ADVERTISEMENT

ಗಾಂಧಿವಾದ ಬರಬೇಕೇ ಹೊರತು ಮೋದಿವಾದ ಅಲ್ಲ

ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌ ಅಭಿಮತ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2013, 19:50 IST
Last Updated 8 ಡಿಸೆಂಬರ್ 2013, 19:50 IST

ಬೆಂಗಳೂರು: ‘2014 ರ ಲೋಕಸಭೆ ಚುನಾವಣೆಗೂ ಮುನ್ನ ಗಾಂಧಿವಾದ ಬರಬೇಕೆ ಹೊರತು ಮೋದಿವಾದ ಬೇಡ’ ಎಂದು ಸಾಮಾಜಿಕ ಕಾರ್ಯ­ಕರ್ತೆ ಮೇಧಾ ಪಾಟ್ಕರ್‌ ಅವರು ಹೇಳಿದರು.

ಐಎಸ್‌ಐ ಸಭಾಂಗಣದಲ್ಲಿ ಈಚೆಗೆ ನಡೆದ ಸಂಸ್ಥೆಯ ಸುವರ್ಣ ಮಹೋತ್ಸ­ವದ ಸಮಾರೋಪ ಸಮಾ­ರಂಭದಲ್ಲಿ ಮಾತನಾಡಿದರು.
‘ಮಾಂಟೆಕ್‌ ಸಿಂಗ್‌ ಅಹ್ಲು­ವಾಲಿ­ಯಾ, ನರೇಂದ್ರ ಮೋದಿ ಅವರಂತಹ­ವರು ಅಭಿವೃದ್ಧಿ ಕಡೆಗೆ ಮುಖ ಮಾಡಿ ನಿಂತಿದ್ದಾರೆ. ಆದರೆ, ಅವರು ಬಯಸುವ ಅಭಿವೃದ್ಧಿಯಲ್ಲಿ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕೃತಿಕ ವೈವಿಧ್ಯತೆಯನ್ನು ಹೊರ­ಗಿಟ್ಟಿ­ದ್ದಾರೆ. ಇವುಗಳನ್ನೆಲ್ಲ ಮೂಲ ಬೇರಿನಿಂದ ಕೊಲ್ಲುವ ಯತ್ನವನ್ನು ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ದೇಶದಲ್ಲಿ ಪ್ರಗತಿಯ ಹೆಸರಿನಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ನಾಶ ಮಾಡಲಾಗುತ್ತಿದೆ. ನಮ್ಮ ಅನಾದಿ ಕಾಲದಿಂದ ಬಂದ ಸರಳ ಜೀವನವನ್ನು ಆಮಿಷ, ಆಸೆಗಳನ್ನು ಒಡ್ಡಿ ಸಾಯಿಸಲಾಗುತ್ತಿದೆ’ ಎಂದರು.

‘ಈಗ ಹೊಸ ರೀತಿಯ  ಬ್ರಾಹ್ಮಣ­ವಾದ ಬೆಳೆಯುತ್ತಿದೆ. ಅಂದರೆ, ಎಲ್ಲ ಕೆಲಸವನ್ನು ರೈತರು, ದಲಿತರು, ಕೊಳೆಗೇರಿ ಜನರು ಮಾಡಬೇಕು. ಇದರಲ್ಲಿ ಸಮಾನತೆಯನ್ನು ಪ್ರಚುರ­ಪಡಿಸ­ಲಾಗುತ್ತಿದೆ. ಅವರನ್ನು ಸಮಗ್ರ­ತೆಯ ಹೆಸರಿನಲ್ಲಿ ಪ್ರತ್ಯೇಕಿಸ ಲಾಗುತ್ತಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಹಿಂದುಳಿದ ಜನಾಂಗಕ್ಕೆ ಸೇರಿ­ದವರು, ಅಲ್ಪಸಂಖ್ಯಾತರು, ರೈತರು, ಕೂಲಿಕಾರ್ಮಿಕರು ಕೆಲಸ ಮಾಡು­ವವರು. ಆದರೆ, ಬೆಳವಣಿಗೆಯಲ್ಲಿ , ಸಂಪತ್ತಿನಲ್ಲಿ ಅವರ ಪಾಲನ್ನು ನಿರಾಕರಿಸಲಾಗುತ್ತಿದೆ.

