ADVERTISEMENT

ಕೊನೆ ಗಳಿಗೆಯ ತವಕ ತಲ್ಲಣ

ಬಂಧುವಿನ ಅಂತ್ಯಕ್ರಿಯೆ ಮುಗಿಸಿ ಬಂದ ಮಹಿಳೆಗೆ ಸಿಗಲಿಲ್ಲ ಅವಕಾಶ * ತಾಯಿ ಐಸಿಯುವಿನಲ್ಲಿದ್ದರೂ ಮತ ಹಾಕಲು ಬಂದ ಮಗ

​ಪ್ರಜಾವಾಣಿ ವಾರ್ತೆ
Published 12 ಮೇ 2018, 19:38 IST
Last Updated 12 ಮೇ 2018, 19:38 IST

ಬೆಂಗಳೂರು: ಕೊನೆ ಕ್ಷಣದಲ್ಲಿ ಎದ್ದೋ ಬಿದ್ದು ಮತಗಟ್ಟೆಗೆ ಓಡಿ ಬಂದ ಕೆಲವರು ಮತ ಚಲಾಯಿಸುವ ಅವಕಾಶ ಪಡೆದರೆ, ಇನ್ನು ಕೆಲವರು ಒಂದೆರೆಡು ನಿಮಿಷ ತಡವಾಗಿದ್ದಕ್ಕಾಗಿ ಹಕ್ಕು ಚಲಾಯಿಸುವ ಅವಕಾಶ ಕಳೆದುಕೊಂಡರು.

ಮಗಳ ನೆರವಿನೊಂದಿಗೆ ಮತಗಟ್ಟೆಗೆ ಬಂದ 61 ವರ್ಷದ ಮರಿಯಮ್ಮ ಅವರು ಚಿಕ್ಕಲಸಂದ್ರದ ಸುಬ್ರಹ್ಮಣ್ಯಪುರ ಮುಖ್ಯರಸ್ತೆಯ ಬಳಿಯ ಟ್ರಸ್ಟ್‌ ಆಶ್ರಮ ಶಾಲೆಯಲ್ಲಿ ಹಕ್ಕನ್ನು ಚಲಾಯಿಸಿದರು. ಕೊನೆ ಗಳಿಗೆಯಲ್ಲಿ ಬಂದರೂ ಮತ ಚಲಾಯಿಸುವ ಅವಕಾಶ ಸಿಕ್ಕಿದ್ದರಿಂದ ಆ ಅಜ್ಜಿಯ ಮೊಗದಲ್ಲಿ ಮಂದಹಾಸ ಮೂಡಿತ್ತು.

ಮರಿಯಮ್ಮ ಅವರಿಗೆ ಕಣ್ಣು ಕಾಣಿಸದು. ಕಿವಿಯೂ ಮಂದ. ಇನ್ನೇನು ಮತಯಂತ್ರಗಳನ್ನು ಪೆಟ್ಟಿಗೆಗೆ ತುಂಬಲು ಸಜ್ಜಾಗಿದ್ದ ಮತಗಟ್ಟೆಯ ಅಧಿಕಾರಿಗಳು, ಆ ಹಿರಿಯ ಜೀವದ ಉತ್ಸಾಹ ಕಂಡು ವೋಟು ಹಾಕಲು ಅವಕಾಶ ಕಲ್ಪಿಸಿದರು. 6 ಗಂಟೆಗೆ ಸರಿಯಾಗಿ ಆಕೆ ಮತದಾನ ಮಾಡಿದಾಗ ಮತಗಟ್ಟೆಯಲ್ಲಿ ಚಪ್ಪಾಳೆಯ ಸುರಿಮಳೆ.

ADVERTISEMENT

‘ನಾನು ಎಂದೂ ಮತದಾನ ತಪ್ಪಿಸಿಕೊಂಡಿಲ್ಲ. ಈ ಬಾರಿಯೂ ಮತ ಚಲಾಯಿಸಬೇಕೆಂದು ಛಲದಿಂದ ಬಂದೆ. ಆದರೆ, ಅನಾರೋಗ್ಯದ ಕಾರಣದಿಂದಾಗಿ ಈ ಸಲ ನಾನು ಮತಗಟ್ಟೆಗೆ ಬರುವಾಗ ಸ್ವಲ್ಪ ತಡವಾಯಿತು’ ಎಂದು ಅವರು ತಿಳಿಸಿದರು.

