ADVERTISEMENT

ಗುತ್ತಿಗೆ ನೌಕರರನ್ನು ಕಾಯಂಗೊಳಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2013, 20:00 IST
Last Updated 24 ಸೆಪ್ಟೆಂಬರ್ 2013, 20:00 IST

ಬೆಂಗಳೂರು: ಸೇವೆ ಕಾಯಂಗೊಳಿಸುವುದು, ವೇತನ ತಾರತಮ್ಯ ನಿವಾರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೆಪಿಟಿಸಿಎಲ್‌ ವಿದ್ಯುತ್‌ ವಿತರಣಾ ಗುತ್ತಿಗೆ ಕಾರ್ಮಿಕರ ಸಂಘದ ಸದಸ್ಯರು ನಗರದ ಮೈಸೂರು ಬ್ಯಾಂಕ್‌ ವೃತ್ತದಲ್ಲಿ ಮಂಗಳವಾರ ಪ್ರತಿಭಟನೆ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಸೋಮಶೇಖರ್ ಮಾತನಾಡಿ, ‘ಕೆಪಿಟಿಸಿಎಲ್‌ ಮತ್ತು ಎಸ್ಕಾಂಗಳ ಅಧೀನ ದಲ್ಲಿರುವ ವಿದ್ಯುತ್‌ ಸರಬರಾಜು ಕೇಂದ್ರಗಳಲ್ಲಿ ನೌಕರರು ಹಲವು ವರ್ಷಗಳಿಂದ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿದ್ದಾರೆ. ಕಾಯಂ ನೌಕರರಲ್ಲದ ಕಾರಣ ಅವರಿಗೆ ಯಾವುದೇ ಸೌಲಭ್ಯ ಗಳು ಸಿಗುತ್ತಿಲ್ಲ. ಇದರಿಂದಾಗಿ ಸೇವಾ ಭದ್ರತೆ ಇಲ್ಲದೆ ಅವರ ಬದುಕು ದುಸ್ತರವಾಗಿದೆ. ಗುತ್ತಿಗೆ ನೌಕರರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಹೊರಗುತ್ತಿಗೆ ಪದ್ಧತಿ ಯನ್ನು ರದ್ದುಗೊಳಿಸಬೇಕು. ನೇರಗುತ್ತಿಗೆಯ ಮೂಲಕ ನೌಕ ರರ ಸೇವೆಯನ್ನು ಮುಂದುವರೆಸಬೇಕು’ ಎಂದು ಆಗ್ರಹಿಸಿದರು.

‘ಪ್ರತಿ ನೇಮಕಾತಿಯಲ್ಲೂ ಶೇ.೫೦ರಷ್ಟು ಹುದ್ದೆಗಳನ್ನು ಗುತ್ತಿಗೆ ನೌಕರರಿಗೆ ಮೀಸಲಿಟ್ಟು ಹಂತ ಹಂತವಾಗಿ ಖಾಯಂಗೊಳಿಸಬೇಕು. ವೇತನ ತಾರತಮ್ಯ ನಿವಾರಿಸಲು ಸಮಾನ ಕೆಲಸಕ್ಕೆ ಸಮಾನ ವೇತನ ಜಾರಿಗೊಳಿಸಬೇಕು. ಅಲ್ಲಿಯವರೆಗೆ ಕನಿಷ್ಠ ವೇತನ ತಿಂಗಳಿಗೆ ₨೧೫,೦೦೦ ನಿಗದಿಪಡಿಸಬೇಕು. ಜತೆಗೆ ಭವಿಷ್ಯ ನಿಧಿ, ಪಿಂಚಣಿ, ರಜಾ ಸೌಲಭ್ಯ, ರಾತ್ರಿ ಪಾಳಿಯ ಭತ್ಯೆ ಸೇರಿದಂತೆ ಇನ್ನಿತರೆ ಸುರಕ್ಷಾ ಕ್ರಮಗಳನ್ನು ತಪ್ಪದೇ ಜಾರಿಗೊಳಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಈ ವೇಳೆ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಕೆಪಿಟಿಸಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಕುಮಾರನಾಯಕ, ‘ಗುತ್ತಿಗೆ ಕಾರ್ಮಿಕರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಒದಗಿಸಲು ಶೀಘ್ರವೇ ಸಭೆ ಕರೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.