ಹೊಸಕೋಟೆ: ಆವಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಬೈಯಪ್ಪನಹಳ್ಳಿ ಬಳಿ ಮಾ.10 ರಂದು ವರದಿಯಾದ ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು ಈ ಸಂಬಂಧ ಕೊಲೆಯಾದ ವ್ಯಕ್ತಿಯ ಅಕ್ಕ ಸೇರಿದಂತೆ ಮೂವರು ಆರೋಪಿಗಳನ್ನು ಶನಿವಾರ ಬಂಧಿಸಿದ್ದಾರೆ.
ಬೆಂಗಳೂರಿನ ಹೆಬ್ಬಾಳ ಬಳಿಯ ಮರಿಯಣ್ಣಪಾಳ್ಯದ ವಾಸಿ ವಿಲಿಯಂ ಪೀಟರ್ (38) ಕೊಲೆಯಾದ ವ್ಯಕ್ತಿ. ಈತನ ಅಕ್ಕ, ಬೆಂಗಳೂರು ಪೂರ್ವ ತಾಲ್ಲೂಕು ಯರ್ರಪ್ಪನ ಹಳ್ಳಿಯ ಸ್ಟೆನಿಸ್‌ಲಾಸ್ ಮೇರಿ (47), ಅಮೃತ ನಗರದ ಎಸ್.ಸುಶೀಲ್ ಕುಮಾರ್ (25), ಕನಕಪುರ ರಸ್ತೆ ತಟಗುಪ್ಪೆಯ ಸಿಜಾನ್ ಫಿಲಿಫ್ ರಾಜ್ (26) ಬಂಧಿತರು.
ಆಸ್ತಿ ವಿಚಾರದಲ್ಲಿ 15 ವರ್ಷಗಳಿಂದ ವಿಲಿಯಂ ಪೀಟರ್, ಆತನ ಅಣ್ಣ ಹೃದಯರಾಜ್ ಮತ್ತು ತಂಗಿ ಸ್ಟೆನಿಸ್‌ಲಾಸ್ ಮೇರಿ ಜಗಳ ಕಾಯುತ್ತಿದ್ದರು. ಇದೇ ಸಂಬಂಧ ಸ್ಟೆನಿಸ್‌ಲಾಸ್ ಮೇರಿ ತನ್ನ ಮಗ ಸಂತೋಷ್ ಹಾಗೂ ಆತನ ಸ್ನೇಹಿತರ ಜತೆಗೂಡಿ ವಿಲಿಯಂ ಪೀಟರ್‌ನನ್ನು ಕೊಲೆ ಮಾಡಲು ಸಂಚು ರೂಪಿಸಿದಳು.
ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿರುವ ಪೊಲೀಸರು ತಲೆ ತಪ್ಪಿಸಿಕೊಂಡಿರುವ ಆರೋಪಿಗಳಾದ ಸಂತೋಷ್ ಮತ್ತು ಮುನಿರಾಜುವಿನ ಶೋಧ ನಡೆಸಿದ್ದಾರೆ.
ಎಸ್.ಪಿ ಡಾ.ಮಹೇಶ್ ಅವರ ಮಾರ್ಗದರ್ಶನದಲ್ಲಿ ಸಿಪಿಐ ಎಂ.ಮಲ್ಲೇಶ್, ಪಿಎಸ್‌ಐ ಎ.ಸುಧಾಕರ ರೆಡ್ಡಿ, ಸಿಬ್ಬಂದಿಗಳಾದ ಪ್ರಭು, ಲಕ್ಷ್ಮಣ್, ದತ್ತ, ಮೌಲ, ಮಂಜು ಹಾಗೂ ಮಂಜುನಾಥ ರೆಡ್ಡಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.