ADVERTISEMENT

ಖಾಸಗಿ ವ್ಯಕ್ತಿಗಳಿಂದ ಕೊಳವೆ ಬಾವಿ ನೀರು ಮಾರಾಟ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2011, 19:40 IST
Last Updated 24 ಫೆಬ್ರುವರಿ 2011, 19:40 IST

ಬೆಂಗಳೂರು: ಖಾಸಗಿ ವ್ಯಕ್ತಿಗಳು ಕೊಳವೆ ಬಾವಿ ನೀರು ಮಾರಾಟ ಮಾಡುವುದಕ್ಕೆ ಕಡಿವಾಣ ಹಾಕಬೇಕು. ಇದಕ್ಕೆ ಸಂಬಂಧಪಟ್ಟಂತೆ ನಿರ್ದಿಷ್ಟ ಕಾಯ್ದೆ ರೂಪಿಸಬೇಕು. ಯಾವುದೇ ಕಾರಣಕ್ಕೂ ನೀರು ಸರಬರಾಜು ವ್ಯವಸ್ಥೆಯನ್ನು ಖಾಸಗಿಯವರಿಗೆ ನೀಡಬಾರದು. ನಗರದ ವ್ಯಾಪ್ತಿ ವಿಸ್ತರಣೆಯಾಗದಂತೆ ಎಚ್ಚರ ವಹಿಸಬೇಕು...

ಸಿವಿಕ್ ಸಂಸ್ಥೆಯು ಇತ್ತೀಚೆಗೆ ನಗರದಲ್ಲಿ ಹಮ್ಮಿಕೊಂಡಿದ್ದ ‘ಬೆಂಗಳೂರಿನಲ್ಲಿ ಕುಡಿಯುವ ನೀರು: ಇಂದು ಮತ್ತು ನಾಳೆ’ ಎಂಬ ವಿಷಯ ಕುರಿತ ಸಂವಾದದಲ್ಲಿ ಮೇಲ್ಕಂಡ ಒತ್ತಾಯಗಳು ಕೇಳಿಬಂದವು.

‘ನಗರದಲ್ಲಿ ಖಾಸಗಿ ವ್ಯಕ್ತಿಗಳು ಎಲ್ಲೆಂದರಲ್ಲಿ ಕೊಳವೆ ಬಾವಿ ಕೊರೆದು ನೀರು ಮಾರಾಟ ಮಾಡುತ್ತಿದ್ದಾರೆ. ಕೊಳವೆ ಬಾವಿ ಕೊರೆಯಲು ಯಾವುದೇ ಮಾನದಂಡ ಅನುಸರಿಸುತ್ತಿಲ್ಲ. ಇದರಿಂದ ಅಕ್ಕಪಕ್ಕದ ನಿವಾಸಿಗಳ ಕೊಳವೆಬಾವಿಗಳು ಬತ್ತಿ ಹೋಗುತ್ತಿವೆ. ಇದರ ನಿಯಂತ್ರಣಕ್ಕೆ ತಕ್ಷಣವೇ ಕ್ರಮ ಕೈಗೊಳ್ಳಬೇಕು’ ಎಂದು ಸಭಿಕರು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಬೆಂಗಳೂರು ಜಲಮಂಡಳಿ (ಕಾವೇರಿ) ಮುಖ್ಯ ಎಂಜಿನಿಯರ್ ನಾರಾಯಣ, ‘ನಗರದಲ್ಲಿ ಖಾಸಗಿ ವ್ಯಕ್ತಿಗಳು ಕೊಳವೆ ಬಾವಿ ಕೊರೆದು ನೀರು ಮಾರಾಟ ಮಾಡುತ್ತಿರುವುದು ದೊಡ್ಡ ಪ್ರಮಾಣದಲ್ಲಿ ನಡೆಯುತ್ತಿದೆ. ಸೂಕ್ತ ಮಾನದಂಡ ಅನುಸರಿಸದೆ, ಪರವಾನಗಿ ಕೂಡ ಪಡೆಯದೇ ಈ ವ್ಯವಹಾರ ನಡೆಯುತ್ತಿದೆ. ಇದಕ್ಕೆ ಸಂಬಂಧಪಟ್ಟಂತೆ ಪ್ರತ್ಯೇಕ ನೀತಿ ರೂಪಿಸಬೇಕಾದ ಅಗತ್ಯವಿದೆ’ ಎಂದರು.

