ADVERTISEMENT

ಕೊಲೆ ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2011, 18:55 IST
Last Updated 18 ಫೆಬ್ರುವರಿ 2011, 18:55 IST

ಬೆಂಗಳೂರು: ಕಾಮಾಕ್ಷಿಪಾಳ್ಯ ಸಮೀಪದ ಅಗ್ರಹಾರ ದಾಸರಹಳ್ಳಿಯಲ್ಲಿ ನಡೆದಿದ್ದ ರೌಡಿ ವಿಶ್ವನಾಥ ಅಲಿಯಾಸ್ ವಿಶ್ವ (31) ಎಂಬಾತನ ಕೊಲೆ ಪ್ರಕರಣದ ಐದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ವೃಷಭಾವತಿ ನಗರದ ಆರ್.ಮುನಿರಾಜ (29), ಗೋವಿಂದರಾಜನಗರದ ಎಂ.ಸಿ.ಚಿಕ್ಕಣ್ಣ (26), ಅಂಜನಾನಗರದ ಕೆ.ಜಿ.ಕಾಂತರಾಜ್ (22), ಕೆ.ಸಚಿನ್ (20) ಮತ್ತು ಕಾಮಾಕ್ಷಿಪಾಳ್ಯದ ವಿ.ನಿತಿನ್‌ಕುಮಾರ್ (20) ಬಂಧಿತರು.

ಆರೋಪಿ ಮುನಿರಾಜನ ಸಂಬಂಧಿಕರೊಬ್ಬರ ನಿವೇಶನದ ಒಡೆತನದ ವಿಷಯವಾಗಿ ವಿವಾದ ಸೃಷ್ಟಿಯಾಗಿತ್ತು. ಈ ವಿವಾದ ಸೃಷ್ಟಿಸಿದ್ದ ವ್ಯಕ್ತಿಯ ಜತೆ ವಿಶ್ವನಾಥ, ಮುನಿರಾಜನ ಸಂಬಂಧಿಕರ ಪರವಾಗಿ ಮಾತನಾಡಿ ಸಮಸ್ಯೆ ಬಗೆಹರಿಸಿಕೊಟ್ಟಿದ್ದ. ವಿವಾದ ಇತ್ಯರ್ಥಗೊಳಿಸಿದ್ದಕ್ಕೆ ಪ್ರತಿಯಾಗಿ ಹಣ ಕೊಡುವಂತೆ ಆತ ಮುನಿರಾಜ ಮತ್ತು ಆತನ ಸಂಬಂಧಿಕರಿಗೆ ಪೀಡಿಸುತ್ತಿದ್ದ. ಹಣ ನೀಡದಿದ್ದರೆ ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದ.

ಇದರಿಂದ ಕೋಪಗೊಂಡ ಮುನಿರಾಜ ಇತರೆ ಆರೋಪಿಗಳ ಜತೆ ಸೇರಿ ಸಂಚು ರೂಪಿಸಿ ಫೆ.11ರಂದು ವಿಶ್ವನಾಥನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳು, ಕಾರು ಹಾಗೂ ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರಕರಣದ ಮತ್ತೊಬ್ಬ ಆರೋಪಿ ಶ್ರೇಯಸ್ ಎಂಬಾತ ತಲೆಮರೆಸಿಕೊಂಡಿದ್ದು, ಆತನ ಪತ್ತೆ ಕಾರ್ಯ ಮುಂದುವರೆದಿದೆ ಎಂದು ಅವರು ಹೇಳಿದ್ದಾರೆ.ಪಶ್ಚಿಮ ವಿಭಾಗದ ಡಿಸಿಪಿ ಎಸ್.ಎನ್.ಸಿದ್ದರಾಮಪ್ಪ ಅವರ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಎನ್.ಎಚ್.ರಾಮಚಂದ್ರಯ್ಯ ಮತ್ತು ಸಿಬ್ಬಂದಿ ತಂಡ ಆರೋಪಿಗಳನ್ನು ಬಂಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.