ADVERTISEMENT

ಕೊನೆಯ 5 ಟೆಲಿಗ್ರಾಂ ವಿವರ ಕೇಂದ್ರ ಕಚೇರಿಗೆ

​ಪ್ರಜಾವಾಣಿ ವಾರ್ತೆ
Published 15 ಜುಲೈ 2013, 19:50 IST
Last Updated 15 ಜುಲೈ 2013, 19:50 IST

ಬೆಂಗಳೂರು: ಟೆಲಿಗ್ರಾಂ ಸೇವೆಯ ಕೊನೆಯ ದಿನವಾದ ಭಾನುವಾರ ಸ್ವೀಕರಿಸಿದ ಸಂದೇಶಗಳನ್ನು ವಿಲೇವಾರಿ ಮಾಡುವ ಪ್ರಕ್ರಿಯೆ ನಗರದ ಕಬ್ಬನ್ ರಸ್ತೆಯ ಬಿಎಸ್‌ಎನ್‌ಎಲ್ ಕಚೇರಿಯ ಟೆಲಿಗ್ರಾಂ ವಿಭಾಗದಲ್ಲಿ ಸೋಮವಾರ ಜೋರಾಗಿತ್ತು. ಕೊನೆಯ ಐದು ಸಂದೇಶಗಳನ್ನು ಕಳಿಸಿದವರ ವಿವರಗಳನ್ನು ನವದೆಹಲಿಯ ಟೆಲಿಗ್ರಾಂ ಕೇಂದ್ರ ಕಚೇರಿಗೆ ಕಳಿಸಲಾಗಿದೆ ಎಂದು ಬಿಎಸ್‌ಎನ್‌ಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ನಗರದಲ್ಲಿ ಸ್ವೀಕರಿಸಿದ ಒಟ್ಟು 1,227 ಟೆಲಿಗ್ರಾಂ ಹಾಗೂ 160 ಫೋನೊಗ್ರಾಂ ಸಂದೇಶಗಳ ಪೈಕಿ 400 ಸಂದೇಶಗಳನ್ನು ಕಳಿಸುವುದು ಇನ್ನೂ ಬಾಕಿ ಉಳಿದಿದೆ. ಇತರೆ ನಗರಗಳಿಂದ ಬೆಂಗಳೂರಿಗೆ ಬಂದಿರುವ ಸುಮಾರು 300 ಸಂದೇಶಗಳನ್ನು ಸೋಮವಾರ ಸ್ವೀಕರಿಸಲಾಗಿದೆ. ಈ ಸಂದೇಶಗಳನ್ನು ವಿಳಾಸದಾರರಿಗೆ ಅಂಚೆ ಮೂಲಕ ಕಳಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

`ಕೊನೆಯ ಐದು ಟೆಲಿಗ್ರಾಂ ಸಂದೇಶಗಳನ್ನು ಕಳಿಸಿದವರ ಹೆಸರು ಹಾಗೂ ವಿವರಗಳನ್ನು ಕಳಿಸುವಂತೆ ಟೆಲಿಗ್ರಾಂ ಕೇಂದ್ರ ಕಚೇರಿಯಿಂದ ನಿರ್ದೇಶನ ಬಂದಿತ್ತು. ದೇಶದ ಎಲ್ಲ ಟೆಲಿಗ್ರಾಂ ಕಚೇರಿಗಳಿಂದ ಕಳಿಸಿದ ಕೊನೆಯ ಐದು ಸಂದೇಶಗಳ ವಿವರಗಳನ್ನು ಸಂರಕ್ಷಿಸುವುದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ ಸಚಿವಾಲಯದ ಉದ್ದೇಶವಾಗಿದೆ. ಹೀಗಾಗಿ ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಟೆಲಿಗ್ರಾಂ ಕಳಿಸಿದ ಕೊನೆಯ ಐದು ಮಂದಿಯ ವಿವರಗಳನ್ನು ಕೇಂದ್ರ ಕಚೇರಿಗೆ ಕಳಿಸಲಾಗಿದೆ' ಎಂದು ಬಿಎಸ್‌ಎನ್‌ಎಲ್ ನಗರ ಟೆಲಿಗ್ರಾಂ ವಿಭಾಗದ ಹಿರಿಯ ವಿಭಾಗೀಯ ಮೇಲ್ವಿಚಾರಕ ಆರ್.ಜೆ.ಅನಿಲ್ ಕುಮಾರ್ ತಿಳಿಸಿದರು.

