ಬೆಂಗಳೂರು: ದೇವರಜೀವನಹಳ್ಳಿ ಸಮೀಪದ ಶಾಂಪುರದಲ್ಲಿ ಸಿಕ್ಕಿದ್ದ ರುಂಡವಿಲ್ಲದ ದೇಹದ ಗುರುತು ಪತ್ತೆಯಾಗಿದ್ದು, ಕೊಲೆಯಾದ ವ್ಯಕ್ತಿ ಶಿವಾಜಿನಗರದ ಅಜೀಜ್ ಖಾನ್ (35) ಎಂದು ಪೊಲೀಸರು ಹೇಳಿದ್ದಾರೆ.
ಅಜೀಜ್ ಅವರನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಭೀಕರವಾಗಿ ಕೊಲೆ ಮಾಡಿದ್ದ ದುಷ್ಕರ್ಮಿಗಳು, ದೇಹವನ್ನು ಮಾತ್ರ ಮೂಟೆ ಕಟ್ಟಿ ಶಾಂಪುರ ಹಳಿಗಳ ಬಳಿ ಬಿಸಾಡಿದ್ದರು. ಆದರೆ, ಕತ್ತರಿಸಿದ್ದ ತಲೆ ಮತ್ತು ಕೈ–ಕಾಲುಗಳನ್ನು ತೆಗೆದುಕೊಂಡು ಹೋಗಿ ಬಾಣಸವಾಡಿ ಸಮೀಪದ ನಾಗೇನಹಳ್ಳಿ ರೈಲ್ವೆ ಪ್ರದೇಶದಲ್ಲಿ ಎಸೆದಿದ್ದರು. ಫೆ.27ರಂದು ಶಾಂಪುರದಲ್ಲಿ ದೇಹ ಪತ್ತೆಯಾಗಿತ್ತು. ಆದರೆ, ರುಂಡ ಇರಲಿಲ್ಲವಾದ್ದರಿಂದ ಗುರುತು ಪತ್ತೆ ಮಾಡಲು ಸಾಧ್ಯವಾಗಿರಲಿಲ್ಲ.
ಶನಿವಾರ ಬೆಳಿಗ್ಗೆ ಬಾಣಸವಾಡಿ ಠಾಣೆಗೆ ಕರೆ ಮಾಡಿದ ಸ್ಥಳೀಯರು, ನಾಗೇನಹಳ್ಳಿಯ ಹಳಿಗಳ ಪಕ್ಕದಲ್ಲಿ ವ್ಯಕ್ತಿಯ ರುಂಡ ಹಾಗೂ ಕೈ–ಕಾಲುಗಳು ಬಿದ್ದಿರುವುದಾಗಿ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ತೆರಳಿದ ಪೊಲೀಸರು, ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ನಂತರ ದೇವರಜೀವನಹಳ್ಳಿ ಠಾಣೆಗೆ ಕರೆ ಮಾಡಿ ಇತ್ತೀಚೆಗೆ ಪತ್ತೆಯಾಗಿದ್ದ ರುಂಡವಿಲ್ಲದ ದೇಹದ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಆ ಅಂಗಾಂಗಗಳು ಒಬ್ಬರದೇ ಎಂಬುದು ಖಾತ್ರಿಯಾದ ಬಳಿಕ, ನಗರದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ನಾಪತ್ತೆ ಪ್ರಕರಣಗಳನ್ನು ಪರಿಶೀಲಿಸಿದ್ದಾರೆ. ಆಗ, ಕೊಲೆಯಾದ ವ್ಯಕ್ತಿ ಶಿವಾಜಿನಗರದ ತಿಮ್ಮಯ್ಯ ರಸ್ತೆ ನಿವಾಸಿ ಅಜೀಜ್ ಖಾನ್ ಎಂದು ಗೊತ್ತಾಗಿದೆ.
ಶಿವಾಜಿನಗರದಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದ ಅಜೀಜ್, ‘ಪರಿಚಿತರು ₨ 50 ಸಾವಿರ ಹಣ ಕೊಡಬೇಕಿದೆ. ಟ್ಯಾನರಿ ರಸ್ತೆಗೆ ಹೋಗಿ ಅವರಿಂದ ಹಣ ಪಡೆದುಕೊಂಡು ಬರುತ್ತೇನೆ’ ಎಂದು ಪತ್ನಿಗೆ ತಿಳಿಸಿ, ಫೆ.25ರ ರಾತ್ರಿ ಮನೆಯಿಂದ ಹೊರ ಹೋಗಿದ್ದರು. ಆದರೆ, ಬೆಳಿಗ್ಗೆಯಾದರೂ ಅವರು ವಾಪಸ್ ಬಂದಿಲ್ಲ. ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದರಿಂದ ಗಾಬರಿಗೊಂಡ ಅವರ ಸೋದರ ದಸ್ತಗಿರ್ ಖಾನ್, ಅಜೀಜ್ ಕಾಣೆಯಾಗಿರುವ ಬಗ್ಗೆ ಶಿವಾಜಿನಗರ ಠಾಣೆಗೆ ಫೆ.26ರಂದು ದೂರು ಕೊಟ್ಟಿದ್ದರು.
‘ಅಜೀಜ್ ಅವರು ಮನೆಯಿಂದ ಹೊರಡುವುದಕ್ಕೂ ಮೊದಲು ಸಿಕಂದರ್ ಎಂಬುವರ ಜತೆ ಮೊಬೈಲ್ನಲ್ಲಿ ಮಾತನಾಡಿದ್ದರು. ರಾತ್ರಿ 11 ಗಂಟೆಗೆ ಅವರ ಅಕ್ಕ ಸಹ ಕರೆ ಮಾಡಿದ್ದು, ತಾನು ಟ್ಯಾನರಿ ರಸ್ತೆಯಲ್ಲಿರುವುದಾಗಿ ಅಜೀಜ್ ಹೇಳಿದ್ದರು. ನಂತರ ಸ್ವಲ್ಪ ಸಮಯದಲ್ಲೇ ಅವರ ಮೊಬೈಲ್ ಸ್ವಿಚ್ ಆಗಿತ್ತು’ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.