ADVERTISEMENT

ಕ್ರಿಕೆಟ್ ಪಂದ್ಯ ವಿರೋಧಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 20:25 IST
Last Updated 25 ಡಿಸೆಂಬರ್ 2012, 20:25 IST

ಬೆಂಗಳೂರು: ಭಾರತ - ಪಾಕಿಸ್ತಾನ ಕ್ರಿಕೆಟ್ ಪಂದ್ಯವನ್ನು ವಿರೋಧಿಸಿ ಶ್ರೀರಾಮಸೇನೆ ಮತ್ತು ಭಾರತ-ಪಾಕ್ ಕ್ರಿಕೆಟ್ ವಿರೋಧಿ ಒಕ್ಕೂಟದ ಸದಸ್ಯರು ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಪಾಕಿಸ್ತಾನದ ಧ್ವಜವನ್ನು ಸುಟ್ಟು ಮಂಗಳವಾರ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಶ್ರಿರಾಮಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್, `ಕ್ರಿಕೆಟ್ ಆಟಕ್ಕೆ ನಮ್ಮ ವಿರೋಧವಿಲ್ಲ. ಆಟಗಳಿಂದ ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಉತ್ತಮಗೊಳ್ಳಲಿದೆ ಎಂದು ಸರ್ಕಾರ ಹೇಳುತ್ತಿದೆ. ಈವರೆಗೆ 171 ಕ್ರಿಕೆಟ್ ಪಂದ್ಯಗಳು ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದಿವೆ. ಆದರೆ, ಭಾರತದ ವಿರುದ್ಧ ದ್ವೇಷ ಸಾಧಿಸುವುದನ್ನು ಪಾಕಿಸ್ತಾನ ಇನ್ನೂ ಬಿಟ್ಟಿಲ್ಲ. ಹೀಗಾಗಿ ಪಾಕಿಸ್ತಾನದಂಥ ಭಯೋತ್ಪಾದಕ ದೇಶದೊಂದಿಗೆ ಕ್ರಿಕೆಟ್ ಪಂದ್ಯ ಆಡುವ ಅಗತ್ಯವಿಲ್ಲ' ಎಂದು ಅವರು ಹೇಳಿದರು.

`ಕಳೆದ ಬಾರಿ ಭಾರತ - ಪಾಕ್ ಪಂದ್ಯ ನಡೆದ ಸಂದರ್ಭದಲ್ಲಿ ವೀಸಾ ಪಡೆದಿದ್ದವರ ಪೈಕಿ 117 ಮಂದಿ ಪಾಕಿಸ್ತಾನಿಯರು ಭಾರತದಲ್ಲೇ ಉಳಿದಿದ್ದಾರೆ. ಈ ಬಾರಿ ಮೂರು ಸಾವಿರ ಮಂದಿ ಪಾಕಿಸ್ತಾನಿಯರಿಗೆ ವೀಸಾ ನೀಡಲಾಗಿದೆ. ಇವರಲ್ಲಿ ಉಗ್ರಗಾಮಿಗಳೂ ಸೇರಿರುವ ಸಾಧ್ಯತೆಗಳಿವೆ ಎಂಬ ಕಾರಣದಿಂದ ಪಂದ್ಯವನ್ನು ವಿರೋಧಿಸುತ್ತಿದ್ದೇವೆ' ಎಂದರು.

`ಪಂದ್ಯಕ್ಕೆ ಭಾರೀ ಪ್ರಮಾಣದ ಕಪ್ಪುಹಣ ಹೂಡಿಕೆಯಾಗಿದೆ. ಲಾಭ ಮಾಡಿಕೊಳ್ಳಲು ಉದ್ಯಮಿಗಳು ಹಾಗೂ ರಾಜಕಾರಣಿಗಳು ಕ್ರಿಕೆಟ್ ಪಂದ್ಯಗಳಿಗೆ ಹಣ ಹೂಡುತ್ತಿದ್ದಾರೆ. ಪಂದ್ಯದಲ್ಲಿ ಯಾರು ಗೆಲ್ಲಲಿದ್ದಾರೆ ಎಂಬುದು ಈಗಾಗಲೇ ನಿಗದಿಯಾಗಿದೆ. ಪಂದ್ಯದಿಂದ ಬೆಟ್ಟಿಂಗ್ ಅವ್ಯವಹಾರವೂ ಹೆಚ್ಚಾಗಿದೆ. ಇಂತಹ ಪಂದ್ಯಗಳಿಂದ ಉಭಯ ದೇಶಗಳ ನಡುವೆ ಸ್ನೇಹ-ವಿಶ್ವಾಸ ಮೂಡಲು ಸಾಧ್ಯವಿಲ್ಲ' ಎಂದರು. `ಮಂಗಳವಾರ ಕ್ರೀಡಾಂಗಣದ ಬಳಿ ಪ್ರತಿಭಟನೆ ನಡೆಸುತ್ತೇವೆ ಎಂಬ ಕಾರಣಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ. ಹೀಗಾಗಿ ನಾವು ಮಾಡಿದ ಪ್ರತಿಭಟನೆ ಫಲ ನೀಡಿದೆ. ಪಂದ್ಯಗಳು ನಡೆಯುವ ಎಲ್ಲ ನಗರಗಳಲ್ಲೂ ಶ್ರೀರಾಮಸೇನೆಯ ಕಾರ್ಯಕರ್ತರು ಪ್ರತಿಭಟನೆ ನಡೆಸಲಿದ್ದಾರೆ' ಎಂದು ತಿಳಿಸಿದರು.

ಪ್ರತಿಭಟನಾಕಾರರನ್ನು ವಶಕ್ಕೆ ತೆಗೆದುಕೊಂಡ ಪೊಲೀಸರು ನಂತರ ಬಿಡುಗಡೆಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.