ADVERTISEMENT

ಗಗನಕ್ಕೇರಿದ ಹಣ್ಣು,ತರಕಾರಿ ಬೆಲೆ

​ಪ್ರಜಾವಾಣಿ ವಾರ್ತೆ
Published 7 ಮೇ 2012, 19:30 IST
Last Updated 7 ಮೇ 2012, 19:30 IST

ಬೆಂಗಳೂರು: ಬಿಸಿಲ ಧಗೆ ಏರುತ್ತಿರುವ ಜೊತೆಯಲ್ಲೇ ತರಕಾರಿಗಳ ದರ ಗಗನವನ್ನು ತಲುಪಿದ್ದು, ಜನಸಾಮಾನ್ಯರು ತರಕಾರಿಯನ್ನು ಕೆ.ಜಿಗಟ್ಟಲೆ ಕೊಳ್ಳುವ ಬದಲು ಗ್ರಾಂಗಳಲ್ಲಿ ಖರೀದಿ ಮಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.

ನಗರಕ್ಕೆ ತರಕಾರಿ ಪೂರೈಸುವ ಆನೇಕಲ್, ಹೊಸಕೋಟೆ, ಕೋಲಾರ, ಮಾಲೂರು, ನಂದಗುಡಿ, ಹಿಂಡಿಗನಾಳ ಕ್ರಾಸ್(ಎಚ್.ಕ್ರಾಸ್) ಮತ್ತಿತರ ಕಡೆಗಳಲ್ಲಿ ತೋಟಗಾರಿಕ ಬೆಳೆಗೆ ನೀರಿನ ಅಭಾವ ಕಾಣಿಸಿಕೊಂಡಿದ್ದೇ ಬೆಲೆ ಏರಿಕೆಗೆ ಕಾರಣ. ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿರುವುದು ಹಾಗೂ ಕೃಷಿ ಭೂಮಿಯನ್ನು ನಿವೇಶನವಾಗಿ ಪರಿವರ್ತಿಸುತ್ತಿರುವುದೇ ಬೆಲೆ ಏರಲು ಮುಖ್ಯ ಕಾರಣ ಎನ್ನಲಾಗಿದೆ.

ಏಪ್ರಿಲ್‌ನಿಂದಲೇ ತರಕಾರಿಗಳ ಬೆಲೆ ಹೆಚ್ಚುತ್ತಲೇ ಇದೆ. ಹಾಪ್‌ಕಾಮ್ಸ ಸಂಸ್ಥೆಯು ಮೇ 1ರಂದು ಪರಿಷ್ಕೃತ ದರದ ಪಟ್ಟಿ  ಪ್ರಕಟಿಸಿತ್ತು. ಪರಿಷ್ಕೃತದ ದರ ಪ್ರಕಟಗೊಂಡು 6 ದಿನಗಳು ಕಳೆದಿಲ್ಲ. ಮತ್ತೆ ಸೋಮವಾರ ಹೊಸ ದರ ನಿಗದಿಯಾಗಿದೆ.

ಅಡುಗೆಗೆ ಅಗತ್ಯವಾಗಿರುವ ಬಹುಪಾಲು ತರಕಾರಿಗಳ ದರದಲ್ಲಿ ವಿಪರೀತ ಏರಿಕೆ ಕಂಡು ಬಂದಿದೆ. ಕೆಲವು ತರಕಾರಿಗಳ ದರ ಕೆ.ಜಿ.ಗೆ 40 ರೂಪಾಯಿವರೆಗೆ ಏರಿಕೆ ಕಂಡಿದೆ. ಹಣ್ಣುಗಳ ದರದಲ್ಲಿಯೂ ಹೆಚ್ಚಳವಾಗಿದೆ. ಋತುಮಾನದ ಬೆಳೆಗಳಾದ ಮಾವು, ಕಿತ್ತಳೆ ಮತ್ತು ದ್ರಾಕ್ಷಿ ಹಣ್ಣಿನ ದರ ಕೂಡ ಕಳೆದ ವರ್ಷಕ್ಕೆ ಹೋಲಿಸಿದರೆ ತುಸು ಏರಿಕೆಯಾಗಿದೆ.

