ADVERTISEMENT

ಕೆಜಿಐಡಿ ಕಚೇರಿಗೆ ಲೋಕಾಯುಕ್ತ ದಿಢೀರ್ ಭೇಟಿ

​ಪ್ರಜಾವಾಣಿ ವಾರ್ತೆ
Published 5 ಜುಲೈ 2013, 20:12 IST
Last Updated 5 ಜುಲೈ 2013, 20:12 IST

ಬೆಂಗಳೂರು: ಕರ್ನಾಟಕ ಸರ್ಕಾರಿ ವಿಮಾ ಇಲಾಖೆಯ (ಕೆಜಿಐಡಿ) ಕಚೇರಿ ಮೇಲೆ ಶುಕ್ರವಾರ ಸಂಜೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತ ನ್ಯಾಯಮೂರ್ತಿ ವೈ.ಭಾಸ್ಕರರಾವ್ ಅವರು, ಇಲಾಖೆಯಿಂದ ಸರ್ಕಾರಿ ನೌಕರರಿಗೆ ಕಿರುಕುಳ ಆಗುತ್ತಿದೆ ಎಂಬ ದೂರುಗಳ ಬಗ್ಗೆ ಪರಿಶೀಲನೆ ನಡೆಸಿದರು. ಬಾಕಿ ಇರುವ ಕಡತಗಳ ವಿಲೇವಾರಿಗೆ ಕಾಲಮಿತಿಯನ್ನೂ ನಿಗದಿಪಡಿಸಿದರು.

ವಿಶ್ವೇಶ್ವರಯ್ಯ ಗೋಪುರದ 18ನೇ ಮಹಡಿಯಲ್ಲಿರುವ ಕೆಜಿಐಡಿ ಕಚೇರಿಗೆ ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್.ಎನ್.ಸತ್ಯನಾರಾಯಣ ರಾವ್ ಅವರೊಂದಿಗೆ ದಿಢೀರ್ ಭೇಟಿ ನೀಡಿದ ಲೋಕಾಯುಕ್ತರು, ತಪಾಸಣೆ ನಡೆಸಿದರು. ಆದರೆ, ಆಗ ಇಲಾಖೆಯ ನಿರ್ದೇಶಕ ಆರ್.ಎಂ.ದೊಡ್ಡಮನಿ ಕಚೇರಿಯಲ್ಲಿ ಇರಲಿಲ್ಲ.

ನಿರ್ದೇಶಕರ ಕುರಿತು ಲೋಕಾಯುಕ್ತರು ವಿಚಾರಿಸಿದಾಗ, ರಜೆ ಹಾಕಿದ್ದಾರೆ ಎಂಬ ಉತ್ತರ ಕಿರಿಯ ಅಧಿಕಾರಿಗಳಿಂದ ಬಂತು. ಆದರೆ, ರಜೆ ಚೀಟಿ ಪರಿಶೀಲಿಸಿದಾಗ, ಅದರಲ್ಲಿ ಅಧಿಕಾರಿಯ ಸಹಿ ಇರಲಿಲ್ಲ, ಹೆಚ್ಚು ವಿವರಗಳೂ ಇರಲಿಲ್ಲ. ಲೋಕಾಯುಕ್ತರು ಗರಂ ಆಗುತ್ತಿದ್ದಂತೆ ದೊಡ್ಡಮನಿ ಕಚೇರಿಗೆ ವಾಪಸಾದರು. ಹೊರಕ್ಕೆ ಹೋಗಿರುವುದಾಗಿ ಉತ್ತರಿಸಿದರು.

ಬಳ್ಳಾರಿಯಿಂದ ಬಂದಿದ್ದ ಶ್ರೀನಿವಾಸ್ ಎಂಬ ಯುವಕ ಕಚೇರಿಯಲ್ಲಿ ಕಾಯುತ್ತಿದ್ದುದ್ದನ್ನು ಕಂಡ ಲೋಕಾಯುಕ್ತ ತಂಡ, ಅವರನ್ನು ವಿಚಾರಿಸಿತು. 2011ರಲ್ಲಿ ಹೃದಯಾಘಾತದಿಂದ ನಿಧನರಾದ ತನ್ನ ತಂದೆ ರಾಮಪ್ಪ ಅವರ ವಿಮಾ ಹಣ ಪಡೆಯಲು ಬಂದಿರುವುದಾಗಿ ಅವರು ತಿಳಿಸಿದರು.

