ADVERTISEMENT

ಗಣತಿದಾರರಿಗೆ ಸರಿಯಾದ ಮಾಹಿತಿ ನೀಡಿ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2011, 18:40 IST
Last Updated 9 ಫೆಬ್ರುವರಿ 2011, 18:40 IST

ಹೊಸಕೋಟೆ: ಜನಗಣತಿದಾರರು ಮನೆ ಬಾಗಿಲಿಗೆ ಬಂದಾಗ ಸಾರ್ವಜನಿಕರು ಸರಿಯಾದ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಹಶೀಲ್ದಾರ್ ದಯಾನಂದ ಭಂಡಾರಿ ಹೇಳಿದರು.

ತಾಲ್ಲೂಕಿನಲ್ಲಿ ಕೈಗೊಳ್ಳುವ 2011ರ ಜನಗಣತಿ ಕಾರ್ಯಕ್ಕೆ ಇಲ್ಲಿಗೆ ಸಮೀಪದ ಉಪ್ಪಾರಹಳ್ಳಿ ಗ್ರಾಮದಲ್ಲಿ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು.
ಗಣತಿ ಕಾರ್ಯಕ್ಕೆ ಪಟ್ಟಣದಲ್ಲಿನ 92 ಬ್ಲಾಕ್‌ಗಳು ಸೇರಿದಂತೆ ತಾಲ್ಲೂಕಿನಲ್ಲಿ ಒಟ್ಟು 561 ಬ್ಲಾಕ್‌ಗಳನ್ನು ರಚಿಸಲಾಗಿದ್ದು 427 ಗಣತಿದಾರರನ್ನು ನೇಮಿಸಲಾಗಿದೆ. ಅಲ್ಲದೆ 60 ಮೇಲ್ವಿಚಾರಕರು, ಹೋಬಳಿಗೆ ಒಂದರಂತೆ 5 ಜನ ನೋಡಲ್ ಅಧಿಕಾರಿಗಳು ಕಾರ್ಯ ನಿರ್ವಹಿಸಲಿದ್ದಾರೆ. ಫೆ.28 ರ ರಾತ್ರಿ ವಸತಿ ರಹಿತರ ಗಣತಿ ಕಾರ್ಯ ನಡೆಯಲಿದೆ ಎಂದು ಹೇಳಿದರು.

ಆಯ್ಕೆ: ಹೊಸಕೋಟೆ ತಾಲ್ಲೂಕಿನ ಸಮೇತನಹಳ್ಳಿ ಗ್ರಾ.ಪಂ.ಯ 9 ಸ್ಥಾನಗಳಿಗೆ ಭಾನುವಾರ ನಡೆದ ಚುನಾವಣೆಯ ಮತಗಳ ಎಣಿಕೆ ಬುಧವಾರ ನಡೆಯಿತು. ನಡವತ್ತಿ ಗ್ರಾಮದಿಂದ ಎನ್.ಸಿ.ಕಾಂತರಾಜ್, ಗಾಯಿತ್ರಿ, ಪದ್ಮಾವತಿ, ರತ್ನಮ್ಮ, ಎನ್.ವಿ.ವೆಂಕಟೇಶ್ ಹಾಗೂ ಮಲ್ಲಸಂದ್ರ ಗ್ರಾಮದಿಂದ ಭವ್ಯ, ರತ್ನಮ್ಮರಾಜಪ್ಪ, ಎಂ.ರವಿ ಮತ್ತು ಸಾವಿತ್ರಮ್ಮ ಆಯ್ಕೆ ಆಗಿದ್ದಾರೆ.

ಪಂಚಾಯಿತಿಯಲ್ಲಿ 21 ಸ್ಥಾನಗಳಿದ್ದು ಕೊರಳೂರು ಗ್ರಾಮದಿಂದ ನಾಲ್ವರು, ತಿರುಮಶೆಟ್ಟಿಹಳ್ಳಿ ಗ್ರಾಮದಿಂದ ಇಬ್ಬರು ಹಾಗೂ ಸಮೇತನಹಳ್ಳಿಯಿಂದ ಆರು ಜನ ಅವಿರೋಧವಾಗಿ ಆಯ್ಕೆ ಆಗಿದ್ದಾರೆ.

ಖಂಡನೆ: ಅಕ್ರಮ ವಿದ್ಯುತ್ ಪಂಪ್‌ಸೆಟ್‌ಗಳನ್ನು ಸಕ್ರಮಗೊಳಿಸುವ ಸರ್ಕಾರದ ತೀರ್ಮಾನವನ್ನು ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ಹಾಗೂ ಹಸಿರು ಸೇನೆ ಖಂಡಿಸಿವೆ.
ಸಕ್ರಮಗೊಳಿಸುವ ನೆಪದಲ್ಲಿ ದುಬಾರಿ ಶುಲ್ಕ ಹೇರಲಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಕೊಳವೆ ಬಾವಿ ಕೊರೆಸಿರುವ ರೈತರು ಅಸಮರ್ಪಕ ವಿದ್ಯುತ್ ಸರಬರಾಜು ಮಧ್ಯೆಯೂ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಆದ್ದರಿಂಸ ಸರ್ಕಾರವು ಈ ತೀರ್ಮಾನವನ್ನು ಹಿಂತೆಗೆದುಕೊಂಡು ಚುನಾವಣಾ ಪ್ರಣಾಳಿಕೆಯಲ್ಲಿನ ಘೋಷಣೆಗೆ ಬದ್ಧವಾಗಬೇಕು. ಇಲ್ಲದಿದ್ದಲ್ಲಿ ಹೋರಾಟ ಅನಿವಾರ್ಯ ಎಂದು ಹಸಿರು ಸೇನೆ ಅಧ್ಯಕ್ಷ ಎಂ.ಕೆಂಚೇಗೌಡ, ಪ್ರಧಾನ ಕಾರ್ಯದರ್ಶಿ ಅಂಕಣ್ಣಗೌಡ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.