ADVERTISEMENT

ಗುಂಡಿಬಿದ್ದ ರಸ್ತೆಗಳು; ಕಣ್ಮುಚ್ಚಿ ಕುಳಿತ ಪಾಲಿಕೆ

ಹೆಜ್ಜೆ–ಹೆಜ್ಜೆಗೂ ಸಂಚಾರ ದಟ್ಟಣೆ... ಹೌದು, ಇದು ಬೆಂಗಳೂರು

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 20:15 IST
Last Updated 16 ಡಿಸೆಂಬರ್ 2013, 20:15 IST

ಬೆಂಗಳೂರು: ನಗರದಲ್ಲಿ ರಸ್ತೆ ಮೇಲೆ ಬಾಯ್ದೆರೆದು ಕುಳಿತ ಗುಂಡಿಗಳು ಈಗಾಗಲೇ ಹಲವು ಆಹುತಿಗಳನ್ನು ಪಡೆದಿದ್ದರೂ ಅವುಗಳ ಸ್ಥಿತಿ ಮಾತ್ರ ಬದಲಾಗಿಲ್ಲ.

ಕಲಾವಿದ ಅಶೋಕಕುಮಾರ್‌ ಅವರ ಸಾವು ರಸ್ತೆ ದುರ್ಘಟನೆಗಳ ಪಟ್ಟಿಯಲ್ಲಿ ಮತ್ತೊಂದು ಸೇರ್ಪಡೆಯಷ್ಟೇ.

ಯಾವುದೇ ವಾಹನ ನಗರ ಪ್ರವೇಶ ಮಾಡಿದೊಡನೆ ‘ನಾವೀಗ ಬಿಬಿಎಂಪಿ ವ್ಯಾಪ್ತಿಯಲ್ಲಿ ಇದ್ದೇವೆ’ ಎನ್ನುವುದು ಪ್ರಯಾಣಿಕರಿಗೆ ತಟ್ಟನೆ ಗೊತ್ತಾಗಿ ಬಿಡುತ್ತದೆ. ಏಕೆಂದರೆ, ಗುಂಡಿಬಿದ್ದ ರಸ್ತೆಗಳೇ ಅವರನ್ನು ಸ್ವಾಗತಿಸುತ್ತವೆ.

ಹೆಜ್ಜೆ–ಹೆಜ್ಜೆಗೂ ಎದುರಾಗುವ ಸಂಚಾರ ದಟ್ಟಣೆ ಅವರನ್ನು ಬಲವಂತವಾಗಿ ವಾಹನದಲ್ಲೇ ‘ವಿಶ್ರಾಂತಿ’ ಪಡೆಯುವಂತೆ ಮಾಡುತ್ತದೆ. 
ದ್ವಿಚಕ್ರ ವಾಹನ ಸವಾರರಂತೂ ಬೆನ್ನುನೋವು ಅನುಭವಿಸಲು ಸಿದ್ಧರಾಗಿಯೇ ರಸ್ತೆಗೆ ಇಳಿಯುವುದು ಅನಿವಾರ್ಯವಾಗಿದೆ. ಬೆನ್ನೆಲುಬಿನ ಊತಕ್ಕೆ ಒಳಗಾಗಿ ಆಸ್ಪತ್ರೆ ಸೇರುವ ಪ್ರಕರಣಗಳು ನಿತ್ಯವೂ ಘಟಿಸುತ್ತಲೇ ಇವೆ. ಒಂದು ಗುಂಡಿ ತಪ್ಪಿಸುವಷ್ಟರಲ್ಲಿ ಮತ್ತೊಂದು ಗುಂಡಿ ಎದುರಾಗುವ ಕಾರಣ ಮೊದಲೇ ಕಿಕ್ಕಿರಿದ ನಗರದ ರಸ್ತೆಗಳಲ್ಲಿ ಸುಗಮ ಸಂಚಾರ ಇನ್ನಷ್ಟು ದುಸ್ಸಾಧ್ಯವಾಗಿದೆ.

