ಬೆಂಗಳೂರು: `ಆಧುನಿಕ ನಗರೀಕಣದ ಕಾರಣದಿಂದಾಗಿ ಗುಬ್ಬಿಗಳು ಇಂದು ತಮ್ಮ ನೆಲೆಯನ್ನೇ ಕಳೆದುಕೊಳ್ಳಬೇಕಾದ ಸಂದರ್ಭ ಎದುರಾಗಿದೆ~ ಎಂದು ಬಯೋಡೈವರ್ಸಿಟಿ ಕನ್ಸರ್ವೇಷನ್ ಇಂಡಿಯಾ ಲಿಮಿಟೆಡ್‌ನ ಅಧ್ಯಕ್ಷ ಚಂದ್ರಶೇಖರ್ ಹರಿಹರನ್ ಕಳವಳ ವ್ಯಕ್ತಪಡಿಸಿದರು.
ನಗರದ ಸೇಂಟ್ ಜೋಸೆಫ್ ಕಾಲೇಜಿನಲ್ಲಿ ಮಂಗಳವಾರ ಬಯೋಡೈವರ್ಸಿಟಿ ಕನ್ಸರ್ವೆಷನ್ ಇಂಡಿಯಾ ಲಿಮಿಟೆಡ್ ಹಾಗೂ ಜೆಡ್ ಹ್ಯಾಬಿಟ್ಯಾಟ್ ಆಯೋಜಿಸಿದ್ದ ಗುಬ್ಬಿಗಳ ಕುರಿತ ಅಂತರರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
`ಜೈವಿಕ ವ್ಯವಸ್ಥೆಯ ಸಮತೋಲನಕ್ಕೆ ಗುಬ್ಬಿಗಳೂ ಅಗತ್ಯ. ಆದರೆ ಮಾನವನ ಅತಿಯಾದ ಸ್ವಾರ್ಥದ ಕಾರಣದಿಂದ ಗುಬ್ಬಿಗಳು ಇಂದು ತಮ್ಮ ಬದುಕನ್ನೇ ಕಳೆದುಕೊಳ್ಳುತ್ತಿವೆ. ನಗರಗಳಿಂದ ಗುಬ್ಬಿಗಳು ದೂರಾಗುತ್ತಿರುವುದು ಜೈವಿಕ ವ್ಯವಸ್ಥೆಯ ಅಸಮತೋಲನಕ್ಕೆ ಕಾರಣವಾಗಿದೆ. ಮನುಷ್ಯ ತಾನೊಬ್ಬನೇ ಬದುಕಬೇಕೆಂಬ ಮನಸ್ಥಿತಿಯ ಫಲವಿದು~ ಎಂದು ಅವರು ವಿಷಾದಿಸಿದರು.
`ಕಳೆದ 40 ವರ್ಷಗಳಲ್ಲಿ ಭಾರತದ ಮಹಾನಗರಗಳ ಜನಸಂಖ್ಯೆ ಮಿತಿ ಮೀರಿ ಬೆಳೆಯುತ್ತಿದೆ. ಆಧುನಿಕ ಗೃಹ ನಿರ್ಮಾಣ ತಂತ್ರಜ್ಞಾನದಿಂದ ಮನೆಗಳಲ್ಲಿ ಗುಬ್ಬಿಗಳೂ ಸೇರಿದಂತೆ ಯಾವ ಪಕ್ಷಿಗಳ ಆವಾಸಕ್ಕೂ ಅವಕಾಶ ಸಿಗುತ್ತಿಲ್ಲ. ಇದರಿಂದ ಗುಬ್ಬಿಗಳು ನಗರಗಳನ್ನು ಬಿಟ್ಟು ಗ್ರಾಮೀಣ ಭಾಗಗಳಿಗೆ ವಲಸೆ ಹೋಗುತ್ತಿವೆ. ಹೀಗಾಗಿ ನಗರ ಪ್ರದೇಶಗಳಲ್ಲಿ ಗುಬ್ಬಿಗಳೇ ಇಲ್ಲದಂತಾಗಿವೆ~ ಎಂದು ಅವರು ಹೇಳಿದರು.
