ADVERTISEMENT

ಗಂಡು ಹೆತ್ತವರ ನೋವಿನ ಕಥೆ...

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2012, 19:59 IST
Last Updated 16 ಡಿಸೆಂಬರ್ 2012, 19:59 IST

ಬೆಂಗಳೂರು:`ನೋಡಿ, ನಾನು ನಿಮ್ಮ ಕಣ್ಣ ಮುಂದೇ ಇದ್ದೇನೆ. ನನಗೆ 73 ವರ್ಷ ವಯಸ್ಸು. ಬಿ.ಪಿ., ಮಧುಮೇಹ ಇದೆ. ಮೊಣಕಾಲು ಚಿಪ್ಪು ಸವೆದು ಸರಿಯಾಗಿ ನಿಂತುಕೊಳ್ಳುವ ಶಕ್ತಿಯೂ ಇಲ್ಲ, ನಡದಲ್ಲೂ ಕಸುವಿಲ್ಲ, ಯಾರಾದರೂ ಮುಟ್ಟಿದರೆ ಬಿದ್ದು ಹೋಗುತ್ತೇನೆ.

ಇಂತಹ ನಾನು, ನನ್ನ ಸೊಸೆಯ ಮೇಲೆ ಹಲ್ಲೆ ನಡೆಸಿ, ಕೊಲೆ ಯತ್ನ ಮಾಡಿದೆ ಎಂದು ಮೊಕದ್ದಮೆ ದಾಖಲಿಸಿದ್ದಾರೆ. ಯಾರೂ ಇದನ್ನು ನಂಬುವುದಿಲ್ಲ, ಆದರೆ ಕಾನೂನು ಮಾತ್ರ ನಂಬುತ್ತದೆ. ಏಕೆಂದರೆ ಅದಕ್ಕೆ ಕಣ್ಣಿಲ್ಲ...' ಎನ್ನುತ್ತ ನಿಂತಲ್ಲಿಯೇ ಕುಸಿದರು ವೃದ್ಧೆ ಶಾಂತಮ್ಮ.

ಇಂತಹ ಅದೆಷ್ಟೊ ಕರಾಳ ಕಥೆಗಳಿಗೆ, ನೋವಿನ ಎಳೆಗಳಿಗೆ ಸಾಕ್ಷಿಯಾಗಿದ್ದು ಶಾಸಕರ ಭವನದಲ್ಲಿ ಭಾನುವಾರ ಪುರುಷರ ರಕ್ಷಣಾ ಸಮಿತಿ ಆಯೋಜಿಸಿದ್ದ ಚಿಂತನ ಸಭೆ.

`ತಪ್ಪು ಮಾಡಿದ್ದರೆ ತಕ್ಕ ಶಿಕ್ಷೆ ಸಿಗಲಿ. ಆದರೆ, ಮಾಡದ ತಪ್ಪಿಗೆ ನನ್ನ ಸುಖ ಸಂಸಾರ ಛಿದ್ರವಾಗಿ ಹೋಗಿದೆ. ವರದಕ್ಷಿಣೆಗೆ ಬೇಡಿಕೆ ಇಟ್ಟ ಆರೋಪದ ಮೇಲೆ ಸುಳ್ಳು ಮೊಕದ್ದಮೆ ದಾಖಲಿಸಿ, ನಮ್ಮನ್ನು ಕೋರ್ಟಿಗೆ ಎಳೆದರು. ನನ್ನ ಗಂಡ ಹೃದಯಾಘಾತದಿಂದ ಕೊನೆಯುಸಿರೆಳೆದರು. ಮಗ ನೌಕರಿ ಕಳೆದುಕೊಂಡ... ನನಗೀಗ ಯಾರು ದಿಕ್ಕು?' ಎನ್ನುತ್ತ ಬಿಕ್ಕಳಿಸಿದರು ಹಲಸೂರಿನ ಜಯಮ್ಮ.

