ADVERTISEMENT

ಕೆರೆಗಳ ತ್ವರಿತ ಅಭಿವೃದ್ಧಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 3 ಜೂನ್ 2017, 19:30 IST
Last Updated 3 ಜೂನ್ 2017, 19:30 IST
ಕೆರೆಗಳ ತ್ವರಿತ ಅಭಿವೃದ್ಧಿಗೆ ಆಗ್ರಹ
ಕೆರೆಗಳ ತ್ವರಿತ ಅಭಿವೃದ್ಧಿಗೆ ಆಗ್ರಹ   

ಬೆಂಗಳೂರು: ‘ಕೆರೆ ಉಳಿಸಿ’ ಅಭಿಯಾನದ ಅಂಗವಾಗಿ ‘ಯುನೈಟೆಡ್ ಬೆಂಗಳೂರು’ ಸಂಘಟನೆಯ ಸ್ವಯಂಸೇವಕರು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ನೇತೃತ್ವದಲ್ಲಿ ಸುಬ್ರಹ್ಮಣ್ಯಪುರ, ವಸಂತಪುರ ಹಾಗೂ ಗೌಡನಪಾಳ್ಯ ಕೆರೆಗಳಿಗೆ ಹಾಗೂ ವಸಂತತೀರ್ಥ ಕಲ್ಯಾಣಿಗೆ   ಶನಿವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.

ಕೆರೆಗಳ ಆಸುಪಾಸಿನ ನಿವಾಸಿಗಳು ತಂಡದ ಜೊತೆ ಅಳಲು ತೋಡಿಕೊಂಡರು. ‘20 ವರ್ಷಗಳಿಂದ ಇದೇ ಜಾಗದಲ್ಲಿ ವಾಸವಿದ್ದೇವೆ.  ನಮಗೆ ಸರ್ಕಾರ ಆಶ್ರಯ ಯೋಜನೆಯಡಿ ಹಕ್ಕುಪತ್ರ ನೀಡಿದೆ. ಕೆಲವರು ನಮ್ಮನ್ನು ಒಕ್ಕಲೆಬ್ಬಿಸುವ ಹುನ್ನಾರ ನಡೆಸುತ್ತಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.
‘ಮಂತ್ರಿ ಟ್ಯಾಂಕ್ ಅಪಾರ್ಟ್‌ಮೆಂಟ್ ಸಮುಚ್ಚಯ ಹಾಗೂ ಅದರ ಸುತ್ತಮುತ್ತಲಿನ ವಸತಿ ಸಮುಚ್ಚಯಗಳ ಚರಂಡಿ ನೀರನ್ನು ಕೆರೆಗೆ ಬಿಡುತ್ತಿದ್ದಾರೆ. ಇದರಿಂದ  ನೀರು ಕಲುಷಿತಗೊಂಡು ದುರ್ವಾಸನೆ ಬೀರುತ್ತಿದೆ’ ಎಂದರು.

ಕೆರೆ ಕಬಳಿಸುವ ಹುನ್ನಾರ: ‘ಒಟ್ಟು 25 ಎಕರೆ 6 ಗುಂಟೆ ವಿಸ್ತೀರ್ಣವನ್ನು ಹೊಂದಿರುವ ವಸಂತಪುರ ಕೆರೆ ಒತ್ತುವರಿಯಾಗಿದೆ. ಕೆರೆಯ ದುರ್ವಾಸನೆಯಿಂದಾಗಿ ಆಸುಪಾಸಿನ ಅಪಾರ್ಟ್‌ಮೆಂಟ್‌ ಸಮುಚ್ಚಯಗಳ ಫ್ಲ್ಯಾಟ್‌ಗಳಿಗೆ ಬೇಡಿಕೆ ಇಲ್ಲದಂತಾಗಿದೆ. ಇವುಗಳ ಮಾಲೀಕರು ಕೆರೆಕೋಡಿಯನ್ನು ಮೂರು ಬಾರಿ ಒಡೆದಿದ್ದಾರೆ’ ಎಂದು ಸ್ಥಳೀಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಹೋರಾಟದ ಎಚ್ಚರಿಕೆ: ‘ಈ ಕೆರೆಗಳನ್ನು ತ್ವರಿತವಾಗಿ ಅಭಿವೃದ್ಧಿಗೊಳಿಸಬೇಕು. ವಾರದೊಳಗೆ   ಕಾಮಗಾರಿ ಶುರುವಾಗದಿದ್ದರೆ ಹೋರಾಟ ನಿಶ್ಚಿತ’ ಎಂದು ದೊರೆಸ್ವಾಮಿ  ಎಚ್ಚರಿಕೆ ನೀಡಿದರು.