`2011ರಿಂದ ಇಲ್ಲಿಗೆ ಬರುತ್ತಲೇ ಇದ್ದೇನೆ. ಗುಮಾಸ್ತರ ವರ್ಗಾವಣೆ ಆಗಿದೆ ಎಂಬ ಕಾರಣಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸುವಂತೆ ಈಗ ಸೂಚಿಸಿದ್ದಾರೆ' ಎಂದು ಶ್ರಿನಿವಾಸ್ ಲೋಕಾಯುಕ್ತ ಅಧಿಕಾರಿಗಳಿಗೆ ತಿಳಿಸಿದರು.

ರಾಜ್ಯ ಮೀಸಲು ಪೊಲೀಸ್ ಪಡೆಯ ಮುಖ್ಯ ಕಾನ್‌ಸ್ಟೆಬಲ್ ಕೆ.ಸಿ.ಅಚ್ಚಪ್ಪ ಎಂಬುವರೂ ಅಲ್ಲಿ ಇದ್ದರು. ಅವರನ್ನು ವಿಚಾರಿಸಿದಾಗ, `2005ರಿಂದ 2011ರವರೆಗೆ ನನ್ನ ವಿಮಾ ಕಂತನ್ನು ಬೇರೆಯವರ ಖಾತೆಗೆ ಜಮಾ ಮಾಡಲಾಗಿದೆ. ಅದನ್ನು ವಾಪಸ್ ನನ್ನ ಖಾತೆಗೆ ಜಮಾ ಮಾಡುವಂತೆ ಅರ್ಜಿ ಸಲ್ಲಿಸಿದ್ದೇನೆ. ಈಗ ಮತ್ತೆ ಹೊಸ ಅರ್ಜಿ ಸಲ್ಲಿಸಲು ಹೇಳಿದ್ದಾರೆ' ಎಂದರು.

ಗಡುವು ನಿಗದಿ: `ನಗರಕ್ಕೆ ಸಂಬಂಧಿಸಿದಂತೆ ಕಂತು ಪಾವತಿ ಅವಧಿ ಪೂರ್ಣಗೊಂಡಿರುವ 157 ಪ್ರಕರಣಗಳು ಬಾಕಿ ಇವೆ. ನಿಧನರಾದ ನೌಕರರ ಕುಟುಂಬಕ್ಕೆ ವಿಮಾ ಹಣ ಪಾವತಿ ಮಾಡಬೇಕಿರುವ 40 ಪ್ರಕರಣಗಳು ಇತ್ಯರ್ಥ ಆಗಿಲ್ಲ. ಈ ಎಲ್ಲಾ ಪ್ರಕರಣಗಳನ್ನೂ ತಿಂಗಳೊಳಗೆ ವಿಲೇವಾರಿ ಮಾಡುವಂತೆ ಕೆಜಿಐಡಿ ನಿರ್ದೇಶಕರಿಗೆ ಗಡುವು ನಿಗದಿ ಮಾಡಿದ್ದೇನೆ' ಎಂದು ನ್ಯಾ.ರಾವ್ ತಿಳಿಸಿದರು.

`ಬಾಕಿ ಕಡತಗಳನ್ನು ನಿಗದಿಪಡಿಸಿದ ಕಾಲಮಿತಿಯೊಳಗೆ ವಿಲೇವಾರಿ ಮಾಡಬೇಕು. ನಂತರ ಖುದ್ದಾಗಿ ನನ್ನನ್ನು ಭೇಟಿ ಮಾಡಬೇಕು ಎಂದು ಆದೇಶ ನೀಡಿದ್ದೇನೆ' ಎಂದರು.

ಲೋಕಾಯುಕ್ತ ಎಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್, ಡಿಐಜಿ ಪಿ.ಎಚ್.ರಾಣೆ ಮತ್ತು ಬೆಂಗಳೂರು ನಗರ ಎಸ್‌ಪಿ ಇಡಾ ಮಾರ್ಟಿನ್ ಮಾರ್ಬೆನಿಂಗ್ ನೇತೃತ್ವದ ತಂಡ ಇಲಾಖೆಯ ಕೆಲವು ಕಡತಗಳನ್ನೂ ಪರಿಶೀಲನೆಗಾಗಿ ವಶಕ್ಕೆ ಪಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.