ತಡವಾಗಿ ಬಂದ ತಪ್ಪಿಗೆ ಇನ್ನಿಬ್ಬರು ಮತಗಟ್ಟೆಯ ಗೇಟು ಮುಚ್ಚಿದ್ದನ್ನು ನೋಡಿಕೊಂಡು ಮರಳಬೇಕಾಯಿತು. ಐದು ನಿಮಿಷ ತಡವಾಗಿ ಬಂದ ಕಾರಣಕ್ಕೆ ಅವಕಾಶ ವಂಚಿತರಾದ ಕೆ.ಸಮಂಥಿ (36) ಅವರ ಕಣ್ಣಂಚಿನಲ್ಲಿ ಹತಾಶೆಯ ಹನಿಗಳು ಜಿನುಗಿದ್ದವು.

‘ನಾನು ಬಂಧುವೊಬ್ಬರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಚೆನ್ನೈಗೆ ತೆರಳಿದ್ದೆ. ಸ್ವಲ್ಪ ಮುಂಚೆಯಷ್ಟೇ ಬೆಂಗಳೂರಿಗೆ ಬಂದೆ. ಕದಿರೇನಹಳ್ಳಿಯಲ್ಲಿನ ಮನೆಯನ್ನು ತಲುಪಿ, ತಕ್ಷಣವೇ ಹೊರಟು ಮತಗಟ್ಟೆಗೆ ಬಂದೆ. ಆದರೂ ನನಗೆ ಅವಕಾಶ ಸಿಕ್ಕಿಲ್ಲವಲ್ಲಾ ಎಂದು ಬೇಸರವಾಗುತ್ತಿದೆ. ನನ್ನ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡು ನನಗೊಂದು ಅವಕಾಶ ಕೊಡಬಹುದಿತ್ತು’ ಎಂದು ಅವರು ಬೇಸರದಿಂದ ಹೇಳಿದರು.

‘ನಾನು ಒಮ್ಮೆಯೂ ಮತದಾನದ ಅವಕಾಶವನ್ನು ತಪ್ಪಿಸಿಕೊಂಡವಳಲ್ಲ. ಈ ಬಾರಿಯೂ ಮತದಾನ ಮಾಡಬೇಕೆಂಬ ಆಸೆ ಇತ್ತು. ಅದೇ ಕಾರಣಕ್ಕೆ ಕುಟುಂಬದವರನ್ನು ಚೆನ್ನೈನಲ್ಲೇ ಬಿಟ್ಟು  ಬೆಂಗಳೂರಿಗೆ ಧಾವಿಸಿದ್ದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಖಂಡಿತಾ ಅವಕಾಶ ತಪ್ಪಿಸಿಕೊಳ್ಳುವುದಿಲ್ಲ’ ಎಂದು ಅವರು ಹೇಳಿದರು.

ಆರ್‌.ಶಿವಕುಮಾರ್‌ (38) ಅವರದ್ದೂ ಇದೇ ಕತೆ. ಅವರು ಕಿಮ್ಸ್‌ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾದ ತಮ್ಮ ತಾಯಿಯನ್ನು ತೀವ್ರ ನಿಗಾ ಘಟಕಕ್ಕೆ ಸೇರಿಸಿ, ಅಲ್ಲಿಂದ ನೇರವಾಗಿ ಮತಗಟ್ಟೆಗೆ ಧಾವಿಸಿದ್ದರು. ‘ನನ್ನ ತಾಯಿಗೆ ವಯಸ್ಸಾಗಿದೆ.  ಹರ್ನಿಯ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಅವರು ಮತದಾನ ಮಾಡಲು ಸಾಧ್ಯವಾಗಿಲ್ಲ. ಮತ ಚಲಾಯಿಸುವ ಅವಕಾಶ ಕಳೆದುಕೊಳ್ಳಬಾರದು ಎಂಬ ಕಾರಣಕ್ಕೆ ನಾನು ಇಲ್ಲಿಗೆ ಓಡೋಡಿ ಬಂದೆ. ಆಸ್ಪತ್ರೆಯ ಕೆಲವೊಂದು ರಿವಾಜುಗಳನ್ನು ಪೂರೈಸಬೇಕಾಗಿದ್ದರಿಂದ ಹಾಗೂ ವಾಹನ ದಟ್ಟಣೆಯಲ್ಲಿ ಸಿಲುಕಿಕೊಂಡಿದ್ದರಿಂದ ಸಕಾಲದಲ್ಲಿ ಮತಗಟ್ಟೆಯನ್ನು ತಲುಪಲು ಸಾಧ್ಯವಾಗಿಲ್ಲ’ ಎಂದು ಅವರು ಬೇಸರದಿಂದ ಹೇಳಿದರು.

‘ನನ್ನ ಬಳಿ ಇದ್ದ ಮತದಾರರ ಗುರುತಿನ ಚೀಟಿ ತೋರಿಸಿದರೂ ಹಕ್ಕು ಚಲಾಯಿಸಲು ಅವಕಾಶ ನೀಡಲಿಲ್ಲ’ ಎಂದು ಅವರು ದೂರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.