ರೆಡ್‌ ಕಾರಿಡಾರ್‌: ಸಂಪೂರ್ಣವಾಗಿ ಹದಗೆಟ್ಟ ಕೆಲವು ರಸ್ತೆಗಳು ನಗರದಲ್ಲಿ ‘ರೆಡ್‌ ಕಾರಿಡಾರ್‌’ ನಿರ್ಮಿಸಿಬಿಟ್ಟಿವೆ. ಈ ಮಾರ್ಗಗಳಲ್ಲಿ ನಿತ್ಯ ಒಂದಿಲ್ಲೊಂದು ಅಪಘಾತ ಸಂಭವಿಸುವುದು ಸಾಮಾನ್ಯವಾಗಿದೆ. ಗುಂಡಿಗಳು ಎದುರಾದ ವೇಗದಲ್ಲಿ ಬ್ರೇಕ್‌ ಹಾಕಲು ಆಗದೆ, ಎದುರಿನ ವಾಹನಕ್ಕೆ ಗುದ್ದುವುದು, ಅದೇ ನೆಪದಲ್ಲಿ ಕೈ–ಕೈ ಮಿಲಾಯಿಸುವುದು... ಇಂತಹ ನೋಟಗಳು ಸಾಮಾನ್ಯವಾಗಿವೆ.

ಮುಖ್ಯ ರಸ್ತೆ ಇಲ್ಲವೆ ಒಳರಸ್ತೆ ಯಾವುವೂ ಸಂಚಾರ ಮಾಡುವಷ್ಟು ಯೋಗ್ಯ ಸ್ಥಿತಿಯಲ್ಲಿ ಉಳಿದಿಲ್ಲ. ಮೂರು ತಿಂಗಳ ಹಿಂದೆ ನಗರದ ಕೆಲವು ರಸ್ತೆಗಳನ್ನು ಪರಿಶೀಲಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಡಿಸೆಂಬರ್‌ ವೇಳೆಗೆ ನಗರದ ಎಲ್ಲ ರಸ್ತೆಗಳನ್ನು ದುರಸ್ತಿ ಮಾಡಬೇಕು’ ಎಂಬ ಗಡುವು ನೀಡಿದ್ದರು.

ಮಳೆ ನಿಂತ ಕೂಡಲೇ ರಸ್ತೆ ದುರಸ್ತಿ ಕಾರ್ಯ ಶುರುವಾಗಲಿದೆ ಎಂದು ಮೇಯರ್‌ ಬಿ.ಎಸ್‌. ಸತ್ಯನಾರಾಯಣ ಮತ್ತು ಬಿಬಿಎಂಪಿ ಆಯುಕ್ತ

ಎಂ.ಲಕ್ಷ್ಮಿನಾರಾಯಣ ಸಹ ತಿಳಿಸಿದ್ದರು. ಮುಖ್ಯಮಂತ್ರಿ ನೀಡಿದ್ದ ಗಡುವು ಮುಗಿಯುತ್ತಾ ಬಂದರೂ ರಸ್ತೆಗಳ ಸ್ಥಿತಿ ಮಾತ್ರ ಹಾಗೇ ಇದೆ.

ನಗರದ ತುಂಬಾ ನರವ್ಯೂಹದಂತೆ ಮೈಚಾಚಿರುವ ಎಲ್ಲ ರಸ್ತೆಗಳನ್ನು ಒಂದರ ತುದಿಯಲ್ಲಿ ಮತ್ತೊಂದನ್ನು ಜೋಡಿಸುತ್ತಾ ಹೋದರೆ, ಅವುಗಳ ಒಟ್ಟು ಉದ್ದ 13,000 ಕಿ.ಮೀ. ದಾಟುತ್ತದೆ. ಅವುಗಳಲ್ಲಿ ಶೇ 60ರಷ್ಟು ರಸ್ತೆಗಳು ಅಗತ್ಯದಷ್ಟು ಅಗಲವಿಲ್ಲ. ಮೊದಲೇ ಕಿಷ್ಕಿಂಧೆಯಂತಿರುವ ರಸ್ತೆಗಳಲ್ಲಿ ಗುಂಡಿಗಳೂ ಬಿದ್ದಿದ್ದರಿಂದ ಸಂಚಾರ ವ್ಯವಸ್ಥೆಗೆ ಸಂಚಕಾರ ಎದುರಾಗಿದೆ.