ಬಹುಪಾಲು ಜನರು ಸಾಮಾಜಿಕ ಭದ್ರತೆಯಿಲ್ಲದೆ ಬದುಕುತ್ತಿದ್ದಾರೆ. ದೇಶದಲ್ಲಿ ಶೇ 96 ರಷ್ಟು ಜನ ಕೆಲಸ ಮಾಡುವವರಿದ್ದರೆ, ಶೇ 4 ರಷ್ಟು ಜನರು ಮಾತ್ರ ಅದನ್ನು ಅನುಭೋಗಿಸುತ್ತಿದ್ದಾರೆ’ ಎಂದು ಹೇಳಿದರು.

‘ಗೋದಾಮುಗಳಲ್ಲಿ ಅಕ್ಕಿ ತುಂಬಿ  ತುಳುಕುತ್ತಿದೆ. ಆದರೆ, ಬಡವರ ಹೊಟ್ಟೆಗಳು ಖಾಲಿಯಿವೆ. ಇದು ಪ್ರಜಾಪ್ರಭುತ್ವದ ತತ್ವಕ್ಕೆ ಮಾಡುತ್ತಿ­ರುವ ಅವಮಾನವಾಗಿದೆ. ಆದರೂ, ಯಾವುದನ್ನೂ ಪ್ರಶ್ನಿಸಬಾರದು, ಎಲ್ಲವನ್ನೂ ಕಣ್ಣು, ಕಿವಿ ಮುಚ್ಚಿಕೊಂಡು ಒಪ್ಪಿಕೊಳ್ಳಬೇಕು’ ಎಂದು ವ್ಯಂಗ್ಯವಾಡಿದರು.

‘ನಗರದ ಅಭಿವೃದ್ಧಿಗಾಗಿ ಕೊಳೆಗೇರಿ ಮುಕ್ತ ನಗರವನ್ನು ನಿರ್ಮಾಣ ಮಾಡುತ್ತೇವೆ ಎಂಬ ಘೋಷಣೆಗಳಿವೆ. ಆದರೆ, ಕೊಳೆಗೇರಿ ಜನರನ್ನು  ಒಕ್ಕ­ಲೆಬ್ಬಿಸಿ­ದರೆ, ಸಮಸ್ಯೆ ಪರಿಹಾರ­ವಾಗುತ್ತದೆ ಎಂದು ಅವರ ಎಣಿಕೆ. ಆದರೆ, ಅವರ ಜೀವನಕ್ಕೆ ಬೇಕಾದ ಮೂಲ ಸೌಕರ್ಯವನ್ನು ಒದಗಿಸುವ ಯಾವ ವ್ಯವಸ್ಥೆಯೂ ಇಲ್ಲ’ ಎಂದು ನುಡಿದರು.

ಬೆಂಗಳೂರು ಆರ್ಚ್‌ ಬಿಷಪ್‌ ರೆವರೆಂಡ್‌ ಬರ್ನಾರ್ಡ್‌ ಮೊರಸ್‌, ‘ಭಾರತೀಯ ಸಾಮಾಜಿಕ ಸಂಸ್ಥೆಯು (ಐಎಸ್‌ಐ) ಹಲವಾರು ವರ್ಷಗಳಿಂದ ಬಡವರು, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ದಲಿತರ ಏಳಿಗೆಗಾಗಿ ಶ್ರಮಿಸುತ್ತಿದೆ. ಅವರಿಗೆ ಸಮಾಜದಲ್ಲಿ ಒಂದು ಗೌರವಯುತವಾದ ಸ್ಥಾನವನ್ನು ಕಲ್ಪಿಸಿಕೊಡಲು ಹೋರಾಟ ನಡೆಸುತ್ತಿದೆ’ ಎಂದರು.

‘ಇಂದಿನ ಆಧುನಿಕ ಕಾಲದಲ್ಲಿಯೂ ಜಾತೀಯತೆ, ಧರ್ಮಗಳ ನಡುವಿನ ಕಲಹಗಳು ನಡೆಯುತ್ತಿವೆ’ ಎಂದು ವಿಷಾದಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಸಾಮಾಜಿಕ ಕಾರ್ಯಕರ್ತೆ ಮೇಧಾ ಪಾಟ್ಕರ್‌, ಬೆಂಗಳೂರು ಬಿಷಪ್‌ ರೆವರೆಂಡ್‌ ಬರ್ನಾರ್ಡ್‌ ಮೊರಸ್‌ ಅವರನ್ನು ಮಕ್ಕಳು ತಮಟೆ ಬಾರಿಸುವ ಮೂಲಕ ಸ್ವಾಗತಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.