ADVERTISEMENT

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ .

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2011, 19:30 IST
Last Updated 11 ಫೆಬ್ರುವರಿ 2011, 19:30 IST

ಬೆಂಗಳೂರು: ‘ಶೈಕ್ಷಣಿಕ ಸಂಸ್ಥೆಗಳಲ್ಲಿ ರಾಜಕೀಯ ನುಸುಳಬಾರದು. ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಹಾಗೂ ದೇಶಕಟ್ಟಲು ಬೇಕಾದ ಮೌಲ್ಯಗಳನ್ನು ನೀಡಲು ಆದ್ಯತೆ ನೀಡಬೇಕು’ ಎಂದು ರಾಜ್ಯಪಾಲ ಎಚ್.ಆರ್.ಭಾರದ್ವಾಜ್ ಸಲಹೆ ನೀಡಿದರು.ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಆವರಣದಲ್ಲಿ ನೂತನವಾಗಿ ನಿರ್ಮಿಸಲಾದ ‘ಪ್ರೊ.ಕೆ.ವೆಂಕಟಗಿರಿ ಗೌಡ ಸ್ಮಾರಕ ಸಭಾಂಗಣ’ವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಮಕ್ಕಳು ಹಾದಿ ತಪ್ಪಿದ್ದಾರೆಂದು ಹೇಳುವುದರ ಬದಲು ಅವರನ್ನು ಸರಿದಾರಿಗೆ ನಡೆಸಬೇಕಾದ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ತಿಳಿಯಬೇಕು’ ಎಂದು ಪ್ರಾಧ್ಯಾಪಕರನ್ನು ಉದ್ದೇಶಿಸಿ ಹೇಳಿದರು.ತಮ್ಮ ಬಾಲ್ಯದ ಘಟನೆಯನ್ನು ನೆನಪಿಸಿಕೊಂಡ ಅವರು, ‘ನಾನು ಚಿಕ್ಕವನಿದ್ದಾಗಲೇ ನನ್ನ ತಂದೆ ತೀರಿ ಹೋದರು. ಆಗ ನನ್ನ ಗುರುಗಳು ಮಾರ್ಗದರ್ಶನ ನೀಡಿದರು. ಗುರುಗಳ ಪಾತ್ರ ಜೀವನದಲ್ಲಿ ಬಹಳ ಮಹತ್ವದ್ದು’ ಎಂದರು.

ಸ್ವಂತ ಮನೆ ಇಲ್ಲ: 25 ವರ್ಷ ರಾಜಕೀಯದಲ್ಲಿದ್ದರೂ ದೆಹಲಿಯಲ್ಲಿ ಒಂದು ಸ್ವಂತ ಮನೆ ಹೊಂದಲು ಸಾಧ್ಯವಾಗಿಲ್ಲ. ಒಂದು ವೇಳೆ ರಾಜ್ಯಪಾಲ ಹುದ್ದೆ ಹೋದರೆ ಎಲ್ಲಿ ವಾಸಿಸಬೇಕು ಎಂಬ ಬಗ್ಗೆ ನನ್ನ ಪತ್ನಿಯೊಂದಿಗೆ ದಿನಾಲು ಚರ್ಚೆ ನಡೆಸುತ್ತೇನೆ ಎಂದು ಚಟಾಕಿ ಹಾರಿಸಿದ ಅವರು, ತ್ಯಾಗ ಮನೋಭಾವ ಕಡಿಮೆಯಾಗುತ್ತಿರುವ ಪ್ರಸ್ತುತ ಸಮಾಜದಲ್ಲಿ ವೆಂಕಟಗಿರಿಗೌಡರ ಪತ್ನಿ ಸಾವಿತ್ರಿ ಅವರು ಈ ಕಟ್ಟಡಕ್ಕಾಗಿ ತಮ್ಮ ಏಕೈಕ ಮನೆಯನ್ನು ಮಾರಿ 50 ಲಕ್ಷ ರೂಪಾಯಿ ನೀಡಿದ್ದಾರೆ. ಭಗವದ್ಗೀತೆಯಲ್ಲಿ ಹುಟ್ಟು ಆಕಸ್ಮಿಕ ಸಾವು ಖಚಿತ ಎಂದು ಉಲ್ಲೇಖಿಸಲಾಗಿದೆ. ಆದರೆ ವೆಂಕಟಗಿರಿಗೌಡರ ಮರಣದ ನಂತರವೂ ಅವರ ನೆನಪನ್ನು ಅವರ ಪತ್ನಿ ಶಾಶ್ವತವಾಗಿ ಉಳಿಸಿದ್ದಾರೆ ಎಂದರು.

ಕುಲಪತಿ ಡಾ.ಎನ್.ಪ್ರಭುದೇವ್ ಮಾತನಾಡಿ, ‘ವಿ.ವಿ. ಆವರಣದಲ್ಲಿ ಅರ್ಥಶಾಸ್ತ್ರ ವಿಭಾಗದ ಕಟ್ಟಡ ನಿರ್ಮಿಸಲು ಉದ್ಯಮಿ ಸೀತಾರಾಮ್ ಜಿಂದಾಲ್ ಅವರೊಂದಿಗೆ ರಾಜ್ಯಪಾಲರು ಈಗಾಗಲೇ ಮಾತುಕತೆ ನಡೆಸಿದ್ದಾರೆ. ಶೀಘ್ರದಲ್ಲೇ ಅದು ಆರಂಭಗೊಳ್ಳಲಿದೆ. ಆ ವಿಭಾಗಕ್ಕೂ ವೆಂಕಟಗಿರಿಗೌಡರ ಹೆಸರನ್ನು ನಾಮಕರಣ ಮಾಡಲಾಗುವುದು’ ಎಂದು ತಿಳಿಸಿದರು.
ಸಮಾರಂಭದಲ್ಲಿ ಸಾವಿತ್ರಿ ವೆಂಕಟಗಿರಿಗೌಡ, ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್,ರಾಷ್ಟ್ರೀಯ ಮೌಲ್ಯಮಾಪನ ಹಾಗೂ ಮಾನ್ಯತಾ ಪರಿಷತ್ (ನ್ಯಾಕ್) ನಿರ್ದೇಶಕ ಹಾಗೂ ಬೆಂಗಳೂರು ವಿ.ವಿ. ವಿಶ್ರಾಂತ ಕುಲಪತಿ ಪ್ರೊ.ಎಚ್.ಎ.ರಂಗನಾಥ್ ಅವರನ್ನು ಸನ್ಮಾನಿಸಲಾಯಿತು.

ಕುಲಪತಿ ಪ್ರೊ.ಆರ್.ಎಂ.ರಂಗನಾಥ್, ಮೌಲ್ಯಮಾಪನ ಕುಲಸಚಿವ ಪ್ರೊ.ಟಿ.ಆರ್.ಸುಬ್ರಹ್ಮಣ್ಯ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರೊ.ಕೆ.ಕೆ. ಸೀತಮ್ಮ, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಆರ್.ವೇಣೂಗೋಪಾಲ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.