ನಗರದ ಎಂಟು ಪ್ರಮುಖ ರಸ್ತೆಗಳ ದುರಸ್ತಿಗೆ ಕಳೆದ ಮೂರು ವರ್ಷಗಳಲ್ಲಿ ಬಿಬಿಎಂಪಿ ₨ 122 ಕೋಟಿ ವೆಚ್ಚ ಮಾಡಿದೆ. ಇಷ್ಟೊಂದು ಹಣ ವ್ಯಯ ಮಾಡಿದರೂ ರಸ್ತೆಗಳ ಸ್ಥಿತಿ ಸುಧಾರಣೆಯಾಗದೆ ಹದಗೆಟ್ಟಿದ್ದು, ಚರ್ಮ ಕಿತ್ತುಬಂದ ದೇಹದಂತೆ ಅವುಗಳು ಬಳಲುತ್ತಿವೆ.
ನಗರದ ಬನ್ನೇರುಘಟ್ಟ, ಕನಕಪುರ, ಮಾಗಡಿ ಮತ್ತು ಮೈಸೂರು ರಸ್ತೆಗಳು ಬಿಬಿಎಂಪಿ ಕಡತಗಳಲ್ಲಿ ‘ಪ್ರಮುಖ ರಸ್ತೆಗಳು’ ಎಂಬ ಹಿರಿಮೆಗೆ ಪಾತ್ರವಾಗಿವೆ. ಆದರೆ, ಆ ಹಿರಿಮೆ ಕಾಪಾಡುವ ಪ್ರಯತ್ನಗಳು ಮಾತ್ರ ಕಾಣುತ್ತಿಲ್ಲ.

ಹೊಸ ರಸ್ತೆಗಳಿಗೂ ಅಪಾಯ: ರಸ್ತೆಗಳ ದುಸ್ಥಿತಿಗೆ ಬಿಬಿಎಂಪಿ ಸರಿಯಾದ ನಿರ್ವಹಣೆ ಕೊರತೆ ಮುಖ್ಯ ಕಾರಣ. ಜಲ ಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್‌ ಹಾಗೂ ದೂರ ಸಂಪರ್ಕ ಸಂಸ್ಥೆಗಳು ಮನ ಬಂದಂತೆ ಅಗೆದು, ಹಾಗೇ ಬಿಡುತ್ತಿರುವುದು ಸಹ ರಸ್ತೆಗಳ ಪಾಲಿಗೆ ಗಂಡಾಂತರಕಾರಿ ಎನಿಸಿದೆ. 2–3 ತಿಂಗಳ ಹಿಂದೆಯಷ್ಟೇ ನಿರ್ಮಿಸಿದ ಹೊಸ ರಸ್ತೆಗಳನ್ನು ಜಲ ಮಂಡಳಿ ಇಲ್ಲವೆ ದೂರ ಸಂಪರ್ಕ ಸಂಸ್ಥೆಗಳು ಮಾರ್ಗಗಳ ಅಳವಡಿಕೆಗಾಗಿ ಅಗೆಯುವುದು ಸಾಮಾನ್ಯವಾಗಿದೆ.

ಮಲ್ಲೇಶ್ವರ ಬಡಾವಣೆಯಲ್ಲಿ ಹಲವು ಹೊಸ ರಸ್ತೆಗಳನ್ನು ಮನಬಂದಂತೆ ಅಗೆಯಲಾಗಿದೆ. ರಸ್ತೆಗಳ ನಿರ್ವಹಣೆ ವಿಷಯದಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಬೇಕು ಎಂದು ರಾಜ್ಯ ಸರ್ಕಾರ ನಿಯಮವನ್ನೇನೋ ಮಾಡಿದೆ. ಆದರೆ, ಅದು ಸಮರ್ಪಕವಾಗಿ ಪಾಲನೆ ಆಗುತ್ತಿಲ್ಲ. ಸ್ವತಃ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಈ ವಿಷಯದಲ್ಲಿ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

‘ಸಾಮಾನ್ಯವಾಗಿ ನಮಗೆ ಯಾವುದೇ ಮಾಹಿತಿಯನ್ನು ನೀಡದೆ ರಸ್ತೆ ಅಗೆಯಲಾಗುತ್ತದೆ’ ಎಂದು ಬಿಬಿಎಂಪಿ ಎಂಜಿನಿಯರ್‌ಗಳು ದೂರುತ್ತಾರೆ.

