ADVERTISEMENT

ಗಾಂಧಿನಗರ ವಾರ್ಡ್ ಉಪ ಚುನಾವಣೆ: ಬಿಜೆಪಿ, ಕಾಂಗ್ರೆಸ್ ನಡುವೆ ಪೈಪೋಟಿ

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2012, 19:30 IST
Last Updated 24 ಫೆಬ್ರುವರಿ 2012, 19:30 IST

ಬೆಂಗಳೂರು: ರಾಜ್ಯ ರಾಜಕೀಯ ಬೆಳವಣಿಗೆಗಳ ನಡುವೆಯೇ ಬಿಬಿಎಂಪಿಯ ಗಾಂಧಿನಗರ ವಾರ್ಡ್‌ನ (94) ಉಪ ಚುನಾವಣೆಯ ಬಹಿರಂಗ ಪ್ರಚಾರ ಶುಕ್ರವಾರ ಸಂಜೆ 5 ಗಂಟೆಗೆ ಕೊನೆಗೊಂಡಿತು. ಇದೇ 26ರಂದು ನಡೆಯಲಿರುವ ಉಪ ಚುನಾವಣೆ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಪ್ರತಿಷ್ಠೆಯಾಗಿ ಪರಿಣಮಿಸಿದ್ದು, ಮೇಲ್ನೋಟಕ್ಕೆ ಈ ಎರಡೂ ಪಕ್ಷಗಳ ನಡುವೆಯೇ ಜಿದ್ದಾಜಿದ್ದಿನ ಪೈಪೋಟಿ ಕಂಡು ಬರುತ್ತಿದೆ.

ಬಿಜೆಪಿ ಸಂಸದ ಪಿ.ಸಿ. ಮೋಹನ್ ಹಾಗೂ ಗಾಂಧಿನಗರ ಕ್ಷೇತ್ರದ ಶಾಸಕ ಕಾಂಗ್ರೆಸ್‌ನ ದಿನೇಶ್ ಗುಂಡೂರಾವ್ ಅವರಿಗೂ ಈ ಉಪ ಚುನಾವಣೆ ಪ್ರತಿಷ್ಠೆಯಾಗಿ ಪರಿಣಮಿಸಿದೆ.

ಕಾಂಗ್ರೆಸ್ ಸದಸ್ಯ ನಟರಾಜ್ ಹತ್ಯೆಯಿಂದ ತೆರವಾದ ಸ್ಥಾನಕ್ಕೆ ನಡೆಯುತ್ತಿರುವ ಈ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಟಿ. ಗೋಪಾಲಕೃಷ್ಣ, ಬಿಜೆಪಿಯಿಂದ ಜಿ. ರಾಮಚಂದ್ರ, ಜೆಡಿಎಸ್‌ನಿಂದ ಪಿ.ಕೆ. ಸುರೇಶ್, ಎಐಎಡಿಎಂಕೆಯಿಂದ ಎಂ.ಪಿ. ಯುವರಾಜ್, ಜೆಡಿಯುನಿಂದ ಎಸ್. ಅಶ್ವತ್ಥನಾರಾಯಣ ಸ್ಪರ್ಧಿಸಿದ್ದರೆ, ಪಕ್ಷೇತರರಾಗಿ ಕೆ. ರಮೇಶ್, ಎಸ್.ಎನ್. ರಮೇಶ್, ಸಿ.ಜಿ.ಕೆ. ರಾಮು ಹಾಗೂ ಅಬ್ದುಲ್ ಗಫಾರ್ ಕಣದಲ್ಲಿದ್ದಾರೆ.

ADVERTISEMENT

ಕಾಂಗ್ರೆಸ್ ಭದ್ರಕೋಟೆಗೆ ಬಿಜೆಪಿ ಲಗ್ಗೆ:  `ಕಾಂಗ್ರೆಸ್‌ನ ಭದ್ರಕೋಟೆ~ಯಾಗಿರುವ ಗಾಂಧಿನಗರ ವಾರ್ಡ್‌ಗೆ ಈ ಬಾರಿ ಬಿಜೆಪಿ ಲಗ್ಗೆಯಿಟ್ಟಿದೆ. ಮುಂದಿನ ವಿಧಾನಸಭಾ ಚುನಾವಣೆಗೆ ಗಾಂಧಿನಗರ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾದ ಸಂಸದ ಪಿ.ಸಿ. ಮೋಹನ್ ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದಾರೆ. ಹೀಗಾಗಿ, ಬಿಜೆಪಿ ಅಭ್ಯರ್ಥಿ ಜಿ. ರಾಮಚಂದ್ರ ಗೆಲುವಿಗೆ ಪಿ.ಸಿ. ಮೋಹನ್ ಟೊಂಕ ಕಟ್ಟಿ ನಿಂತಿದ್ದಾರೆ.

ಇನ್ನು, ಗಾಂಧಿನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಕೂಡ ಕಾಂಗ್ರೆಸ್ ಭದ್ರಕೋಟೆ ಛಿದ್ರವಾಗದಂತೆ ನೋಡಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸುತ್ತಿದ್ದಾರೆ. ಶತಾಯಗತಾಯ ತಮ್ಮ ಬೆಂಬಲಿಗ ಗೋಪಾಲಕೃಷ್ಣ ಅವರನ್ನು ಗೆಲ್ಲಿಸಿಕೊಳ್ಳಲು ತೀವ್ರ ಪ್ರಯತ್ನ ನಡೆಸಿದ್ದಾರೆ. ಸದಸ್ಯ ನಟರಾಜ್ ಹತ್ಯೆಯ ಅನುಕಂಪ ಕೂಡ ಮತಗಳಾಗಿ ಪರಿವರ್ತನೆಯಾಗುವ ವಿಶ್ವಾಸ ಕಾಂಗ್ರೆಸ್‌ನದು.