`ಮನೆಗೆ ನಂದಾದೀಪ ಆಗಬೇಕಾದವಳು, ಕುಟುಂಬವನ್ನೇ ಸರ್ವನಾಶ ಮಾಡಿದಳು. ಮದುವೆ ಆಗಿ ಹೋಗಿರುವ ನಾದಿನಿಯನ್ನೂ ಬಿಡಲಿಲ್ಲ. ತನ್ನಷ್ಟಕ್ಕೆ ತಾನು ಹಾಸ್ಟೆಲ್‌ನಲ್ಲಿ ಓದಿಕೊಂಡಿರುವ ತಮ್ಮನನ್ನೂ ಪ್ರಕರಣದಲ್ಲಿ ಎಳೆದು ತಂದರು. ಹೆಣ್ಣನ್ನು ಪೂಜಿಸುವ ನಾಡಿನಲ್ಲಿ ಹೆಣ್ಣಿನಿಂದಲೇ ಹುಟ್ಟುವ ಇಂತಹ ಕಣ್ಣೀರ ಕಥೆಗಳನ್ನು ಯಾರ ಎದುರು ಹೇಳಿಕೊಳ್ಳುವುದು?' ಎಂದು ಗುಡುಗಿದರು ಮಂಜುನಾಥ.

`ನನಗೆ ನನ್ನ ತಾಯಿಯೇ ಸರ್ವಸ್ವ. ನನ್ನನ್ನು ಬಿಟ್ಟರೆ ಅವಳಿಗೂ ಯಾರೂ ಇಲ್ಲ. ವರದಕ್ಷಿಣೆ ಬೇಡ. ನನ್ನ ತಾಯಿಯನ್ನು ತನ್ನ ತಾಯಿಯಂತೆ ಕಾಣುವ ಹುಡುಗಿ ಬೇಕು ಎಂದು ಹೇಳಿಯೇ ಮದುವೆ ಆದೆ. ಮೊದಲ ಹೆರಿಗೆಗೆ ಹೋದವಳು ತಿರುಗಿ ಬರಲೇ ಇಲ್ಲ. ಬಾ ಎಂದರೆ, `ನಿನಗೆ ನಿನ್ನ ತಾಯಿ ಬೇಕಾ? ನಾನು ಬೇಕಾ?' ಎಂದಳು. ತವರಿನಲ್ಲೇ ಇದ್ದು ದುಡ್ಡು ಕೊಡು ಎಂದು ಪೀಡಿಸಿದಳು. ಈಗ ಸುಳ್ಳು ದೂರು ದಾಖಲಿಸಿದ್ದಾಳೆ. ತಾಯಿಯ ಅನಾರೋಗ್ಯ ಬೇರೆ. ಅವರನ್ನು ನೋಡಿಕೊಳ್ಳಬೇಕಾ, ಕೋರ್ಟು-ಕಚೇರಿ ಓಡಾಡಬೇಕಾ ತಿಳಿಯುತ್ತಿಲ್ಲ...' ಹೀಗೇ ಮುಂದುವರಿದಿತ್ತು ಚಿಂತನ ಸಭೆಯಲ್ಲಿ ಚಿಂತೆಗಳ ಮಹಾಪೂರ.

`ನಾನು ಗಂಡು ಹೆತ್ತಿದ್ದೇ ತಪ್ಪಾ?' `ನಾನು ಗಂಡಾಗಿ ಹುಟ್ಟಿದ್ದೇ ಅಪರಾಧವಾ?' `ಕಾನೂನಿಗೆ ಕಣ್ಣಿಲ್ಲವೇ? ಪುರುಷರ ನೋವಿಗೆ ಬೆಲೆಯೇ ಇಲ್ಲವೇ?' ಎನ್ನುವಂತಹ ಪ್ರಶ್ನೆಗಳಿಗೆ ಅಲ್ಲಿ ಉತ್ತರಗಳಿರಲಿಲ್ಲ.
ಆದರೆ, ಎಲ್ಲರ ನೋವಿಗೂ ಪರಸ್ಪರರ ಸಾಂತ್ವನ ಮಾತ್ರ ನೆರವಾಗಿತ್ತು.