‘ಬಜೆಟ್‌ನಲ್ಲಿ ಘೋಷಿಸಿದಂತೆ ರಸ್ತೆಗಳ ದುರಸ್ತಿಗೆ ಹಣಕಾಸಿನ ನೆರವು ಸಿಗುವುದಿಲ್ಲ. ವಾರ್ಡ್‌ಮಟ್ಟದ ಇತರ ಕಾಮಗಾರಿಗಳ ಕಡೆಗೆ ಪಾಲಿಕೆ ಸದಸ್ಯರು ಒಲವು ತೋರುತ್ತಾರೆ. ದುಡ್ಡಿಲ್ಲದೆ ನಾವಾದರೂ ಏನು ಮಾಡಬೇಕು’ ಎಂದು ಪ್ರಶ್ನಿಸುತ್ತಾರೆ, ಬಿಬಿಎಂಪಿ ಎಂಜಿನಿಯರ್‌ಗಳು.

‘ಅಧಿಕಾರಿಗಳಿಗೆ ರಸ್ತೆ ದುರಸ್ತಿಗೆ ಖರ್ಚು ಮಾಡುವ ಅವಕಾಶ ಕೊಟ್ಟರೆ ಬಜೆಟ್‌ ಹಣವನ್ನು ಅದೊಂದೇ ಉದ್ದೇಶಕ್ಕಾಗಿ ಮೀಸಲಿಡಬೇಕಾಗುತ್ತದೆ’ ಎಂದು ವ್ಯಂಗ್ಯವಾಡುತ್ತಾರೆ, ಪಾಲಿಕೆ ಹಿರಿಯ ಸದಸ್ಯರೊಬ್ಬರು.

ಮೀರಿದ ಧಾರಣ ಸಾಮರ್ಥ್ಯ: ‘ನಗರದ ರಸ್ತೆಗಳು 10ರಿಂದ 12 ಲಕ್ಷ ವಾಹನಗಳ ಧಾರಣ ಸಾಮರ್ಥ್ಯವನ್ನು ಮಾತ್ರ ಹೊಂದಿದ್ದು, ಅಂದಾಜು 50 ಲಕ್ಷ ವಾಹನಗಳು ಇಲ್ಲಿವೆ. ಗುಣಮಟ್ಟದ ರಸ್ತೆಗಳಿದ್ದರೂ ಸುಸ್ಥಿತಿಯಲ್ಲಿ ಉಳಿಯುವುದು ಕಷ್ಟ. ಕಳಪೆ ಕಾಮಗಾರಿ ನಡೆದರಂತೂ ಮುಗಿದೇ ಹೋಯಿತು’ ಎಂದು ಸಾರಿಗೆ ತಜ್ಞ ಪ್ರೊ. ಎಂ.ಎನ್‌. ಶ್ರೀಹರಿ ವಾಸ್ತವ ಸಂಗತಿ ಮೇಲೆ ಬೆಳಕು ಚೆಲ್ಲುತ್ತಾರೆ.

‘ಡಾಂಬರ್ ರಸ್ತೆಗಳು ಪ್ರತಿ ವರ್ಷ ಹಾಳಾಗುತ್ತವೆ. 30-–40 ವರ್ಷ ಬಾಳಿಕೆ ಬರುವ ಕಾಂಕ್ರೀಟ್ ರಸ್ತೆಗಳನ್ನು ನಿರ್ಮಿಸುವುದು ಒಳಿತು. ಇದು ಬಿಟುಮಿನ್ ರಸ್ತೆಗಳಷ್ಟೇ ಬಾಳಿಕೆ ಬರುತ್ತದೆ’ ಎಂದು ಸಲಹೆ ನೀಡುತ್ತಾರೆ.

‘ನೀರು ಪೂರೈಕೆ, ದೂರ ಸಂಪರ್ಕ ಹಾಗೂ ವಿದ್ಯುತ್‌ ಸರಬರಾಜು ಮಾರ್ಗಗಳಿಗೆ ರಸ್ತೆಯ ಒಂದು ಬದಿಯಲ್ಲಿ ‘ಯುಟಿಲಿಟಿ ಮಾರ್ಗ’ ಬಿಟ್ಟರೆ ವಿವಿಧ ಕಾರಣಗಳನ್ನು ಒಡ್ಡಿ ರಸ್ತೆ ಅಗೆಯುವ ಪರಿಪಾಠಕ್ಕೆ ಕೊನೆ ಹಾಡಬಹುದು’ ಎಂದು ಅಭಿಪ್ರಾಯಪಡುತ್ತಾರೆ.