`ರಾತ್ರಿ 9 ಗಂಟೆಗೆ ವೈಷ್ಣವಿ ಕಾಮತ್ ಎಂಬ ವಿದ್ಯಾರ್ಥಿನಿ ಕೊನೆಯ ಟೆಲಿಗ್ರಾಂ ಸಂದೇಶ ಕಳಿಸಿದರು. ಈ ಮೂಲಕ ನಗರ ಟೆಲಿಗ್ರಾಂ ಕಚೇರಿಯಲ್ಲಿ ಸಂದೇಶ ಕಳಿಸಿದ ಕೊನೆಯವರು ಎಂಬ ದಾಖಲೆ ಅವರದ್ದಾಯಿತು. ಕೊನೆಯ ಐದು ಮಂದಿ ಕಳಿಸಿದ ಸಂದೇಶಗಳು ಏನು ಮತ್ತು ಆ ಸಂದೇಶಗಳನ್ನು ಎಲ್ಲಿಗೆ ಕಳಿಸಲಾಯಿತು ಎಂಬ ಅಂಶಗಳನ್ನು ಬಹಿರಂಗ ಪಡಿಸುವುದು ಟೆಲಿಗ್ರಾಂ ಕಾಯ್ದೆಗೆ ವಿರುದ್ಧವಾದುದು. ಹೀಗಾಗಿ ಆ ವಿವರಗಳನ್ನು ಬಹಿರಂಗ ಪಡಿಸುವಂತಿಲ್ಲ' ಎಂದರು.

`ನಗರ ಟೆಲಿಗ್ರಾಂ ವಿಭಾಗದಲ್ಲಿ 26 ಮಂದಿ ಕೆಲಸ ಮಾಡುತ್ತಿದ್ದೇವೆ. ನಮ್ಮನ್ನು ಇದೇ ಕಚೇರಿಯ ಇಆರ್‌ಪಿ, ಗ್ರಾಹಕ ಸೇವಾ ವಿಭಾಗ ಸೇರಿದಂತೆ ವಿವಿಧ ವಿಭಾಗಗಳಿಗೆ ನಿಯೋಜನೆ ಮಾಡಲಾಗಿದೆ. ಸ್ವೀಕರಿಸಿರುವ ಸಂದೇಶಗಳ ವಿಲೇವಾರಿಗಾಗಿ ಇನ್ನೂ ಎರಡು ಮೂರು ದಿನಗಳು ಬೇಕಾಗುತ್ತದೆ.

ವಿಭಾಗದ ಎಲ್ಲ ವಿವರಗಳ ದಾಖಲಾತಿ ಹಾಗೂ ದಾಖಲೆಗಳ ಸಂರಕ್ಷಣೆಯ ಕೆಲಸಕ್ಕಾಗಿ ಸುಮಾರು 15 ದಿನಗಳು ಬೇಕಾಗುತ್ತದೆ. ಈ ಎಲ್ಲ ಕಾರ್ಯಗಳನ್ನು ಮುಗಿಸಿ ಬೇರೆ ಬೇರೆ ವಿಭಾಗಗಳಲ್ಲಿ ಸೇವೆಗೆ ಹಾಜರಾಗುತ್ತೇವೆ' ಎಂದು ವಿಭಾಗದ ಮತ್ತೊಬ್ಬ ಹಿರಿಯ ವಿಭಾಗೀಯ ಮೇಲ್ವಿಚಾರಕ ಶ್ರೀರಾಮ್ ತಿಳಿಸಿದರು.

ಸಂದೇಶ ಕಳಿಸಿದ ಕೊನೆಯ ಐವರು
*ಪಾಪು
*ಶಿವಕುಮಾರ್
*ಯು.ಕೆ.ಪ್ರಬೋಧ್ ಕುಮಾರ್
*ಲಿಯೊನಾರ್ಡ್ ಲಿವೀಸ್
*ವೈಷ್ಣವಿ ಕಾಮತ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.