ADVERTISEMENT

ಖಾದಿಜಾಗೃತಿ ಅಗತ್ಯ- ಅರುಂಧತಿ ನಾಗ್

`ಕರ್ನಾಟಕ ಕುಶಲ ಕಲೆ ಉಳಿಸಿ, ಕರ್ನಾಟಕ ಸೀರೆಗಳನ್ನು ಖರೀದಿಸಿ' ಅಭಿಯಾನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 20:09 IST
Last Updated 4 ಏಪ್ರಿಲ್ 2013, 20:09 IST

ಬೆಂಗಳೂರು: `ಸೀರೆ'ಯೆಂಬ ಎರಡಕ್ಷರದ ಮಾಯೆಗೆ ಸೋಲದ ನೀರೆಯರಿಲ್ಲ. ಆಧುನಿಕ ಚಿಂತನೆಗಳಿಗೆ ಒಡ್ಡಿಕೊಂಡಿದ್ದರೂ ತರಹೇವಾರಿ `ಸೀರೆ ಸಂಗ್ರಹದಲ್ಲಿ' ಮಹಿಳೆಯರೆಲ್ಲರೂ ಮುಂದು. ಇವರಿಗಾಗಿಯೇ ಜಯನಗರ `ಟಿ' ಬ್ಲಾಕ್‌ನಲ್ಲಿರುವ ಗ್ರಾಮೀಣ ಅಂಗಡಿ `ಕರ್ನಾಟಕ ಕುಶಲ ಕಲೆ ಉಳಿಸಿ, ಕರ್ನಾಟಕ ಸೀರೆಗಳನ್ನು ಖರೀದಿಸಿ' ಅಭಿಯಾನ ಹಮ್ಮಿಕೊಂಡಿದೆ.

ಹತ್ತಿ, ರೇಷ್ಮೆ, ಇಳಕಲ್, ಗದ್ದಾರ್ , ಕಸೂತಿ ಕಲೆಯಿರುವ ವಿವಿಧ ಸೀರೆಗಳು, ಸುಟ್ಟಾವೆ ಮಣ್ಣಿನಲ್ಲಿ ಅರಳಿದ ಕಲಾಕೃತಿಗಳು, ಗೊಂಬೆಗಳು, ಅಲಂಕಾರಿಕಾ ವಸ್ತುಗಳು ನೋಡುಗರ ಕಣ್ಮನ ಸೆಳೆದವು.

ಅಭಿಯಾನಕ್ಕೆ ಚಾಲನೆ ನೀಡಿದ ಹಿರಿಯ ರಂಗಕರ್ಮಿ ಅರುಂಧತಿ ನಾಗ್, `ಮಧ್ಯಮ ವರ್ಗದಲ್ಲಿ ಖಾದಿಯ ಬಗ್ಗೆ ಜಾಗೃತಿ ಮೂಡಬೇಕು. ಸೀರೆ ಕೇವಲ ಮೈ ಮುಚ್ಚುವ ಸಾಧನವಲ್ಲ. ಈ ನೆಲದ ಸಂಸ್ಕೃತಿ, ಪರಂಪರೆಯನ್ನು ಅಭಿವ್ಯಕ್ತಿಗೊಳಿಸುವಲ್ಲಿ ಸೀರೆ ಮಹತ್ತರ ಪಾತ್ರ ವಹಿಸುತ್ತದೆ' ಎಂದರು.

`ನೈಲಾನ್ ಜಾತಿ ಸೀರೆಯಿಂದ ಚರ್ಮದ ಕಾಯಿಲೆ ಹೆಚ್ಚುತ್ತಿದೆ. ಅಪಾರ ಸಂಖ್ಯೆ ಕಾರ್ಮಿಕರು ಖಾದಿ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಮುಖವಾಗಿ ಮಧ್ಯಮ ವರ್ಗದವರಲ್ಲಿ ಈ ಖಾದಿ ಬಟ್ಟೆಯೆಡೆಗೆ ಆಕರ್ಷಣೆ ಹೆಚ್ಚಿದರೆ ಈ ಉದ್ಯಮದ ಉದ್ಧಾರ ಸಾಧ್ಯ' ಎಂದರು.

ಗ್ರಾಮೀಣ ಅಂಗಡಿ ಟ್ರಸ್ಟ್‌ನ ನಿರ್ದೇಶಕ ಬಿ. ರಾಜಶೇಖರಮೂರ್ತಿ, `ಅಸಂಘಟಿತ ಗ್ರಾಮೀಣ ಕರಕುಶಲಕರ್ಮಿಗಳು  ಈ ಅಂಗಡಿಯ ಮೂಲಕ ಉತ್ಪಾದಿಸಿದ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸುತ್ತಿದ್ದಾರೆ. ಸುಮಾರು 250ಮಂದಿ ಸದಸ್ಯರಿದ್ದು, ಸೃಜನಶೀಲ ಕರಕುಶಲ ವಸ್ತುಗಳಿಗೆ ಹೆಚ್ಚಿನ ಬೇಡಿಕೆಯಿದೆ' ಎಂದರು. `ರಾಜ್ಯ ಸರ್ಕಾರ ಈ ಮೊದಲು ಶೇ25ರಷ್ಟು ಸಬ್ಸಿಡಿಯನ್ನು ಖಾದಿ ಉದ್ಯಮದಾರರಿಗೆ ನೀಡುತ್ತಿತ್ತು, ಆದರೆ, ಈಗ ಸ್ವಯಂ ಸೇವಾ ಸಂಸ್ಥೆಗಳ ಪಾಲಾಗಿದೆ. ಖಾದಿ ಉದ್ಯಮಕ್ಕೆ ಸರ್ಕಾರದಿಂದಲೂ ಹೆಚ್ಚಿನ ಪ್ರೋತ್ಸಾಹ ದೊರೆಯಬೇಕು' ಎಂದರು.

ಯುಗಾದಿ ಹಬ್ಬದವರೆಗೂ ಶೇ 20 ರಷ್ಟು ರಿಯಾಯಿತಿ ದರದಲ್ಲಿ ಸೀರೆಗಳು ಗ್ರಾಮೀಣ ಅಂಗಡಿಯಲ್ಲಿ ಮಾರಾಟಕ್ಕೆ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.