‘ರಸ್ತೆಗಳು ಹಾಳಾಗಿದ್ದರಿಂದ ಸುಗಮ ಸಂಚಾರದ ವ್ಯವಸ್ಥೆ ಮಾಡುವುದೇ ಕಷ್ಟವಾಗಿದೆ. ಬಿಟುಮಿನ್‌ ವ್ಯವಸ್ಥೆ ಮೂಲಕ ರಸ್ತೆಯ ಮೇಲ್ಮೈ ಸಮತಟ್ಟಾಗಿಟ್ಟರೆ ಸ್ವಲ್ಪವಾದರೂ ಸಮಸ್ಯೆ ನೀಗಿಸಲು ಸಾಧ್ಯ’ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಾರೆ.

ಇಲ್ಲಿದೆ ಗುಂಡಿಮುಕ್ತ ರಸ್ತೆ!

ಬೆಂಗಳೂರಿನಲ್ಲಿ ಗುಂಡಿಮುಕ್ತ ರಸ್ತೆಯೊಂದಿದೆ ಎಂದರೆ ನಗರದ ಜನ ನಂಬುವುದಿಲ್ಲ. ಆದರೆ, ನಿಜವಾಗಿಯೂ ಬಿಬಿಎಂಪಿ ಗುಂಡಿಮುಕ್ತವಾದ ರಸ್ತೆಯೊಂದನ್ನು ನಿರ್ಮಿಸಿದೆ. ಅದೇ ವಿಧಾನಸೌಧ ಮುಂದಿನ ಹಾಗೂ ಕೆಪಿಎಸ್‌ಸಿ ಕಚೇರಿ ಪಕ್ಕದ ಪಾರ್ಕ್‌ ಹೌಸ್‌ ರಸ್ತೆ. ಕಾಂಕ್ರೀಟ್‌ನಿಂದ ನಿರ್ಮಿಸಲಾಗಿರುವ ಈ ರಸ್ತೆಗೆ ₨ 25 ಲಕ್ಷ ಖರ್ಚು ಮಾಡಲಾಗಿದೆ. ಆರು ಇಂಚು ದಪ್ಪದ ಮೇಲ್ಮೈ ಪದರು ಹೊಂದಿರುವ ಈ ರಸ್ತೆ, ಕನಿಷ್ಠ 30 ವರ್ಷ ಬಾಳಿಕೆ ಬರಲಿದೆ ಎಂಬುದು ಅದನ್ನು ನಿರ್ಮಿಸಿದ ಎಂಜಿನಿಯರ್‌ಗಳ ವಿವರಣೆ.
ಬೈಯಪ್ಪನಹಳ್ಳಿಯಿಂದ ಬಸವೇಶ್ವರ ಸರ್ಕಲ್‌ ಮತ್ತು ಮೇಖ್ರಿ ಸರ್ಕಲ್‌ನಿಂದ ಕಸ್ತೂರಬಾ ರಸ್ತೆವರೆಗೆ ಇಂತಹ ರಸ್ತೆ ನಿರ್ಮಿಸುವ ಪ್ರಸ್ತಾವ ಇದೆ ಎಂದು ಅವರು ಹೇಳುತ್ತಾರೆ.

ಗುಂಡಿ ಮುಚ್ಚುತ್ತೇವೆ
ರಸ್ತೆಗಳ ಸುಧಾರಣೆಗೆ ಬಿಬಿಎಂಪಿ ₨ 400 ಕೋಟಿ ಮೀಸಲಿಟ್ಟಿದೆ. ರಾಜ್ಯ ಸರ್ಕಾರದಿಂದ ₨ 300 ಕೋಟಿ ಪಡೆಯಲು ಯತ್ನಿಸಲಾಗುತ್ತಿದೆ. ಎಲ್ಲ ಗುಂಡಿಗಳನ್ನು ಮುಚ್ಚುತ್ತೇವೆ.

ADVERTISEMENT

–ಆರ್‌. ರಾಮಲಿಂಗಾರೆಡ್ಡಿ, ಜಿಲ್ಲಾ ಉಸ್ತುವಾರಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.