ಐಪಿಸಿ ಕಲಂ `498ಎ' ತಿದ್ದುಪಡಿಗೆ ಒತ್ತಾಯ
ಬೆಂಗಳೂರು: ಪುರುಷರ ಮೇಲೆ ನಡೆಯುತ್ತಿರುವ ದೌರ್ಜನ್ಯ ತಡೆಯಲು ಭಾರತೀಯ ದಂಡ ಸಂಹಿತೆಯ (ಐಪಿಸಿ) `ಕಲಂ 498ಎ'ಗೆ ತಿದ್ದುಪಡಿ ತರಬೇಕು ಮತ್ತು ಮಹಿಳಾ ಆಯೋಗದ ಮಾದರಿಯಲ್ಲಿಯೇ ಪುರುಷರ ಆಯೋಗವನ್ನು ರಚಿಸಬೇಕು ಎಂದು ಕರ್ನಾಟಕ ರಾಜ್ಯ ಪುರುಷರ ರಕ್ಷಣಾ ಸಮಿತಿ ಗೌರವ ಅಧ್ಯಕ್ಷೆ ಬಿ.ಟಿ.ಲಲಿತಾ ನಾಯಕ್ ಒತ್ತಾಯಿಸಿದರು.

ಐಪಿಸಿ ಕಲಂ 498ಎ ದುರ್ಬಳಕೆಯಿಂದಾಗಿ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಸರ್ವನಾಶ ಆಗಿವೆ. ಸಂಬಂಧಗಳು ಮುರಿದು, ಮನಸ್ಸುಗಳು ದೂರ ಆಗಿವೆ. ಈ ಕಾನೂನನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡವರಿಗಿಂತ ದುರುಪಯೋಗ ಮಾಡಿಕೊಂಡವರ ಸಂಖ್ಯೆಯೇ ಹೆಚ್ಚು ಎಂದು   ಅಸಮಾಧಾನ ವ್ಯಕ್ತಪಡಿಸಿದರು.

ಈ ಪ್ರಕರಣಗಳನ್ನು ಜಾಮೀನು ಸಹಿತ ಮತ್ತು ರಾಜಿ ಮಾಡಿಕೊಳ್ಳಬಹುದಾದ ಅಪರಾಧ ಎಂದು ಪರಿಗಣಿಸಬೇಕು. ವರದಕ್ಷಿಣೆ ನಿಷೇಧ ಕಾಯ್ದೆಯ ಅಡಿಯಲ್ಲಿ ಸುಳ್ಳು ದೂರು ನೀಡುವವರಿಗೆ ಶಿಕ್ಷೆ ಹಾಗೂ ನಷ್ಟ  ಪರಿಹಾರ ವಿಧಿಸಬೇಕು. ಪ್ರಕರಣಗಳನ್ನು ಸಂಧಾನ ಮೂಲಕ ಇತ್ಯರ್ಥಗೊಳಿಸಲು ಪೊಲೀಸ್ ಠಾಣೆಗಳಲ್ಲಿ ಸಂಧಾನ ಕೇಂದ್ರಗಳನ್ನು ತೆರೆಯಬೇಕು ಎಂದು ಸಮಿತಿ ಪ್ರಧಾನ ಕಾರ್ಯದರ್ಶಿ ಎನ್.ನಾಗೇಶ ಒತ್ತಾಯಿಸಿದರು.

ಸಮಿತಿಯ ಅಧ್ಯಕ್ಷ ಬಿ.ಎಸ್.ಗೌಡ ಮಾತನಾಡಿ, ವಿಚ್ಛೇದಿತ ಪತ್ನಿಗೆ ಜೀವನಾಂಶ ಕೊಡಬೇಕಾದ ಸಂದರ್ಭದಲ್ಲಿ ಆ ಪುರುಷನ ಆದಾಯ ಪರಿಗಣಿಸಬೇಕು ಎಂದರು.

ನ್ಯಾಯಾಲಯಕ್ಕೆ ಅಥವಾ ಪೊಲೀಸ್ ಠಾಣೆಗೆ ಹಾಜರಾಗಬೇಕಾದ ಸಂದರ್ಭ ಬಂದಾಗ ಹಿರಿಯರು, ಅನಾರೋಗ್ಯ ಪೀಡಿತರಿಗೆ ವಿನಾಯಿತಿ ನೀಡಬೇಕು ಎಂದೂ ಅವರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT