ADVERTISEMENT

‘ಕ್ರೀಡೆಯಿಂದ ಮಾನಸಿಕ ದೃಢತೆ ಸಾಧ್ಯ’

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2017, 19:37 IST
Last Updated 10 ಡಿಸೆಂಬರ್ 2017, 19:37 IST
ಕ್ರೀಡಾಪಟುಗಳಿಂದ ಜಿ.ಪಿ.ಕೃಪಾ ಅವರು ಜ್ಯೋತಿಯನ್ನು ಸ್ವೀಕರಿಸಿದರು. ಸಮಾಜ ಸೇವಕ ಶ್ರೀನಿವಾಸಮೂರ್ತಿ, ರಮಾದೇವಿ ಇದ್ದರು
ಕ್ರೀಡಾಪಟುಗಳಿಂದ ಜಿ.ಪಿ.ಕೃಪಾ ಅವರು ಜ್ಯೋತಿಯನ್ನು ಸ್ವೀಕರಿಸಿದರು. ಸಮಾಜ ಸೇವಕ ಶ್ರೀನಿವಾಸಮೂರ್ತಿ, ರಮಾದೇವಿ ಇದ್ದರು   

ಬೆಂಗಳೂರು: ‘ಪ್ರತಿ ಶಾಲೆಯಲ್ಲಿ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳನ್ನು ಹೇಳಿಕೊಡಬೇಕು. ಅದರಿಂದ ಮಕ್ಕಳು ದೈಹಿಕ ಹಾಗೂ ಮಾನಸಿಕ ಸದೃಢರಾಗುತ್ತಾರೆ’ ಎಂದು ಭಾರತೀಯ ಥ್ರೊಬಾಲ್ ತಂಡದ ನಾಯಕಿ ಜಿ.ಪಿ. ಕೃಪಾ ಸಲಹೆ ನೀಡಿದರು.

ಮಹದೇವಪುರ ಕ್ಷೇತ್ರದ ಗೆದ್ದಲಹಳ್ಳಿಯಲ್ಲಿನ ನ್ಯೂ ಬಾಲ್ಡ್‌ವಿನ್ ಪ್ರೌಢಶಾಲಾ ಮಕ್ಕಳ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

‘ಶಿಕ್ಷಕರು ಹಾಗೂ ಪೋಷಕರು ಮಕ್ಕಳಿಗೆ ಓದುವುದಕ್ಕೆ ಒತ್ತಾಯ ಮಾಡುವಂತೆಯೇ ಕ್ರೀಡೆಯಲ್ಲಿ ಭಾಗವಹಿಸು ಎಂದೂ ಹೇಳಬೇಕು. ಹಾಗಾದಾಗ ಮಾತ್ರ ಮಕ್ಕಳು ಕ್ರೀಡಾ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ’ ಎಂದರು.

ADVERTISEMENT

‘ಮಕ್ಕಳು ಹೆಚ್ಚು ಹೊತ್ತು ಕಂಪ್ಯೂಟರ್‌ ಮುಂದೆ ಕುಳಿತುಕೊಳ್ಳುವುದನ್ನೇ ಈಗಿನ ಪೋಷಕರು ಹೆಚ್ಚು ಇಷ್ಟಪಡುತ್ತಾರೆ. ಮಕ್ಕಳು ಕೇವಲ ಪುಸ್ತಕದ ಹುಳುಗಳಾದರೆ ದೈಹಿಕವಾಗಿ ಬಲಹೀನರಾಗುತ್ತಾರೆ. ಅಲ್ಲದೆ, ಸಾಮಾಜಿಕವಾಗಿ ತೆರೆದುಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದು ಎಚ್ಚರಿಸಿದರು.

ಶೈಕ್ಷಣಿಕ ನಿರ್ದೇಶಕಿ ರಮಾದೇವಿ ಹಾಗೂ ಕಾರ್ಯದರ್ಶಿ ಕೆ.ಆಂಜನಪ್ಪ ಅವರು ಕ್ರೀಡಾಕೂಟದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು.
ಕಳೆದ ವರ್ಷ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ‌ ಭಾಗವಹಿಸಿ ವಿಜೇತರಾದವರಿಗೆ ಸನ್ಮಾನಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.