ಇನ್ನು `ಸ್ಥಳೀಯ ಅಭ್ಯರ್ಥಿ~ ಎಂದು ಹೇಳಿಕೊಂಡು ಚುನಾವಣಾ ಪ್ರಚಾರದಲ್ಲಿ ತೊಡಗಿರುವ ಜೆಡಿಎಸ್‌ನ ಪಿ.ಕೆ. ಸುರೇಶ್ ಕೂಡ ಗೆಲುವಿನ ಹುಮ್ಮಸ್ಸಿನಲ್ಲಿದ್ದಾರೆ. ಇಬ್ಬರ ಜಗಳ ಮೂರನೆಯವರಿಗೆ ಲಾಭವಾಗಬಹುದು ಎಂಬ ಲೆಕ್ಕಾಚಾರದಲ್ಲಿಯೂ ಜೆಡಿಎಸ್ ಇದ್ದಂತಿದೆ. ಆದರೆ, ಕ್ಷೇತ್ರದಲ್ಲಿ ಸುತ್ತಾಡಿದಾಗ ಬಿಜೆಪಿ- ಕಾಂಗ್ರೆಸ್ ನಡುವೆಯೇ ತೀವ್ರ ಹಣಾಹಣಿ ಕಂಡು ಬರುತ್ತಿದೆ. ಮೂರು ಪಕ್ಷಗಳು ಕೂಡ ಚುನಾವಣೆಯಲ್ಲಿ `ನಿರ್ಣಾಯಕ ಪಾತ್ರ~ ವಹಿಸಲಿರುವ ಕೊಳೆಗೇರಿ ಮತಗಳ ಮೇಲೆ ಕಣ್ಣಿಟ್ಟಿವೆ.

ಶಾಸಕ ದಿನೇಶ್ ಗುಂಡೂರಾವ್ ಬೆಂಬಲಿಗರಾಗಿರುವ ಗೋಪಾಲಕೃಷ್ಣ, ಕ್ಷೇತ್ರದಲ್ಲಿ ನಡೆದ ಅಭಿವೃದ್ಧಿ ಕಾರ್ಯಗಳೇ ನನ್ನ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದರೆ, ಕಳೆದ ಪಾಲಿಕೆ ಚುನಾವಣೆಯಲ್ಲಿ 526 ಮತಗಳಿಂದ ಸೋತ ಬಿಜೆಪಿಯ ಜಿ. ರಾಮಚಂದ್ರ, ರಾಜ್ಯ ಸರ್ಕಾರದ ಸಾಧನೆ ಹಾಗೂ ಬಿಬಿಎಂಪಿಯಲ್ಲಿ ಬಿಜೆಪಿ ಆಡಳಿತವಿರುವುದು ನನ್ನ ಗೆಲುವಿಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಬಿಜೆಪಿಯ ಜಿ. ರಾಮಚಂದ್ರ, 1998ರಿಂದ 2001ರವರೆಗೆ ಜನತಾ ದಳದಿಂದ ಚಿಕ್ಕಪೇಟೆ ವಾರ್ಡ್‌ನಿಂದ ಎರಡು ಬಾರಿ ಆಯ್ಕೆಯಾಗಿದ್ದರು. 1998ರಲ್ಲಿ ಅವರು ಪಾಲಿಕೆಯ ಕಾಮಗಾರಿ ಮತ್ತು ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿಯೂ ಕೆಲಸ ನಿರ್ವಹಿಸಿದ್ದರು. 2001ರಿಂದ 2006ರವರೆಗೆ ಅವರ ಪತ್ನಿ ಚಿಕ್ಕಪೇಟೆ ವಾರ್ಡ್‌ನಿಂದ ಗೆದ್ದಿದ್ದರು. 2010ರ ಪಾಲಿಕೆ ಚುನಾವಣೆಯಲ್ಲಿ ಅವರು ಗಾಂಧಿನಗರ ವಾರ್ಡ್‌ನಿಂದ ಬಿಜೆಪಿಯಿಂದ ಸ್ಪರ್ಧಿಸಿ 528 ಮತಗಳ ಅಂತರದಿಂದ ಪರಾಭವಗೊಂಡಿದ್ದರು.

ಇನ್ನು, ಜೆಡಿಎಸ್ ಅಭ್ಯರ್ಥಿಯಾಗಿರುವ ಪಿ.ಕೆ. ಸುರೇಶ್ ಈ ಹಿಂದೆ ಬಿಜೆಪಿಯಲ್ಲಿದ್ದವರು. ಕಳೆದ ಬಾರಿ ಅವರಿಗೆ ಬಿಜೆಪಿ ಟಿಕೆಟ್ ಸಿಕ್ಕಿರಲಿಲ್ಲ. ಹೀಗಾಗಿ, ಇದೀಗ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಇನ್ನು ಎಐಎಡಿಎಂಕೆ ಅಭ್ಯರ್ಥಿ ಎಂ.ಪಿ. ಯುವರಾಜ್, ಜೆಡಿ(ಯು)ನ ಎಸ್. ಅಶ್ವತ್ಥನಾರಾಯಣ ಕೂಡ ಕೊಳೆಗೇರಿ ಹಾಗೂ ಅಲ್ಪಸಂಖ್ಯಾತರ ಮತಗಳ ಮೇಲೆ ಕಣ್ಣಿಟ್ಟಿದ್ದಾರೆ.

ಮತದಾರರ ವಿವರ

ಒಟ್ಟು ಮತಗಳು  24,901

ಪುರುಷರು 13,494

ಮಹಿಳೆಯರು 11,406

ಇತರರು 01

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.