‘ಎರಡು ಕೊಳವೆ ಬಾವಿಗಳ ನಡುವೆ ಕನಿಷ್ಠ 5.5 ಮೀಟರ್ ಅಂತರವಿರಬೇಕು. ಕೊಳವೆ ಬಾವಿಯನ್ನು ಇಂತಿಷ್ಟು ಆಳದವರೆಗೆ ಮಾತ್ರ ಕೊರೆಯಬೇಕು. ಈ ಮಿತಿಯನ್ನು ಮೀರಿ ಆಳವಾಗಿ ಕೊರೆದರೆ ಲಭ್ಯವಾಗುವ ನೀರು ಕುಡಿಯಲು ಯೋಗ್ಯವಲ್ಲ. ಆದರೆ ಈ ನಿಯಮಗಳ ಪಾಲನೆಯಾಗುತ್ತಿಲ್ಲ. ಹಾಗಾಗಿ ಈ ಎಲ್ಲ ಅಂಶಗಳನ್ನು ಒಳಗೊಂಡ ನೀತಿ ರಚನೆಯಾಗಬೇಕಿದೆ’ ಎಂದರು.

ಇದಕ್ಕೂ ಮೊದಲು ಪ್ರಾತ್ಯಕ್ಷಿಕೆ ಪ್ರದರ್ಶಿಸಿದ ಅವರು, ‘ನಗರಕ್ಕೆ ನಿತ್ಯ 1,280 ಎಂಎಲ್‌ಡಿ. ನೀರು ಅಗತ್ಯವಿದ್ದು, ಸದ್ಯ 900 ಎಂಎಲ್‌ಡಿ ನೀರು ಮಾತ್ರ ಪೂರೈಕೆಯಾಗುತ್ತಿದೆ. ಕಾವೇರಿಯಿಂದ 18 ಟಿಎಂಸಿ ನೀರು ಪಡೆಯಲು ಅವಕಾಶವಿದ್ದು, ಈವರೆಗೆ ಕೇವಲ 12 ಟಿಎಂಸಿ ನೀರನ್ನಷ್ಟೇ ಬಳಸಲಾಗುತ್ತಿದೆ. ಉಳಿದ 6 ಟಿಎಂಸಿ ನೀರನ್ನು ಪಡೆಯುವ ಕಾವೇರಿ 4ನೇ ಹಂತದ ಯೋಜನೆ ಪ್ರಗತಿಯಲ್ಲಿದ್ದು, 2012ರ ಮಾರ್ಚ್ ಹೊತ್ತಿಗೆ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

ಸಾಮಾಜಿಕ ಕಾರ್ಯಕರ್ತ ರಾಜೇಂದ್ರನ್ ಪ್ರಭಾಕರ್ ಮಾತನಾಡಿ, ‘ನಗರ ವಿಸ್ತಾರವಾಗಿ ಬೆಳೆಯುತ್ತಿದ್ದು, ಜನಸಂಖ್ಯೆ ಹೆಚ್ಚುತ್ತಿದೆ. ಪರಿಣಾಮವಾಗಿ ನೀರಿಗೆ ಬೇಡಿಕೆ ಹೆಚ್ಚಿದೆ. ಬೆಂಗಳೂರಿನ ವ್ಯಾಪ್ತಿ ವಿಸ್ತರಣೆಗೆ ಮಿತಿ ಹಾಕಬೇಕಾದ ತುರ್ತು ಅಗತ್ಯವಿದೆ’ ಎಂದು ಹೇಳಿದರು. ‘ಭವಿಷ್ಯದಲ್ಲಿಯೂ ಕಾವೇರಿ ನೀರನ್ನೇ ನೆಚ್ಚಿಕೊಂಡು ಯೋಜನೆಗಳನ್ನು ರೂಪಿಸುವುದು ಸೂಕ್ತವಲ್ಲ. ಬದಲಿಗೆ ಪರ್ಯಾಯ ಮಾರ್ಗೋಪಾಯಗಳ ಬಗ್ಗೆ ಗಂಭೀರ ಚಿಂತನೆ ನಡೆಯಬೇಕಿದೆ. ನಗರದ ಬಹುಪಾಲು ಕೊಳೆಗೇರಿಗಳಲ್ಲಿ ಕುಡಿಯಲು ಯೋಗ್ಯವಲ್ಲದ ನೀರು ಪೂರೈಕೆಯಾಗುತ್ತಿದೆ. ಈ ಬಗ್ಗೆ ಜಲಮಂಡಳಿ ಗಮನ ಹರಿಸಬೇಕು.ಕುಡಿಯುವ ನೀರಿಗೆ ಸಂಬಂಧಪಟ್ಟಂತೆ ಪ್ರತ್ಯೇಕ ಕಾಯ್ದೆ ರೂಪಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.