ADVERTISEMENT

ಕೋಟದಲ್ಲಿ ವಿಶೇಷ ಸರ್ವಸದಸ್ಯರ ಸಭೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2018, 20:06 IST
Last Updated 12 ಮಾರ್ಚ್ 2018, 20:06 IST
ಕೋಟದಲ್ಲಿ ವಿಶೇಷ ಸರ್ವಸದಸ್ಯರ ಸಭೆಗೆ ಒತ್ತಾಯ
ಕೋಟದಲ್ಲಿ ವಿಶೇಷ ಸರ್ವಸದಸ್ಯರ ಸಭೆಗೆ ಒತ್ತಾಯ   

ಬೆಂಗಳೂರು: ವಿಶೇಷ ಸರ್ವಸದಸ್ಯರ ಸಭೆಯನ್ನು ಉಡುಪಿ ಜಿಲ್ಲೆಯ ಕೋಟದಲ್ಲಿಯೇ ನಡೆಸಬೇಕು ಎಂದು ಒತ್ತಾಯಿಸಿ ಕನ್ನಡ ಸಾಹಿತ್ಯಾಸಕ್ತರ ವೇದಿಕೆ ಸದಸ್ಯರು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರಿಗೆ ನಗರದಲ್ಲಿ ಸೋಮವಾರ ಮನವಿ ಸಲ್ಲಿಸಿದರು.

ವೇದಿಕೆಯ ಅಧ್ಯಕ್ಷ ಪಾಲನೇತ್ರ, ‘ಕೋಟ ಕರ್ನಾಟಕದಲ್ಲಿಯೇ ಇದೆ. ಪರಿಷತ್ತಿನ ಎಲ್ಲ ಕಾರ್ಯಕ್ರಮಗಳು ಬೆಂಗಳೂರಿನಲ್ಲಿಯೇ ನಡೆಯಬೇಕು ಎಂದು ಒತ್ತಾಯ ಮಾಡುವುದು ಸರಿಯಲ್ಲ. ಇದರಿಂದ ಗಡಿಭಾಗದ ಕನ್ನಡಿಗರಿಗೆ ಅಪಮಾನ ಮಾಡಿದಂತಾಗುತ್ತದೆ’ ಎಂದರು.

‘ದೂರದ ಊರಿಗೆ ಹೋಗಲು ಕಷ್ಟವಾಗುತ್ತದೆ ಎಂಬ ನೆಪ ನೀಡಿ ನಗರದ ಕೆಲ ಸದಸ್ಯರು ಸಭೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ನಗರದಲ್ಲಿ ಸಭೆ ಆಯೋಜಿಸಿದರೆ, ಬೀದರ್ ಹಾಗೂ ಬೆಳಗಾವಿಯ ಪರಿಷತ್ತಿನ ಸದಸ್ಯರಿಗೆ ತೊಂದರೆಯಾಗುವುದಿಲ್ಲವೇ’ ಎಂದು ಪ್ರಶ್ನಿಸಿದರು.

ADVERTISEMENT

ಕಸಾಪದ ನಿಯಮಾವಳಿಗೆ ತಿದ್ದುಪಡಿ ತರಬೇಕು ಎಂದು ಮನು ಬಳಿಗಾರ್ ವರದಿ ಸಿದ್ಧಪಡಿಸಿದ್ದು, ವಿಶೇಷ ಸರ್ವಸದಸ್ಯರ ಸಭೆಯಲ್ಲಿ ಮಂಡಿಸಲಿದ್ದಾರೆ. ಆ ವರದಿಯನ್ನು ಒಪ್ಪುವುದು ಬಿಡುವುದು ಸಭೆಯ ಸದಸ್ಯರಿಗೆ ಬಿಟ್ಟ ವಿಚಾರ. ಆ ವಿಷಯ ಗೊತ್ತಿದ್ದರೂ ಅಧ್ಯಕ್ಷರ ಮೇಲೆ ಕೆಲವರು ಇಲ್ಲಸಲ್ಲದ ಆರೋಪ ಮಾಡುತ್ತಿರುವುದು ಸರಿಯಲ್ಲ ಎಂದು ಖಂಡಿಸಿದರು.

‘ಈಗಿನ ಕಾಲಕ್ಕೆ ತಕ್ಕಂತೆ ಕಸಾಪ ನಿಯಮಾವಳಿಗಳಿಗೆ ತಿದ್ದುಪಡಿ ತರುವುದು ಅವಶ್ಯ. 500 ಸದಸ್ಯರಿರುವ ಕಡೆ ಮತಕೇಂದ್ರ ತೆರೆಯುವುದು ಹಾಗೂ ಚುನಾವಣೆಯಿಂದ ಉಂಟಾಗುವ ಆರ್ಥಿಕ ಹೊರೆ ತಗ್ಗಿಸಬೇಕು ಎಂಬ ನಿರ್ಣಯ ಕೈಗೊಳ್ಳುವುದು ಸಮಂಜಸ’ ಎಂದು ವೇದಿಕೆಯ ರಾ.ನಂ.ಚಂದ್ರಶೇಖರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.