‘ವಸಂತಪುರ ಕೆರೆಯ ಹೂಳೆತ್ತಲು, ತಂತಿ ಬೇಲಿ ಅಳವಡಿಸಲು ಹಾಗೂ ನಡಿಗೆ ಪಥ ನಿರ್ಮಿಸಲು  ಬಿಬಿಎಂಪಿ  ₹3 ಕೋಟಿ ಬಿಡುಗಡೆ ಮಾಡಿದೆ’ ಎಂದು ಉತ್ತರಹಳ್ಳಿ ವಾರ್ಡ್‌ನ ಪಾಲಿಕೆ ಸದಸ್ಯ ಹನುಮಂತಯ್ಯ ತಿಳಿಸಿದರು.
‘ವಸಂತಪುರ ತೀರ್ಥ ಕಲ್ಯಾಣಿಯ ಜಾಗದಲ್ಲಿ  ರಸ್ತೆ ನಿರ್ಮಿಸಲು ಬಿಲ್ಡರ್‌ ಒಬ್ಬರು ಹುನ್ನಾರ ನಡೆಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದರು.

ಕಣ್ಣೀರಿಟ್ಟ ಅಜ್ಜಿ
‘ಕೆರೆ ಜಾಗದಲ್ಲಿ ಮನೆಗಳನ್ನು ನಿರ್ಮಿಸಿದ್ದೀರಿ. ಮನೆ ಖಾಲಿ ಮಾಡಿ ಎಂದು  ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ. ಇದರಿಂದ ಆತಂಕಗೊಂಡಿದ್ದೇವೆ’ ಎಂದು ವೃದ್ಧೆಯೊಬ್ಬರು  ತಂಡದ ಮುಂದೆ ಕಣ್ಣೀರಿಟ್ಟರು. 
’ನಿಮಗೆ ಅನ್ಯಾಯ ಆಗುವುದಕ್ಕೆ ಬಿಡುವುದಿಲ್ಲ’ ಎಂದು ದೊರೆಸ್ವಾಮಿ ಧೈರ್ಯ ತುಂಬಿದರು.

ಕಲ್ಯಾಣಿ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಪುನರ್‌ ನಿರ್ಮಾಣ ಮಾಡುತ್ತೇವೆ.  ಗೊಂದಲ ಸೃಷ್ಟಿಯಾದರೆ ಇನ್ಫೊಸಿಸ್ ಪ್ರತಿಷ್ಠಾನದ ಅನುದಾನ ಕೈತಪ್ಪಬಹುದು.
ಶೋಭಾಗೌಡ
ವಸಂತಪುರ ವಾರ್ಡ್ ಪಾಲಿಕೆ ಸದಸ್ಯೆ

ಸುಬ್ರಹ್ಮಣ್ಯಪುರ ಕೆರೆ ಗಬ್ಬು ನಾರುತ್ತಿದೆ. ಇಲ್ಲಿ ಒಂದು   ಕ್ಷಣ ನಿಲ್ಲಲು ನಮಗೇ ಆಗುತ್ತಿಲ್ಲ. ಇಲ್ಲೇ ವಾಸವಾಗಿರುವ ನಿವಾಸಿಗಳ ಪಾಡೇನು.
ಎಚ್.ಎಸ್.ದೊರೆಸ್ವಾಮಿ
ಸ್ವಾತಂತ್ರ್ಯ ಹೋರಾಟಗಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.