ಸೊಪ್ಪಿನ ದರ ಗಗನಕ್ಕೆ: ವೃದ್ಧ, ರೋಗಿ ಮತ್ತು ಬಾಣಂತಿಯರಿಗೆ ಅಗತ್ಯವಾಗಿ ಬೇಕಿರುವ ಮತ್ತು ಆರೋಗ್ಯಕ್ಕೆ ಹೆಸರಾಗಿರುವ ಮೆಂತ್ಯೆ ಸೊಪ್ಪಿನ ದರವೂ ದುಪ್ಪಟ್ಟಾಗಿದೆ.

ಇನ್ನು ನಿತ್ಯ ಒಗ್ಗರಣೆಗೆ ಉಪಯೋಗಿಸುವ ಕೊತ್ತಂಬರಿ ಸೊಪ್ಪಿನ ದರವು ಸಹ 8 ರೂಪಾಯಿಯಿಂದ 30 ರೂಪಾಯಿಗೆ ಜಿಗಿದಿದೆ. ಅಡುಗೆಗೆ ಪ್ರಧಾನವಾಗಿ ಬೇಕಿರುವ ಟೊಮೆಟೋ ಬೆಲೆಯು ದುಪ್ಪಟ್ಟಾಗಿದ್ದು, ಗ್ರಾಹಕರು ಇನ್ನು ತರಕಾರಿ ದರದ ಹೊರೆಯನ್ನು ಹೊರಬೇಕಿದೆ.

ಸ್ಥಳೀಯ ರೈತರು ಬೆಳೆದ ಆಲೂಗೆಡ್ಡೆ ಬೆಲೆ ಸದ್ಯಕ್ಕೆ ಕೆ.ಜಿ.ಗೆ 22 ರೂಪಾಯಿದ್ದರೆ, ಮುಂದಿನ ದಿನಗಳಲ್ಲಿ 25 ರೂಪಾಯಿವರೆಗೆ ದರ ಏರಿಕೆಯಾಗುವ ಸಾಧ್ಯತೆಯಿದೆ. 240 ರೂಪಾಯಿ ಇದ್ದ ಬಟಾಣಿ ದರವು 280 ರೂಪಾಯಿಗೆ ಏರಿದೆ. ನೂತನ ದರ ಪರಿಷ್ಕೃತ ಪಟ್ಟಿಯು ಒಪ್ಪತ್ತಿನ ಊಟವನ್ನೇ ನಂಬಿ ಬದುಕುತ್ತಿರುವ ತಳ್ಳುಗಾಡಿಗಳ ಮಾರಾಟಗಾರರ ನಿದ್ದೆಗೆಡಿಸಿದೆ.

ಈ ಬಗ್ಗೆ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಹಾಪ್‌ಕಾಮ್ಸ ಸಂಘದ ಅಧ್ಯಕ್ಷ ಬಿ.ವಿ.ಚಿಕ್ಕಣ್ಣ, `ಕೆಲವು ದಿನಗಳಿಂದೀಚೆಗೆ ರಾಜ್ಯದಲ್ಲಿ ಎದುರಾಗಿರುವ ಬರದ ಪರಿಸ್ಥಿತಿಯು ಈ ದರ ಏರಿಕೆಗೆ ಕಾರಣ. ಮಳೆ ಇಲ್ಲದೇ ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ದರ ಏರಿಕೆ ಮಾಡುವ ಅನಿವಾರ್ಯತೆ ಎದುರಾಗಿದೆ~ ಎಂದರು.

`ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ ಆಗಿಂದಾಗ್ಗೆ ತರಕಾರಿ ದರದಲ್ಲಿ ಏರಿಕೆಯಾಗುತ್ತಿದ್ದು, ಈ ಬಾರಿಯು ದರದಲ್ಲಿ ಅತಿ ಹೆಚ್ಚಳ ಕಂಡು ಬಂದಿದೆ. ಈ ತಿಂಗಳ ಕೊನೆವರೆಗೂ ಈ ದರ ಹಾಗೇ ಮುಂದುವರಿುವ ಸಾಧ್ಯತೆಯಿದೆ~ ಎಂದು ಹೇಳಿದರು.

ತಳ್ಳುಗಾಡಿ ಮಾರಾಟಗಾರ ನಿಂಗಪ್ಪ, `ನಿತ್ಯ ಬೆಳಿಗ್ಗೆ ಹಲವು ಬಡಾವಣೆಗಳಿಗೆ ತಳ್ಳುಗಾಡಿಯಲ್ಲಿ ತೆರಳಿ ತರಕಾರಿಗಳನ್ನು ಮಾರಾಟ ಮಾಡುತ್ತಿದ್ದು, ಇದನ್ನೇ ನಂಬಿ ಬದುಕುತ್ತಿದ್ದೇನೆ. ಈ ದರ ನೋಡಿದರೆ ಯಾವುದೇ ಗ್ರಾಹಕರು ತರಕಾರಿ ಕೊಳ್ಳಲು ಮುಂದೆ ಬರುವುದಿಲ್ಲ~ ಎಂದು ಅಳಲು ತೋಡಿಕೊಂಡರು.

`ಕೆಳ ಮತ್ತು ಮಧ್ಯಮ ವರ್ಗದವರೇ ಹೆಚ್ಚಾಗಿ ತಳ್ಳುಗಾಡಿಯವರಲ್ಲಿ ತರಕಾರಿ ಕೊಳ್ಳುತ್ತಾರೆ. ಹೀಗೆ ದರ ಏರಿಕೆಯಿಂದ ತಳ್ಳು ಗಾಡಿಯವರು ಸುಳ್ಳು ಹೇಳುತ್ತಿದ್ದಾರೆ ಎಂದು ಭಾವಿಸಿ ನಮ್ಮಲ್ಲಿ ವ್ಯಾಪಾರ ಮಾಡಲು ಹಿಂಜರಿಯುತ್ತಾರೆ. ಮಾಲ್‌ಗಳಲ್ಲಿ ಚೌಕಾಸಿ ಸಾಧ್ಯವಿಲ್ಲವೆಂದೇ ನಮ್ಮಲ್ಲಿ ತರಕಾರಿ ಕೊಳ್ಳುತ್ತಾರೆ. ದರ ಏರಿಕೆ ಮತ್ತು ಗ್ರಾಹಕನ ಚೌಕಾಸಿ ಚಾಟಿಯನ್ನು ಒಟ್ಟಿಗೆ ಎದುರಿಸುವುದು ಕಷ್ಟ~ ಎಂದು ಹೇಳಿದರು.

ಗೃಹಿಣಿ ಲಕ್ಷ್ಮಿ `ನಿತ್ಯ ವಸ್ತುಗಳ ಬೆಲೆ ಏರುತ್ತಿದೆ. ಇದಕ್ಕೆ ಬರವೇ ಕಾರಣವೆಂದು ಹೇಳಲಾಗುತ್ತಿದೆ. ಆದರೆ ಈಚೆಗೆ ಬಹಳಷ್ಟು ಬಾರಿ ತರಕಾರಿಯ ಬೆಲೆ ಏರಿಸಲಾಗಿದೆ. ಸ್ವಲ್ಪ ದಿನದ ನಂತರ ಒಂದೆರೆಡು ತರಕಾರಿಗಳ ಬೆಲೆ ಇಳಿಕೆಯಾದರೂ ಮಾರಾಟಗಾರರು ಮಾತ್ರ ಹಳೆ ದರದಲ್ಲೇ ಮಾರಾಟ ಮಾಡುತ್ತಿದ್ದಾರೆ~ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.