್ನು ದಾಖಲು ಮಾಡಿಕೊಂಡ ನ್ಯಾಯಪೀಠ, `ಪೀಠ ಸ್ಥಳಾಂತರಕ್ಕೆ ಅಗತ್ಯವಿರುವ ಕೆಲಸಗಳನ್ನು ಎರಡು ತಿಂಗಳಲ್ಲಿ ಪೂರ್ಣಗೊಳಸಿಬೇಕು. ಅದಾದ ಒಂದು ತಿಂಗಳಲ್ಲಿ ಪೀಠವನ್ನು ಅಲ್ಲಿಗೆ ಸ್ಥಳಾಂತರ ಮಾಡಬೇಕು' ಎಂಬ ನಿರ್ದೇಶನ ನೀಡಿ, ಅರ್ಜಿ ಇತ್ಯರ್ಥಪಡಿಸಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.