ADVERTISEMENT

ಗಮನ ಸೆಳೆದ ತಮಿಳುನಾಡು ನಾಯಕರ ಸ್ವಾಮಿನಿಷ್ಠೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2011, 19:30 IST
Last Updated 20 ಅಕ್ಟೋಬರ್ 2011, 19:30 IST
ಗಮನ ಸೆಳೆದ ತಮಿಳುನಾಡು ನಾಯಕರ ಸ್ವಾಮಿನಿಷ್ಠೆ
ಗಮನ ಸೆಳೆದ ತಮಿಳುನಾಡು ನಾಯಕರ ಸ್ವಾಮಿನಿಷ್ಠೆ   

ಬೆಂಗಳೂರು: ತಮಿಳುನಾಡು ವರ್ಣರಂಜಿತ, ದ್ವೇಷಭರಿತ ರಾಜಕೀಯಕ್ಕೆ ಹೇಗೆ ಪ್ರಸಿದ್ಧಿ ಪಡೆದಿದೆಯೋ, ಹಾಗೆಯೇ ಅಲ್ಲಿನ ರಾಜಕೀಯ ನಾಯಕರ ಸ್ವಾಮಿ ಭಕ್ತಿಯೂ ಗಮನ ಸೆಳೆಯುವಂತಹದ್ದು.

ತಮ್ಮ ಪಕ್ಷದ ನಾಯಕಿ ಹಾಗೂ ಮುಖ್ಯಮಂತ್ರಿ ಜಯಲಲಿತಾ ಅವರು ನಗರದ ವಿಶೇಷ ನ್ಯಾಯಾಲಯಕ್ಕೆ ಹಾಜರಾದ ಸಂದರ್ಭದಲ್ಲಿ ಮಂತ್ರಿಗಳು, ಲೋಕಸಭಾ ಮತ್ತು ರಾಜ್ಯ ಸಭಾ ಸದಸ್ಯರು ದಿನವಿಡೀ ನ್ಯಾಯಾಲಯದ ಹೊರಗೆ ನಿಂತುಕೊಂಡೇ ಇದ್ದರು. ಕೂರಲು ಕುರ್ಚಿ ಹಾಕಿದ್ದರು ಒಬ್ಬರೂ ಕುಳಿತುಕೊಳ್ಳಲಿಲ್ಲ. ಜಯಲಲಿತಾ ಅವರು ವಿಚಾರಣೆ ಮುಗಿಸಿ ಹೊರಗೆ ಬರುವವರೆಗೂ ನಿಂತೇ ಇದ್ದ ಅವರು ಆ ನಂತರ ಅವರ ಹಿಂದೆಯೇ ಹೊರಟು ಹೋದರು.

ತಮಿಳುನಾಡು ಚುನಾವಣೆಯಲ್ಲಿ ಜಯಭೇರಿ ಬಾರಿಸಿ ಜಯಲಲಿತಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ದಿನ ಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದ ಎಲ್ಲ ಶಾಸಕರು ಮುಖ್ಯಮಂತ್ರಿ ಅವರ ಕಾಲಿಗೆ ಬಿದ್ದು ನಮಸ್ಕರಿಸಿದ್ದರು. ಪ್ರಮಾಣ ವಚನ ಸ್ವೀಕರಿಸಲು ಸರತಿ ಸಾಲಿನಲ್ಲಿ ನಿಂತಿದ್ದ ಎಲ್ಲರೂ ತಲೆ ಬಗ್ಗಿಸಿ ವಿನಮ್ರತೆಯಿಂದ ನಿಂತಿದ್ದರು. ರಾಜ್ಯಪಾಲರು ಹೆಸರು ಕೂಗಿದೊಡನೆ ಮೊದಲು ಜಯಲಲಿತಾ ಅವರ ಕಾಲಿಗೆ ಬಿದ್ದು ಆ ನಂತರ ಪ್ರಮಾಣ ವಚನ ಸ್ವೀಕರಿಸಿದ್ದರು.

ಏಳು ಮಂದಿ ಸಚಿವರು ಹಾಜರು: ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹ ಮುಂಭಾಗದ ನ್ಯಾಯಾಲಯಕ್ಕೆ ಜಯಲಲಿತಾ ಅವರು ಬರುವ ಮೊದಲೇ ಮಂತ್ರಿ ಮಂಡಲದ ಏಳು ಮಂದಿ ಸಚಿವರು ಸ್ಥಳದಲ್ಲಿದ್ದರು. 

