ಬೆಂಗಳೂರು: ಹಣದ ಅಕ್ರಮ ವರ್ಗಾವಣೆ ಆರೋಪದಡಿ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ವಿರುದ್ಧ ದಾಖಲಿಸಿರುವ ಪ್ರಕರಣದಲ್ಲಿ ಕೆಐಎಡಿಬಿ ಭೂ ಹಗರಣದ ಆರೋಪಿಗಳಾದ ಜಗ್ಗಯ್ಯ ಮತ್ತು ಬಿ.ಎಲ್.ವೆಂಕಯ್ಯ ಅವರನ್ನು ವಿಚಾರಣೆ ನಡೆಸಲು ಜಾರಿ ನಿರ್ದೇಶನಾಲಯಕ್ಕೆ (ಇ.ಡಿ) ಲೋಕಾಯುಕ್ತ ವಿಶೇಷ ನ್ಯಾಯಾಲಯ ಅನುಮತಿ ನೀಡಿದೆ.
ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯಲ್ಲಿ (ಕೆಐಎಡಿಬಿ) 106 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಭ್ರಷ್ಟಾಚಾರ ನಡೆಸಿರುವ ಆರೋಪದ ಮೇಲೆ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಅವರ ಪುತ್ರ ಕಟ್ಟಾ ಜಗದೀಶ್ ಮತ್ತಿತರರ ವಿರುದ್ಧ ಲೋಕಾಯುಕ್ತ ಪೊಲೀಸರು 2011ರ ಜುಲೈನಲ್ಲಿ ಆರೋಪಪಟ್ಟಿ ಸಲ್ಲಿಸಿದ್ದರು. ನಂತರ ಅವರಿಂದ ದಾಖಲೆ ಪಡೆದುಕೊಂಡ ಜಾರಿ ನಿರ್ದೇಶನಾಲಯದ ಬೆಂಗಳೂರು ವಿಭಾಗದ ಅಧಿಕಾರಿಗಳು ಕಟ್ಟಾ ಕುಟುಂಬದ ವಿರುದ್ಧ `ಹಣದ ಅಕ್ರಮ ವರ್ಗಾವಣೆ ನಿಯಂತ್ರಣ ಕಾಯ್ದೆ~ಯಡಿ ಮೊಕದ್ದಮೆ ದಾಖಲಿಸಿದ್ದರು.
ರೈತರ ಹೆಸರಿಗೆ ಸಂದಾಯವಾಗಬೇಕಿದ್ದ ಕೋಟ್ಯಂತರ ರೂಪಾಯಿಯನ್ನು ಇಂದು ಬಿಲ್ಡರ್ಸ್ ಅಂಡ್ ಡೆವಲಪರ್ಸ್ ಎಂಬ ಬೇನಾಮಿ ಕಂಪೆನಿ ಮೂಲಕ ವರ್ಗಾವಣೆ ಮಾಡಿಕೊಂಡ ಆರೋಪ ಕಟ್ಟಾ ಕುಟುಂಬದ ಮೇಲಿದೆ. ಈ ಪ್ರಕರಣದಲ್ಲಿ ಜಗ್ಗಯ್ಯ ಮತ್ತು ವೆಂಕಯ್ಯ ಬೇನಾಮಿ ಕಂಪೆನಿಯ ನಿರ್ದೇಶಕರೆಂದು ಗುರುತಿಸಿಕೊಂಡಿದ್ದರು. ಈ ಇಬ್ಬರೂ ವರ್ಷದಿಂದ ತಲೆಮರೆಸಿಕೊಂಡಿದ್ದರು. ಶನಿವಾರ ಇಬ್ಬರನ್ನೂ ಬಂಧಿಸಿದ್ದ ಲೋಕಾಯುಕ್ತ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಅರ್ಜಿ ಸಲ್ಲಿಕೆ: ಬುಧವಾರ ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಜಾರಿ ನಿರ್ದೇಶನಾಲಯದ ವಕೀಲರು, `ಕಟ್ಟಾ ಕುಟುಂಬದ ಸದಸ್ಯರ ವಿರುದ್ಧದ ಪ್ರಕರಣದಲ್ಲಿ ಜಗ್ಗಯ್ಯ, ವೆಂಕಯ್ಯ ಕೂಡ ಆರೋಪಿಗಳು. ಅವರ ವಿಚಾರಣೆ ನಡೆಸದೇ ತನಿಖೆ ಪೂರ್ಣಗೊಳ್ಳುವುದಿಲ್ಲ. ಆದ್ದರಿಂದ ವಿಚಾರಣೆಗೆ ಅವಕಾಶ ನೀಡಬೇಕು~ ಎಂದು ಮನವಿ ಸಲ್ಲಿಸಿದರು.
ವಿಚಾರಣೆ ನಡೆಸಿದ ನ್ಯಾಯಾಧೀಶ ಎನ್.ಕೆ.ಸುಧೀಂದ್ರ ರಾವ್, ಕೆಐಎಡಿಬಿ ಭೂ ಹಗರಣದ ತನಿಖಾಧಿಕಾರಿಯಾಗಿದ್ದ ಬೆಂಗಳೂರು ನಗರ ಲೋಕಾಯುಕ್ತ ಡಿವೈಎಸ್‌ಪಿ ಎಸ್.ಗಿರೀಶ್ ಅವರಿಂದ ಹೆಚ್ಚಿನ ಮಾಹಿತಿ ಪಡೆದರು. ಬಳಿಕ ಎರಡು ದಿನಗಳ ಕಾಲ ಜಗ್ಗಯ್ಯ ಮತ್ತು ವೆಂಕಯ್ಯ ಅವರ ವಿಚಾರಣೆಗೆ ಅವಕಾಶ ನೀಡಿದರು.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಆವರಣದಲ್ಲೇ ಇದೇ 9 ಮತ್ತು11ರಂದು ವಿಚಾರಣೆ ನಡೆಯಲಿದೆ. ಅಗತ್ಯ ಸೌಲಭ್ಯ ಒದಗಿಸಲು ಕಾರಾಗೃಹದ ಮುಖ್ಯ ಅಧೀಕ್ಷಕರಿ ನಿರ್ದೇಶಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.