ADVERTISEMENT

ಗಿಡ ನೆಡುವ ನಾಟಕವಾಡಿ,ಮರೆತರು

ಬಾಣಸವಾಡಿಯ ಬುಲೆವಾರ್ಡ್‌ನಲ್ಲಿ ಸೊರಗುತ್ತಿವೆ ಸಸಿಗಳು

ಪೀರ್‌ ಪಾಶ, ಬೆಂಗಳೂರು
Published 14 ಜೂನ್ 2017, 20:15 IST
Last Updated 14 ಜೂನ್ 2017, 20:15 IST
ಸೂಕ್ತ ನಿರ್ವಹಣೆ ಇಲ್ಲದೆ ನೆಟ್ಟಿರುವ ಬೇವಿನ ಗಿಡ ಸೊರಗುತ್ತಿದೆ
ಸೂಕ್ತ ನಿರ್ವಹಣೆ ಇಲ್ಲದೆ ನೆಟ್ಟಿರುವ ಬೇವಿನ ಗಿಡ ಸೊರಗುತ್ತಿದೆ   

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಅರಣ್ಯ ವಿಭಾಗವು ವಿಶ್ವ ಪರಿಸರ ದಿನ ಪ್ರಯುಕ್ತ ಜೂನ್‌ 5 ರಂದು ಬಾಣಸವಾಡಿಯ ಬುಲೆವಾರ್ಡ್‌ ಉದ್ಯಾನದಲ್ಲಿ ನೆಟ್ಟಿರುವ ಗಿಡಗಳು ಸೂಕ್ತ ನಿರ್ವಹಣೆಯಿಲ್ಲದೆ ಸೊರಗುತ್ತಿವೆ.

ಗಿಡಗಳನ್ನು ಗುಂಡಿಯಲ್ಲಿ ಇಟ್ಟು ಮಣ್ಣು ಮುಚ್ಚುವುದನ್ನೆ ಮರೆತ ಪಾಲಿಕೆ ಸಿಬ್ಬಂದಿಯ ಕಾರ್ಯವೈಖರಿಯನ್ನು ಸಾರ್ವಜನಿಕರು ಖಂಡಿಸಿದ್ದಾರೆ.

‘ಜನಪ್ರತಿನಿಧಿಗಳು, ಸರ್ಕಾರಿ ಅಧಿಕಾರಿಗಳು ಹೇಗೆ ಕೆಲಸ ಮಾಡುತ್ತಾರೆ ಎಂಬುದನ್ನು ಈ ಸಸಿಗಳೆ ಹೇಳುತ್ತಿವೆ. ಸುದ್ದಿ ಮಾಧ್ಯಮಗಳ ಮುಂದೆ ಅವರು ಸಸಿ ನೆಡುವ ನಾಟಕ ಮಾಡಿದ್ದಾರೆ.  ಬಳಿಕ, ಪರಿಸರ ದಿನಾಚರಣೆ ಮುಗಿಯಿತೆಂದು ಅವರು ಭಾವಿಸಿದಂತಿದೆ’ ಎಂದು  ಸ್ಥಳೀಯ ನಿವಾಸಿ ಆನಂದ್‌ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಗಿಡಗಳನ್ನು ಇಟ್ಟಿರುವ ಗುಂಡಿಗಳಿಗೆ ಮಣ್ಣು ತುಂಬಬೇಕು ಎಂದು ನನಗೂ ಅನಿಸಿತು. ಉದ್ಯಾನದ ಸುತ್ತಲು ತಂತಿಬೇಲಿ ಹಾಕಿದ್ದಾರೆ. ಹಾಗಾಗಿ ಒಳಗೆ ಹೋಗಲಾಗಲಿಲ್ಲ. ಈಗ ಆ ಗಿಡಗಳು ಒಣಗುತ್ತಿದೆ’ ಎಂದು ಸ್ಥಳೀಯ ಆಟೊ ಚಾಲಕ ಮುಸ್ತಫಾ ಅಸಹಾಯಕತೆ ವ್ಯಕ್ತಪಡಿಸಿದರು.

ಹೊಸ ಸಸಿ ನೆಡುತ್ತೇವೆ: ‘ಬುಲೆವಾರ್ಡ್‌ ಉದ್ಯಾನದ ಅಭಿವೃದ್ಧಿಗೆ ಟೆಂಡರ್‌ ಪಡೆದಿರುವ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಿರಲಿಲ್ಲ. ಹಾಗಾಗಿ ಅವರು ನೆಟ್ಟಿರುವ ಸಸಿಗಳ ಕುರಿತು ಹೆಚ್ಚು ಗಮನ ಹರಿಸಿಲ್ಲ.

ಕೆಲಸ ಆರಂಭಿಸಲು ಆದೇಶ ನೀಡಿದ್ದೇನೆ. ಈಗ ಒಣಗಿರುವ ಸಸಿಗಳ ಸ್ಥಳದಲ್ಲಿಯೇ ಹೊಸ ಸಸಿಗಳನ್ನು ಬೆಳೆಸುವಂತೆ ಉದ್ಯಾನ ಅಭಿವೃದ್ಧಿ ಗುತ್ತಿಗೆದಾರರಿಗೆ ಸೂಚಿಸುತ್ತೇನೆ’ ಎಂದು ಪೂರ್ವ ವಲಯದ ಸಹಾಯಕ ಅರಣ್ಯಾಧಿಕಾರಿ ಜಯರಾಮ್‌ ರೆಡ್ಡಿ ಪ್ರತಿಕ್ರಿಯಿಸಿದರು.


ಗುಂಡಿಯಲ್ಲಿ ಇಟ್ಟ ಗಿಡದ ಸುತ್ತ ಮಣ್ಣು ಮುಚ್ಚದ ಕಾರಣ ಒಣಗಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.