ADVERTISEMENT

ಕೇಂದ್ರ ಸಚಿವರ ಕಾಲಿಗೆ ಬೀಳಲು ಸಿದ್ಧ

ಕಾವೇರಿ ಸಂಕಷ್ಟ: ದೇವೇಗೌಡ-ಜಗದೀಶ ಶೆಟ್ಟರ್ ಮಾತುಕತೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2013, 19:59 IST
Last Updated 8 ಜನವರಿ 2013, 19:59 IST
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಂಗಳವಾರ `ಕೃಷ್ಣಾ'ದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಿ ಕಾವೇರಿ ನದಿ ನೀರಿನ ವಿಚಾರವಾಗಿ ಚರ್ಚಿಸಿದರು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಚಿತ್ರದಲ್ಲಿದ್ದಾರೆ
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಮಂಗಳವಾರ `ಕೃಷ್ಣಾ'ದಲ್ಲಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಿ ಕಾವೇರಿ ನದಿ ನೀರಿನ ವಿಚಾರವಾಗಿ ಚರ್ಚಿಸಿದರು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಚಿತ್ರದಲ್ಲಿದ್ದಾರೆ   

ಬೆಂಗಳೂರು: ರಾಜ್ಯದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆ ಇರುವುದರಿಂದ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂಬ ಅಂಶವನ್ನು ಕಾವೇರಿ ಉಸ್ತುವಾರಿ ಸಮಿತಿ (ಸಿಎಂಸಿ) ಸಭೆಗೆ ಮನವರಿಕೆ ಮಾಡಿಕೊಡಬೇಕು ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ಅವರು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ'ದಲ್ಲಿ ಜಗದೀಶ ಶೆಟ್ಟರ್ ಅವರನ್ನು ಭೇಟಿಯಾಗಿ ಕಾವೇರಿ ನದಿ ನೀರಿನ ವಿಚಾರವಾಗಿ ಸಮಾಲೋಚಿಸಿದ ಅವರು, ಇದೇ 10ರಂದು ನಡೆಯುವ ಸಿಎಂಸಿ ಸಭೆಯಲ್ಲಿ ರಾಜ್ಯದಲ್ಲಿನ ವಸ್ತುಸ್ಥಿತಿ ತಿಳಿಸಬೇಕು. ಯಾವುದೇ ಕಾರಣಕ್ಕೂ ನೀರು ಬಿಡಬಾರದು ಎಂದು ಆಗ್ರಹಿಸಿದರು.

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ನಿಯೋಗ ಪ್ರಧಾನಿ  ಸಿಂಗ್ ಅವರನ್ನು ಭೇಟಿ ಮಾಡಲು ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರ ಸಚಿವರು ನೆರವಾಗಬೇಕು ಎಂದು ಒತ್ತಾಯಿಸಿದರು.

`ಕೇಂದ್ರ ಸರ್ಕಾರದ ಸಚಿವರ ಕಾಲಿಗೆ ನಮಸ್ಕರಿಸಿ ಮನವಿ ಮಾಡುತ್ತೇನೆ. ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಆಗಿರುವ ಅನ್ಯಾಯವನ್ನು ಪ್ರಧಾನಿ ಅವರಿಗೆ ಮನವರಿಕೆ ಮಾಡಿಕೊಡಲಿ' ಎಂದರು. `ಕೇಂದ್ರದ ಮಾಜಿ ಸಚಿವ ಎಸ್.ಎಂ.ಕೃಷ್ಣ ಅವರನ್ನು ಭೇಟಿ ಮಾಡಲು ಸಿದ್ಧ. ಕೃಷ್ಣ ಅವರೇ ನೇತೃತ್ವ ವಹಿಸಿ ಪ್ರಧಾನಿ ಬಳಿಗೆ ನಿಯೋಗವನ್ನು ತೆಗೆದುಕೊಂಡು ಹೋಗಲಿ' ಎಂದು ಕೋರಿದರು. ಜಲಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ, ಕಾನೂನು ಸಚಿವ ಎಸ್. ಸುರೇಶ್‌ಕುಮಾರ್ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.