ADVERTISEMENT

ಕೆರೆಗಳ ಪುನಶ್ಚೇತನಕ್ಕೆ ಶಾಸಕ ದಯಾನಂದ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2013, 19:35 IST
Last Updated 8 ಸೆಪ್ಟೆಂಬರ್ 2013, 19:35 IST

ಬೆಂಗಳೂರು: `ಅಗರ, ಬೊಮ್ಮನಹಳ್ಳಿ ಸೇರಿದಂತೆ ದೊಡ್ಡ ಕೆರೆಗಳನ್ನು ಪುನಶ್ಚೇತನಗೊಳಿಸುವ ಮೂಲಕ ಹೆಚ್ಚಿನ ಪ್ರಮಾಣದ ಮಳೆ ನೀರು ಸಂಗ್ರಹಕ್ಕೆ ಸರ್ಕಾರ ತಕ್ಷಣ ಗಮನ ಹರಿಸಬೇಕು' ಎಂದು ವಿಧಾನ ಪರಿಷತ್ ಸದಸ್ಯ ದಯಾನಂದ ಒತ್ತಾಯಿಸಿದ್ದಾರೆ.

`ನಿವೇಶನ ಮಾಲೀಕರಿಗೆ ಮಳೆ ನೀರು ಸಂಗ್ರಹ ವ್ಯವಸ್ಥೆಯನ್ನು ಕಡ್ಡಾಯಗೊಳಿಸಲಾಗಿದೆ. ಅದಕ್ಕೂ ಮೊದಲು ಸರ್ಕಾರ ಕೆರೆಗಳ ಒತ್ತುವರಿ ತೆರವುಗೊಳಿಸಬೇಕು. ಅವುಗಳ ಹೂಳು ತೆಗೆಸಿ, ಹೆಚ್ಚು ಮಳೆ ನೀರು ನಿಲ್ಲುವಂತೆ ವ್ಯವಸ್ಥೆ ಮಾಡಬೇಕಿದೆ. ಕೆರೆಗಳಿಗೆ ಕೊಳಚೆ ನೀರು ಸೇರುವುದನ್ನು ತಡೆಗಟ್ಟಬೇಕು. ಆಗ ಆಯಾ ಕೆರೆಯ ಸುತ್ತಮುತ್ತಲಿನ ಕೊಳವೆ ಬಾವಿಗಳಲ್ಲಿ ಶುದ್ಧ ನೀರು ಸಮೃದ್ಧವಾಗಿ ಸಿಗುವಂತಾಗುತ್ತದೆ' ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

`ನಗರದಲ್ಲಿ ವಾಯು ಮತ್ತು ಶಬ್ಧ ಮಾಲಿನ್ಯ ಹೆಚ್ಚಾಗುವಲ್ಲಿ ಬಿಎಂಟಿಸಿ ಬಸ್‌ಗಳ ಕೊಡುಗೆ ಬಹಳ ದೊಡ್ಡದು. ಈ ವಾಸ್ತವಾಂಶವನ್ನು ಅಧಿಕಾರಿಗಳು ಮೊದಲು ಮನಗಾಣಬೇಕು. ಬಿಎಂಟಿಸಿ ಬಸ್‌ಗಳಿಂದಾಗುತ್ತಿರುವ ಮಾಲಿನ್ಯ ತಡೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕೊಳೆಗೇರಿಗಳಲ್ಲಿ ಸಮಗ್ರ ಅಭಿವೃದ್ಧಿ ಕಾರ್ಯಕ್ರಮಕ್ಕೆ ಆದ್ಯತೆ ನೀಡಬೇಕು' ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.