ADVERTISEMENT

ಕ್ರೈಸ್ತರೇ ನೈಜ ಕೋಮುವಾದಿಗಳು: ಚಿಮೂ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 19:40 IST
Last Updated 25 ಫೆಬ್ರುವರಿ 2011, 19:40 IST

ಬೆಂಗಳೂರು: ‘ಬಿಜೆಪಿ, ಆರ್‌ಎಸ್‌ಎಸ್ ಹಾಗೂ ವಿಶ್ವ ಹಿಂದೂ ಪರಿಷತ್‌ಗಳು ಕೋಮುವಾದಿಗಳಲ್ಲ. ಕ್ರೈಸ್ತರೇ ನಿಜವಾದ ಕೋಮುವಾದಿಗಳು’ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಆರೋಪಿಸಿದ್ದಾರೆ.

ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ಈಗಲೂ ಮತಾಂತರ ನಡೆಯುತ್ತಿದೆ. ಅದಕ್ಕೆ ಪೂರಕವಾದ ದಾಖಲೆಗಳು ನನ್ನ ಬಳಿ ಇವೆ’ ಎಂದರು. ಇದೇ ಪರಿಸ್ಥಿತಿ ಮುಂದುವರಿದರೆ ಇನ್ನೂ 300 ವರ್ಷಗಳಲ್ಲಿ ಹಿಂದೂ ಧರ್ಮ ನಾಶವಾಗಲಿದೆ. ಆದ್ದರಿಂದಲೇ ನನ್ನ ಉಳಿದ ಜೀವನವನ್ನು ಹಿಂದೂ ಧರ್ಮದ ರಕ್ಷಣೆಗೆ ಹಾಗೂ ವಿಶ್ವಭ್ರಾತೃತ್ವ ಪ್ರತಿಪಾದನೆಗೆ ಮೀಸಲಿಡುವೆ’ ಎಂದರು

‘ಕೆಲ ಕ್ರೈಸ್ತ ಪಾದ್ರಿಗಳು ರಾಜಭವನಕ್ಕೆ ತೆರಳಿ ಸೋಮಶೇಖರ್ ಆಯೋಗದ ವರದಿ ಬಗ್ಗೆ ದಿಕ್ಕು ತಪ್ಪಿಸಿದ್ದರಿಂದಲೇ ರಾಜ್ಯಪಾಲರು ಆ ವರದಿಯನ್ನು ತಿರಸ್ಕರಿಸುವ ಬಗ್ಗೆ ಮಾತನಾಡಿದ್ದಾರೆ’.

‘ಮತಾಂತರ ಮಾಡಿದ್ದು ನಿಜವಾದರೆ ಕ್ರೈಸ್ತರ ಸಂಖ್ಯೆ ರಾಜ್ಯದಲ್ಲಿ ಎಷ್ಟು ಜಾಸ್ತಿಯಾಗಿದೆ’ ಎಂಬ ಪ್ರಶ್ನೆಗೆ ನಿರ್ದಿಷ್ಟ ಉತ್ತರ ನೀಡದ ಅವರು, ‘ರಾಜ್ಯದಾದ್ಯಂತ ಮತಾಂತರ ಆಗುತ್ತಿರುವುದು ನಿಜ. ಅಖಿಲ ಭಾರತ ವೀರಶೈವ ಸತ್ಯ ಶೋಧನ ಸಮಿತಿಯ ವರದಿಯು ದಾವಣಗೆರೆಯಲ್ಲಿ ಲಿಂಗಾಯತ, ಬ್ರಾಹ್ಮಣ, ಕುರುಬ, ದಲಿತ ವರ್ಗದವರು ಮತಾಂತರವಾಗಿರುವುದನ್ನು ಹೇಳಿದೆ.

ಮಾಧ್ಯಮಗಳ ಮೂಲಕ ಪಾದ್ರಿಗಳಿಗೆ ಕೆಲ ಪ್ರಶ್ನೆಗಳನ್ನು ಕೇಳಿರುವ ಅವರು, ‘ಮತಾಂತರ ನಡೆದಿರುವುದು ರಾಷ್ಟ್ರದಾದ್ಯಂತ ಸಾಬೀತಾಗಿದೆ. ಮತಾಂತರ ಆಗಿಲ್ಲ ಎಂದು ಸುಳ್ಳು ಹೇಳಲು ನಿಮ್ಮ ಧರ್ಮದಲ್ಲಿ ಅವಕಾಶವಿದೆಯೇ? ಮತಾಂತರ ನಿಷೇಧ ಕಾನೂನು ನಿಮ್ಮ ಸೇವಾ ಕಾರ್ಯಗಳಿಗೆ ಹೇಗೆ ಅಡ್ಡಿಯಾಗುತ್ತದೆ? ಮತಾಂತರ ನಮ್ಮ ಹಕ್ಕು ಎಂದು ಕೆಲವು ಪಾದ್ರಿಗಳು ಹೇಳಿದ್ದಾರೆ. ಭಾರತದ ಸಂವಿಧಾನ ಆಯಾ ಧರ್ಮ ಬೋಧನೆಗೆ ಅವಕಾಶ ನೀಡಿದೆಯೇ ಹೊರತು, ಮತಾಂತರಕ್ಕಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.