ADVERTISEMENT

‘ಕೆಲ ನ್ಯಾಯಾಧೀಶರು ಹಿಂದುತ್ವದ ಪ್ರತಿಪಾದಕರು’

ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಆರೋಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 19:30 IST
Last Updated 28 ಏಪ್ರಿಲ್ 2018, 19:30 IST
ನಗರದ ಸೆಂಟ್ರಲ್ ಕಾಲೇಜಿನ ಆವರಣದ ಸೆನೆಟ್ ಹಾಲ್‌ನಲ್ಲಿ ಸಾಮಾಜಿಕ ನ್ಯಾಯದ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಂಚುಗಾರ ಸಂಘ ಪರಿವಾರ’ ಕೃತಿಯ 2ನೇ ಮುದ್ರಣದ ಪುಸ್ತಕವನ್ನು ದಲಿತ್ ವಾಯ್ಸ್ ಸಂಪಾದಕ ವಿ.ಟಿ. ರಾಜಶೇಖರ್ ಅವರು ಬಿಡುಗಡೆ ಮಾಡಿ ಲೇಖಕಿ ಕಲೈಸೆಲ್ವಿ ಅವರಿಗೆ ಹಸ್ತಾಂತರಿಸಿದರು. (ಎಡದಿಂದ) ಲೇಖಕಿ ಸೌಮ್ಯ ಕೆ.ಆರ್, ಪತ್ರಕರ್ತ ಅಗ್ನಿ ಶ್ರೀಧರ್, ಉರಿಲಿಂಗ ಪೆದ್ದಿಗಳ ಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಇದ್ದಾರೆ -ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಕೆಲ ನ್ಯಾಯಾಧೀಶರು ಹಿಂದುತ್ವದ ಪ್ರತಿಪಾದಕರಾಗಿ ಘಟಸರ್ಪಗಳಂತೆ ಹೆಡೆ ಎತ್ತಿದ್ದಾರೆ’ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಆರೋಪಿಸಿದರು.

ಸಾಮಾಜಿಕ ನ್ಯಾಯದ ವೇದಿಕೆ ವತಿಯಿಂದ ನಗರದಲ್ಲಿ ಶನಿವಾರ ಆಯೋಜಿಸಿದ್ದ, ಲೇಖಕರಾದ ಅಗಸ್ತ್ಯ ಹಾಗೂ ಕಲೈ ಸೆಲ್ವಿ ಅವರು ಅನುವಾದಿಸಿರುವ ‘ಸಂಚುಗಾರ ಸಂಘ ಪರಿವಾರ’ ಕೃತಿಯ 2ನೇ ಮುದ್ರಣ ಬಿಡುಗಡೆ ಹಾಗೂ ‘ದೇಶಭಕ್ತರ ರಾಷ್ಟ್ರೀಯತೆ ಮತ್ತು ಜನರ ಮುಂದಿರುವ ಸವಾಲುಗಳು’ ವಿಚಾರ ಸಂಕಿರಣದಲ್ಲಿ ಅವರು ಮಾತನಾಡಿದರು.

‘ನ್ಯಾಯಾಧೀಶರ ಕೈಯಲ್ಲಿ ಆರ್‌ಎಸ್‌ಎಸ್‌ನವರ ಪೆನ್ನುಗಳಿವೆ. ಅವು ಅದ್ಭುತವಾಗಿ ತೀರ್ಪುಗಳನ್ನು ಬರೆಯುತ್ತಿವೆ’ ಎಂದು ದೂರಿದರು.

ADVERTISEMENT

‘ಆರ್‌ಎಸ್‌ಎಸ್‌ ಹಾಗೂ ಬಿಜೆಪಿಯವರು ಭಾರತ ಮಾತಾಕಿ ಜೈ ಎನ್ನುವ ಅಫೀಮನ್ನು ಎಲ್ಲರಿಗೂ ಕುಡಿಸುತ್ತಿದ್ದಾರೆ. 2019ಕ್ಕೆ ನಮ್ಮ ತಿಥಿ ಮಾಡಲು ಸಿದ್ಧತೆ ನಡೆಸಿದ್ದಾರೆ. ದೇಶದಲ್ಲಿ ಮಕ್ಕಳ ಮೇಲೆ ಅತ್ಯಾಚಾರ, ದಲಿತರ ಮೇಲೆ ದೌರ್ಜನ್ಯ ನಡೆಯುತ್ತಿದ್ದರೂ ಪ್ರಧಾನಿ ಮೋದಿ ಮೌನ ವಹಿಸಿದ್ದಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

ಪತ್ರಕರ್ತ ಅಗ್ನಿ ಶ್ರೀಧರ್‌, ‘ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಧರ್ಮಸ್ಥಳಕ್ಕೆ ಭೇಟಿ ನೀಡಿ, ಬಿಳಿ ವಸ್ತ್ರ ಹಾಕಿದ್ದರು. ಇದು ಮೃದು ಹಿಂದುತ್ವವಾದ. ಗಡುಸು ಹಿಂದುತ್ವವಾದ ವಿರುದ್ಧ ಹೋರಾಟ ಮಾಡಬಹುದು. ಆದರೆ, ಈ ಮೃದು ಹಿಂದುತ್ವವನ್ನು ಎದುರಿಸಲು ಸಾಧ್ಯವಾಗುವುದಿಲ್ಲ. ಎಂ.ಎಂ.ಕಲಬುರ್ಗಿ ಹಂತಕರು ಯಾರು ಎಂಬುದು ಕಾಂಗ್ರೆಸ್‌ನ ಮೂವರು ಸಚಿವರಿಗೆ ಗೊತ್ತಿದ್ದರೂ ಯಾವುದೇ ಲಾಭವಿಲ್ಲ ಎಂದು ಸುಮ್ಮನಿದ್ದಾರೆ’ ಎಂದರು.

**

ಬ್ರಾಹ್ಮಣರು ಜನಿವಾರ ಬಿಟ್ಟರೂ ಜರ್ನಲಿಸಂ ಬಿಡುವುದಿಲ್ಲ. ಶೇಕಡ 95ರಷ್ಟು ಬ್ರಾಹ್ಮಣ ಪತ್ರಕರ್ತರು ವಿಧಾನಸೌಧದ 3ನೇ ಮಹಡಿಯಲ್ಲಿ ಇರುತ್ತಾರೆ
–ವಿ.ಟಿ.ರಾಜಶೇಖರ್, ಪತ್ರಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.