ADVERTISEMENT

ಖಾಲಿ ಹಾಳೆಗೆ ಸಹಿ ಮಾಡುವಷ್ಟು ಅಯೋಗ್ಯರೇ?

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 19:59 IST
Last Updated 1 ಜೂನ್ 2018, 19:59 IST
ಖಾಲಿ ಹಾಳೆಗೆ ಸಹಿ ಮಾಡುವಷ್ಟು ಅಯೋಗ್ಯರೇ?
ಖಾಲಿ ಹಾಳೆಗೆ ಸಹಿ ಮಾಡುವಷ್ಟು ಅಯೋಗ್ಯರೇ?   

ಬೆಂಗಳೂರು: ‘ಖಾಲಿ ಪತ್ರದ ಮೇಲೆ ಸಹಿ ಪಡೆದು ನಮ್ಮಿಂದ ರಾಜೀನಾಮೆ ಪಡೆಯಲಾಗಿದೆ’ ಎಂಬ ಆಕ್ಷೇಪಕ್ಕೆ ಸಂಬಂಧಿಸಿದಂತೆ, ಬೆಂಗಳೂರು ದಕ್ಷಿಣ ತಾಲ್ಲೂಕಿನ ತಾವರೆಕೆರೆ ಹೋಬಳಿಯ ಚುಂಚನಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಮಂಜುನಾಥ್ ಹಾಗೂ ಉಪಾಧ್ಯಕ್ಷೆ ಶಾರದಾ ಅವರನ್ನು ಹೈಕೋರ್ಟ್‌ ತರಾಟೆಗೆ ತೆಗೆದುಕೊಂಡಿದೆ.

ಈ ಕುರಿತಂತೆ ಮಂಜುನಾಥ್ ಹಾಗೂ ಶಾರದಾ ಸಲ್ಲಿಸಿದ್ದ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಬಿ.ವೀರಪ್ಪ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಜಾಗೊಳಿಸಿದೆ. ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ರಾಜಕೀಯ ಏಳಿಗೆ ಸಹಿಸದ ಕೆಲ ಪಂಚಾಯಿತಿ ಸದಸ್ಯರು, ಅರ್ಜಿದಾರರಿಂದ ಖಾಲಿ ಪತ್ರಕ್ಕೆ ಸಹಿ ಪಡೆದಿದ್ದಾರೆ’ ಎಂದರು.

‘ನಂತರ ಅದರಲ್ಲಿ ರಾಜೀನಾಮೆ ಸಲ್ಲಿಸುತ್ತಿರುವ ಒಕ್ಕಣೆಯೊಂದಿಗೆ ಅದನ್ನು ಬೆಂಗಳೂರು ದಕ್ಷಿಣ ಉಪ ವಿಭಾಗಾಧಿಕಾರಿಗೆ ನೀಡಿದ್ದಾರೆ. ಈ ಬಗ್ಗೆ ಅರ್ಜಿದಾರರಿಂದ ಯಾವುದೇ ಸ್ಪಷ್ಟನೆ ಕೇಳದೇ ಉಪ ವಿಭಾಗಾಧಿಕಾರಿ ರಾಜೀನಾಮೆ ಅಂಗೀಕರಿಸಿದ್ದಾರೆ. ಅರ್ಜಿದಾರರು ಸ್ವಇಚ್ಛೆಯಿಂದ ನೀಡದ ರಾಜೀನಾಮೆ ಅಂಗೀಕರಿಸಿರುವ ಉಪ ವಿಭಾಗಾಧಿಕಾರಿ ಕ್ರಮ ಕಾನೂನು ಬಾಹಿರ’ ಎಂದು ವಿವರಿಸಿದರು.

ADVERTISEMENT

ಇದನ್ನು ಅಲ್ಲಗಳೆದ ಸರ್ಕಾರದ ಪರ ವಕೀಲೆ ಪ್ರತಿಮಾ ಹೊನ್ನಾಪುರ, ‘ಅರ್ಜಿದಾರರು 2018ರ ಜನವರಿ 10ರಂದು ರಾಜೀನಾಮೆ ನೀಡಿದ್ದಾರೆ. ಅರ್ಜಿದಾರರೇ ಉಪ ವಿಭಾಗಾಗಾಧಿಕಾರಿ ಮುಂದೆ ಖುದ್ದು ಹಾಜರಾಗಿ, ವೈಯಕ್ತಿಕ ಹಾಗೂ ಆರೋಗ್ಯ ಸಮಸ್ಯೆಗಳಿಂದ ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದ್ದಾರೆ’ ಎಂದು ವಿವರಿಸಿದರು.

‘ಕಾಯ್ದೆ ಪ್ರಕಾರ, ರಾಜೀನಾಮೆ ಹಿಂಪಡೆಯಲು ಅರ್ಜಿದಾರರಿಗೆ 10 ದಿನಗಳ ಕಾಲಾವಕಾಶ ನೀಡಲಾಗಿತ್ತು. ನಿಯಮಗಳ ಪ್ರಕಾರವೇ ಅರ್ಜಿದಾರರ ರಾಜೀನಾಮೆ ಅಂಗೀಕರಿಸಲಾಗಿದೆ’ ಎಂದು ತಿಳಿಸಿದರು.

‘ಜವಾಬ್ದಾರಿಯುತ ಸ್ಥಾನದಲ್ಲಿರುವ ನಿಮ್ಮ ಕಾರ್ಯವೈಖರಿ ಇದರಿಂದಲೇ ಏನೆಂಬುದು ತಿಳಿಯುತ್ತದೆ. ಇಂಥ ಹುದ್ದೆಗಳಲ್ಲಿ ಮುಂದುವರಿಯಲು ನೀವು ಯೋಗ್ಯರೇ ಅಲ್ಲ. ಈ ಪ್ರಕರಣ ಅನುಮಾನಾಸ್ಪದವಾಗಿದೆ. ಇದನ್ನು ವಿಚಾರಣೆಗೆ ಒಳಪಡಿಸಬೇಕಾಗುತ್ತದೆ’ ಎಂದು ಅರ್ಜಿದಾರರ ವಿರುದ್ಧ ನ್ಯಾಯಮೂರ್ತಿ ಅತೃಪ್ತಿ ಹೊರ ಹಾಕಿದರು. ‘ದುರ್ನಡತೆಯ ಆಧಾರದ ಮೇಲೆ ನಿಮ್ಮನ್ನು ವಜಾಗೊಳಿಸಲು ಶಿಫಾರಸು ಮಾಡಬೇಕಾಗುತ್ತದೆ. ಅರ್ಜಿ ವಜಾಗೊಳಿಸಿ ಒಂದು ಲಕ್ಷ ದಂಡ ವಿಧಿಸುತ್ತೇನೆ’ ಎಂದು ಎಚ್ಚರಿಸಿದರು. ಇದರಿಂದ ಅರ್ಜಿದಾರರು ಅರ್ಜಿ ಹಿಂಪಡೆದುಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.