ADVERTISEMENT

ಕ್ಯಾಸಲ್ ಬೀದಿಯಲ್ಲಿ ಮತ್ತೆ ಕಲುಷಿತ ನೀರು

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2011, 20:10 IST
Last Updated 4 ಸೆಪ್ಟೆಂಬರ್ 2011, 20:10 IST

ಬೆಂಗಳೂರು:  ನಗರದ ಕ್ಯಾಸಲ್ ಬೀದಿಯ ಮನೆಗಳಿಗೆ ಮತ್ತೆ ಕಲುಷಿತ ನೀರು ಪೂರೈಕೆಯಾಗುತ್ತಿದ್ದು ಜಲಮಂಡಲಿ ಅಧಿಕಾರಿಗಳ ನಿಷ್ಕ್ರಿಯತೆ ಬಗ್ಗೆ ಇಲ್ಲಿನ ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಚರಂಡಿಯಲ್ಲಿ ನೀರು ಕಟ್ಟಿಕೊಂಡ ಪರಿಣಾಮ ಕೊಳಾಯಿಯಲ್ಲಿ ಕಲುಷಿತ ನೀರು ಹರಿದು ಬರುತ್ತಿದೆ. ಈ ಬಗ್ಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಜಲಮಂಡಲಿ ಕೂಡಲೇ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

`ನಾಲ್ಕು ದಿನಗಳಿಂದ ಜಲಮಂಡಲಿ ಪೂರೈಕೆ ಮಾಡುತ್ತಿರುವ ನೀರನ್ನು ನಾವು ಬಳಸುತ್ತಿಲ್ಲ. ಕುಡಿಯುವ ನೀರನ್ನು ಬೇರೆಡೆಯಿಂದ ಖರೀದಿಸುತ್ತಿದ್ದೇವೆ. ರಿಪೇರಿ ಮಾಡುವುದಾಗಿ ಬಂದಿದ್ದ ಜಲಮಂಡಲಿ ಅಧಿಕಾರಿಗಳು ಇದುವರೆಗೆ ಏನನ್ನೂ ಮಾಡಿಲ್ಲ~ ಎಂದು ಕ್ಯಾಸಲ್ ಬೀದಿಯ ನಿವಾಸಿ ಗ್ರೆಗೊರಿ ತಿಳಿಸಿದ್ದಾರೆ.

ಕಲುಷಿತ ನೀರು ಈಗ ಅಪಾರ ಪ್ರಮಾಣದಲ್ಲಿ ಹರಿದು ಬರುತ್ತಿದ್ದು ಕೇವಲ ಬಣ್ಣ ಹಾಗೂ ದುರ್ವಾಸನೆಯಿಂದಲೇ ಇದು ಪತ್ತೆಯಾಗುತ್ತದೆ. `ನೀರಿನಲ್ಲಿ ಸತ್ತ ಇಲಿಯ ವಾಸನೆ ಬರುತ್ತದೆ. ಆದ್ದರಿಂದ ನೀರು ಬಳಸುವುದನ್ನು ಸಂಪೂರ್ಣವಾಗಿ ನಿಲ್ಲಿಸಿದ್ದೇವೆ. ಹೊರಗಿನಿಂದ ನೀರು ಖರೀದಿಸಿ ಬಳಸುತ್ತಿದ್ದೇವೆ~ ಎನ್ನುತ್ತಾರೆ ಮತ್ತೊಬ್ಬ ನಿವಾಸಿ ಗೌತಮ್.

ಸಂಬಂಧಪಟ್ಟ ಜಲಮಂಡಲಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ `ಈಗಾಗಲೇ ನೀರು ಕಲುಷಿತಗೊಳ್ಳದಂತೆ ಕ್ರಮ ಕೈಗೊಳ್ಳಲಾಗಿದೆ. ಇನ್ನೂ ಸಮಸ್ಯೆ ಇದ್ದರೆ ಸೋಮವಾರ ಬೆಳಿಗ್ಗೆ ಪರಿಹರಿಸಲಾಗುವುದು. ಬ್ರಿಗೇಡ್‌ರಸ್ತೆಯಿಂದ ರಿಚ್ಮಂಡ್ ರಸ್ತೆಯವರೆಗೆ 9 ಇಂಚಿನ ಪೈಪ್ ಬದಲು 12 ಇಂಚಿನ ಪೈಪ್ ಅಳವಡಿಕೆಗೆ ಚಿಂತನೆ ನಡೆದಿದೆ. ಆದರೆ ಅಂತಿಮ ನಿರ್ಧಾರ ಜಲಮಂಡಲಿಯ ಮೇಲಾಧಿಕಾರಿಗಳಿಗೆ ಬಿಟ್ಟ ವಿಚಾರ~ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.