ADVERTISEMENT

ಕೋಶಿಸ್ ಆಸ್ಪತ್ರೆಯಲ್ಲಿ :ನೆಫ್ರೊ ಪ್ಲಸ್ ಘಟಕ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಬೆಂಗಳೂರು: ದೇಶದ ಪ್ರಮುಖ ಕಿಡ್ನಿ ಆರೈಕೆ ಕ್ಲಿನಿಕ್‌ಗಳ ಜಾಲ `ನೆಫ್ರೊ ಪ್ಲಸ್~ ಇದೀಗ ನಗರದ ರಾಮಮೂರ್ತಿ ನಗರದ ಕೋಶಿಸ್ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಮೂತ್ರಪಿಂಡ ಆರೈಕೆ ಘಟಕವನ್ನು ಪ್ರಾರಂಭಿಸಿದ್ದು, ಮುಂದಿನ ಆರು ತಿಂಗಳಲ್ಲಿ ರಾಜ್ಯದ ವಿವಿಧ ಕಡೆಗಳಲ್ಲಿ ಇಂತಹ ಇನ್ನೂ ಆರು ಘಟಕಗಳನ್ನು ಪ್ರಾರಂಭಿಸಲು ಉದ್ದೇಶಿಸಿದೆ.

ಕೋಶಿಸ್ ಆಸ್ಪತ್ರೆಯ ಪಾಲುದಾರಿಕೆಯೊಂದಿಗೆ ಆರಂಭಿಸಿರುವ ಈ ಘಟಕವು ಪ್ರಸ್ತುತ 10 ಹಾಸಿಗೆಗಳ ಸಾಮರ್ಥ್ಯವನ್ನು ಹೊಂದಿದ್ದು, ಗರಿಷ್ಠ 20 ಹಾಸಿಗೆಗಳ ಸಾಮರ್ಥ್ಯಕ್ಕೆ ವಿಸ್ತರಿಸುವ ಗುರಿ ಹೊಂದಲಾಗಿದೆ.
ತನ್ನದೇ ಆದ ಕ್ಲಿನಿಕ್‌ಗಳನ್ನು ಹೊಂದಿರುವ ಸಂಸ್ಥೆಯು, ರಾಜ್ಯದ ಪ್ರಮುಖ ಆಸ್ಪತ್ರೆಗಳು, ವೈದ್ಯಕೀಯ ಸಂಸ್ಥೆಗಳ ಜೊತೆಗೆ ಒಡಂಬಡಿಕೆ ಮಾಡಿಕೊಂಡು ಇಂತಹ ಕ್ಲಿನಿಕ್‌ಗಳನ್ನು ಸ್ಥಾಪಿಸುತ್ತಿದೆ.

`ಕಿಡ್ನಿ ಸಂಬಂಧಿತ ಸಮಸ್ಯೆ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅದರ ಆರೈಕೆ ಘಟಕಗಳ ಅಗತ್ಯತೆ ಹೆಚ್ಚಿದೆ. ಇತರೆ ರಾಜ್ಯಗಳಲ್ಲಿ ಸಿಕ್ಕ ಪ್ರೋತ್ಸಾಹದಿಂದ ಅಂಥದೇ ಗುಣಮಟ್ಟದ ಸೇವೆಯನ್ನು ಕರ್ನಾಟಕದ ಜನರಿಗೂ ಒದಗಿಸಲು ಬದ್ಧರಾಗಿದ್ದೇವೆ ~ ಎಂದು ನೆಫ್ರೋ ಪ್ಲಸ್‌ನ ಸ್ಥಾಪಕ ಮತ್ತು ಸಿಇಒ ವಿಕ್ರಂ ವುಪ್ಪಲಾ ತಿಳಿಸಿದ್ದಾರೆ.

`ನೆಫ್ರೊ ಪ್ಲಸ್~ ಮೂತ್ರಪಿಂಡ ಆರೈಕೆ ಸೇವೆಗೆ ಹೊಸ ವ್ಯಾಖ್ಯಾನ ಬರೆಯಲು ಬದ್ಧವಾಗಿದೆ. ಉತ್ತಮ ಸೇವೆಯೊಂದಿಗೆ ರೋಗಿಗಳು ಸಹಜ ಜೀವನ ನಡೆಸುವ ವಿಶ್ವಾಸ ಮೂಡಿಸಲಿದ್ದೇವೆ. ಸೋಂಕು ವ್ಯಾಪಿಸದಂತೆ ಜಾಗ್ರತೆ ವಹಿಸಲಾಗುವುದು~ ಎಂದು ಸ್ವತಃ ಕಳೆದ 15 ವರ್ಷಗಳಿಂದ ಡಯಾಲಿಸಿಸ್ ರೋಗಿಯೂ ಆಗಿರುವ `ನೆಫ್ರೋ ಪ್ಲಸ್~ನ ಸಹ ಸ್ಥಾಪಕ ಕಮಲ್ ಷಾ ಅಭಿಪ್ರಾಯಪಟ್ಟರು.

ಒಂದು ಅಂದಾಜಿನ ಪ್ರಕಾರ, ದೇಶದಲ್ಲಿ ಸುಮಾರು 20 ಲಕ್ಷ ರೋಗಿಗಳಿದ್ದು, ವಾರ್ಷಿಕ ಒಂದು ಲಕ್ಷ ರೋಗಿಗಳು ಮಧುಮೇಹ ಮತ್ತು ಅಧಿಕ ರಕ್ತದೊತ್ತಡದಿಂದ ಸೇರ್ಪಡೆಯಾಗುತ್ತಿದ್ದಾರೆ. ಪ್ರಸ್ತುತ ಡಯಾಲಿಸಿಸ್ ಸೇವೆಯೂ ಭಾರತದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿಲ್ಲ.
 
ಮೂರನೇ ಒಂದರಷ್ಟು ರೋಗಿಗಳು ಎಚ್‌ಐವಿ, ಹೆಪಟಿಟಿಸ್-ಸಿ, ಹೆಪಟಿಟಿಸ್-ಬಿ ಸೋಂಕುಗಳಿಗೂ ಒಳಗಾಗುವ ಭೀತಿ ಇರುತ್ತದೆ. ಇಂತಹ ಸನ್ನಿವೇಶದಲ್ಲಿ ಕೈಗೆಟುಕುವ ದರದಲ್ಲಿ ರೋಗಿಗಳಿಗೆ ಗುಣಮಟ್ಟದ ಸೇವೆ ಒದಗಿಸುವುದು ಸಂಸ್ಥೆಯ ಧ್ಯೇಯವಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT