ADVERTISEMENT

ಕ್ವಿಜ್: ಬಿಎಂಎಸ್ ಮೇಲುಗೈ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2013, 19:36 IST
Last Updated 16 ಏಪ್ರಿಲ್ 2013, 19:36 IST

ಬೆಂಗಳೂರು: ಮಾಹಿತಿ ತಂತ್ರಜ್ಞಾನ ಕ್ಷೇತ್ರದ ವಿವಿಧ ಕಂಪೆನಿಗಳ ಸಹಯೋಗದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಏರ್ಪಡಿಸಲಾಗಿದ್ದ 4ನೇ ಆವೃತ್ತಿಯ `ಟಿಸಿಎಸ್ ಟೆಕ್‌ಬೈಟ್ಸ್' ಐಟಿ ರಸಪ್ರಶ್ನೆ ಸ್ಪರ್ಧೆಯ ಅಂತಿಮ ಸುತ್ತಿನಲ್ಲಿ ನಗರದ ಬಿಎಂಎಸ್ ಎಂಜಿನಿಯರಿಂಗ್ ಕಾಲೇಜಿನ ಎಂ.ಆರ್. ಅಕ್ಷತ್ ಮತ್ತು ವಿ.ಅರವಿಂದ್ ಪ್ರಥಮ ಸ್ಥಾನ ಪಡೆದಿದ್ದಾರೆ. ಸುರತ್ಕಲ್‌ನ `ಎನ್‌ಐಟಿ'ಯ ಕೆ.ಚೈತನ್ಯ ಮತ್ತು ಜಿ.ಹೇಮಂತ್ ದ್ವಿತೀಯ ಸ್ಥಾನ ಗಳಿಸಿದ್ದಾರೆ.

ಮೊದಲ ಬಹುಮಾನ ಪಡೆದ ವಿದ್ಯಾರ್ಥಿಗಳಿಗೆ ರೂ 60,000 ಮೊತ್ತದ 'ಟಿಸಿಎಸ್ ವಿದ್ಯಾರ್ಥಿ ವೇತನ' ಹಾಗೂ ಸ್ಯಾಮ್‌ಸಂಗ್ ಗ್ಯಾಲಕ್ಸಿ ಟ್ಯಾಬ್ ಸೇರಿದಂತೆ ಹಲವು ಸಾಮಗ್ರಿಗಳನ್ನು ಬಹುಮಾನ ರೂಪದಲ್ಲಿ ನೀಡಲಾಯಿತು. 'ರನ್ನರ್ ಅಪ್' ತಂಡದವರು ರೂ 30,000 ಮೊತ್ತದ ವಿದ್ಯಾರ್ಥಿ ವೇತನ ಪಡೆದುಕೊಂಡರು.

ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಹಾಗೂ ಬೋರ್ಡ್ ಆಫ್ ಎಜುಕೇಷನ್ ಸ್ಟ್ಯಾಂಡರ್ಡ್ಸ್ (ಬಿಐಟಿಇಎಸ್) ಸಂಸ್ಥೆಗಳು ಜಂಟಿಯಾಗಿ ಈ ಸ್ಪರ್ಧೆಯನ್ನು ಆಯೋಜಿಸಿದ್ದವು. ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಸದ್ಯದ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಆಧರಿಸಿದ ಉದ್ಯಮವನ್ನು ಅರ್ಥ ಮಾಡಿಸುವ ಹಾಗೂ ಅವರ ಜ್ಞಾನ ಮತ್ತು ಅರಿವಿನ ಮಟ್ಟವನ್ನು ಹೆಚ್ಚಿಸುವುದೇ ಈ ಸ್ಪರ್ಧೆಯ ಮುಖ್ಯ ಉದ್ದೇಶವಾಗಿದೆ.

ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ.ಎಚ್.ಮಹೇಶಪ್ಪ, `ಟಿಸಿಎಸ್ ಫೈನಾನ್ಷಿಯಲ್ ಸಲ್ಯೂಷನ್ಸ್' ಕಂಪೆನಿ ಅಧ್ಯಕ್ಷ ಎನ್. ಗಣಪತಿ ಸುಬ್ರಹ್ಮಣ್ಯನ್ ಮತ್ತು `ಟಿಸಿಎಸ್'ನ ಬೆಂಗಳೂರು ಕೇಂದ್ರದ ಮುಖ್ಯಸ್ಥ ನಾಗರಾಜ್ ಇಜಾರಿ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಿದರು.

ಗಣಪತಿ ಸುಬ್ರಹ್ಮಣ್ಯನ್ ಮಾತನಾಡಿ,  `ಈಗಿನ ಸ್ಪರ್ಧಾತ್ಮಕ ಪ್ರಪಂಚದಲ್ಲಿ ನಿರಂತರ ಕಲಿಕೆ ಇದ್ದರೇನೇ ಯಶಸ್ಸು ಸಾಧ್ಯ ಎಂಬುದನ್ನು ಮನದಟ್ಟು ಮಾಡಿಕೊಡುವುದು ಈ ಬುದ್ಧಿಮತ್ತೆ ಪರೀಕ್ಷಾ ಸ್ಪರ್ಧೆಯ ಗುರಿಯಾಗಿದೆ'  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.