ಹಣಕಾಸು ಸಚಿವ ಪನ್ನೀರ್ ಸೆಲ್ವಂ, ಪ್ರವಾಸೋದ್ಯಮ ಸಚಿವ ಗೋಗಳೇಂದ್ರ, ಉನ್ನತ ಶಿಕ್ಷಣ ಸಚಿವ ಪಳನಿಯಪ್ಪನ್, ಕೃಷಿ ಸಚಿವ ಸೆಂಗೋಟಿಯನ್, ವಾಣಿಜ್ಯ ಖಾತೆ ಸಚಿವ ಅಗರಿ ಕೃಷ್ಣಮೂರ್ತಿ ಮತ್ತು ಹೆದ್ದಾರಿ ಸಚಿವ ರಾಮಲಿಂಗಂ ಬಂದಿದ್ದರು. ಹನ್ನೆರಡು ಮಂದಿ ಶಾಸಕರು, ಐದು ಮದಿ ಸಂಸದರು ಹಾಗೂ ರಾಜ್ಯಸಭಾ ಸದಸ್ಯರೂ ಹಾಜರಿದ್ದರು.

ಜಯಲಲಿತಾ ಅವರಿಗೆ ಕಟಕಟೆಯಲ್ಲಿ ಕುರ್ಚಿ ನೀಡಿ ಕೂರಿಸಲಾಗಿತ್ತು. ಆದರೂ ಸ್ವಾಮಿನಿಷ್ಠೆ ಪ್ರದರ್ಶಿಸಿದ ಸಚಿವರು ಬೆಳಿಗ್ಗೆ ಹತ್ತು ಗಂಟೆಯಿಂದ ಸಂಜೆಯವರೆಗೂ ನಿಂತೇ ಇದ್ದರು. ಮಧ್ಯಾಹ್ನ ಊಟದ ವೇಳೆ ಅವರು ಕುಳಿತುಕೊಳ್ಳಬಹುದು ಎಂದು ನಿರೀಕ್ಷಿಸಿದರೂ ನಿಂತೇ ಊಟ ಮಾಡುವ ಮೂಲಕ ಅಲ್ಲಿದ್ದ ಪೊಲೀಸರನ್ನು ಆಶ್ಚರ್ಯಚಕಿತಗೊಳಿಸಿದರು. ಜಯಲಲಿತಾ ಅವರು ನ್ಯಾಯಾಲಯದಿಂದ ಹೊರಗೆ ಬಂದಾಗ ಎಲ್ಲರೂ ಅವರ ಹಿಂದೆ ಹೊರಟು ಹೋದರು.

`ಮಂತ್ರಿಗಳು, ಶಾಸಕರು, ಸಂಸದರು ಬೆಳಿಗ್ಗೆಯಿಂದ ಸಂಜೆವರೆಗೂ ನಿಂತಿದ್ದನ್ನು ನೋಡಿ ಆಶ್ಚರ್ಯವಾಯಿತು. ಕುರ್ಚಿಗಳಿವೆ ಕುಳಿತುಕೊಳ್ಳಿ ಎಂದು ಹೇಳಿದರೂ ಯಾರೊಬ್ಬರೂ ಕೂರಲಿಲ್ಲ. ತಮಿಳುನಾಡಿನ ರಾಜಕೀಯ ಮತ್ತು ಅಲ್ಲಿನ ರಾಜಕಾರಣಿಗಳು ತಮ್ಮ ನಾಯಕರನ್ನು ಗೌರವಿಸುವ ಪರಿಯನ್ನು ಕೇಳಿದ್ದೆವು, ಓದಿದ್ದೆವು ಮತ್ತು ಟಿ.ವಿಯಲ್ಲಿ ನೋಡಿದ್ದೆವು. ಆದರೆ ಪ್ರತ್ಯಕ್ಷವಾಗಿ ನೋಡಿ ಆಶ್ಚರ್ಯವಾಯಿತು. ಇದು ಗೌರವವೋ, ಸ್ವಾಮಿನಿಷ್ಠೆಯೋ ಅಥವಾ ಭಯವೋ ಎಂದು ಗೊತ್ತಾಗಲಿಲ್ಲ~ ಎಂದು ನ್ಯಾಯಾಲಯ ಭದ್ರತಾ ಕರ್ತವ್ಯದಲ್ಲಿದ್ದ ಪೊಲೀಸ್ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.