ಬೆಂಗಳೂರು ವಿಶ್ವವಿದ್ಯಾಲಯದ ಪರಿಸರ ವಿಜ್ಞಾನ ವಿಭಾಗದ ಸಂಶೋಧಕ ರಾಜಶೇಖರ್ ಮಾತನಾಡಿ, `ಬೆಂಗಳೂರಿನಲ್ಲಿ ಗುಬ್ಬಿಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವುದು ಆತಂಕದ ವಿಷಯ. ನಗರಗಳ ಮಾಲಿನ್ಯ ಹಾಗೂ ಮೊಬೈಲ್ ಟವರ್‌ಗಳ ಕಾರಣದಿಂದ ಗುಬ್ಬಿಗಳು ನಗರಗಳನ್ನು ಬಿಟ್ಟು ದೂರ ಹೋಗುತ್ತಿವೆ. ಇದರಿಂದ ನಗರ ಜೀವನದ ಜೈವಿಕ ವ್ಯವಸ್ಥೆಯೇ ಹಾಳಾಗುತ್ತಿದೆ~ ಎಂದು ಅವರು ತಿಳಿಸಿದರು.
`ನಗರದ ಜನತೆಗೆ ಗುಬ್ಬಿಗಳ ಬಗ್ಗೆ ಅರಿವು ಮೂಡಿಸುವ ಕೆಲಸವಾಗಬೇಕು. ಮನೆ ನಿರ್ಮಾಣದ ಸಂದರ್ಭದಲ್ಲಿ ಇತ್ತೀಚೆಗೆ ಪಕ್ಷಿಗಳ ಆವಾಸಕ್ಕೆ ಸ್ಥಳಾವಕಾಶ ಮಾಡಿಕೊಡುತ್ತಿರುವುದು ಉತ್ತಮ ಬೆಳವಣಿಗೆ. ಆಹಾರ ಲಭ್ಯತೆ ಹಾಗೂ ಗೂಡು ಕಟ್ಟುವ ಅವಕಾಶಗಳಿರುವ ನಗರಗಳ ಮಾರುಕಟ್ಟೆಗಳಲ್ಲಿ ಇಂದಿಗೂ ಗುಬ್ಬಿಗಳು ಹೆಚ್ಚಿನ ಸಂಖ್ಯೆಯಲ್ಲಿರುವುದು ಆಶಾವಾದ ಮೂಡಿಸುವಂತಿದೆ. ಹೀಗೆ ಆಹಾರ ಹಾಗೂ ಸ್ಥಳಾವಕಾಶದ ಲಭ್ಯತೆಯಿಂದ ಗುಬ್ಬಿಗಳನ್ನು ನಗರಗಳಲ್ಲಿ ಉಳಿಸಿಕೊಳ್ಳುವ ಪ್ರಯತ್ನಗಳು ಹೆಚ್ಚಾಗಬೇಕು~ ಎಂದರು.
ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ವಿಭಾಗದ ವಿಜ್ಞಾನಿ ಡಾ.ಹರೀಶ್ ಭಟ್ ಮಾತನಾಡಿ, `ಬದಲಾಗುತ್ತಿರುವ ನಗರಗಳಿಗೆ ಗುಬ್ಬಿಗಳೇ ಒಗ್ಗಿಕೊಳ್ಳುವ ಪ್ರಕ್ರಿಯೆ ನಡೆಯುತ್ತಿರುವುದು ಅಪಾಯಕಾರಿ ಬೆಳವಣಿಗೆ. ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುಬ್ಬಿಗಳು ಕಾಫಿ, ಟೀ, ಸೇರಿದಂತೆ ವಿದೇಶಿ ಆಹಾರಗಳನ್ನೇ ಅವಲಂಬಿಸಿವೆ. ಇದು ಜೈವಿಕ ವ್ಯವಸ್ಥೆಯ ಸೂಕ್ಷ್ಮತೆಯನ್ನೇ ಭಂಗಗೊಳಿಸುತ್ತದೆ~ ಎಂದರು.
ಸೇಂಟ್ ಜೋಸೆಫ್ ಕಾಲೇಜಿನ ಮುಖ್ಯಸ್ಥ ಡೇನಿಯಲ್ ಮಾತನಾಡಿ, `ಭೂಮಿಯ ಪರಿಸರ ಸಮತೋಲನದ ಭಾರ ಮನುಷ್ಯನ ಮೇಲೆಯೂ ಇದೆ. ಭೂಮಿಯಿಂದ ಅಗಾಧವಾದ ಸಂಪತ್ತನ್ನು ಪಡೆಯುವ ನಾವು ಮರಳಿ ಭೂಮಿಗೆ ಯಾವುದೇ ಕೊಡುಗೆಯನ್ನು ನೀಡುತ್ತಿಲ್ಲ. ಭೂಮಿಯ ಜೈವಿಕ ವ್ಯವಸ್ಥೆಯನ್ನು ಕಾಪಾಡುವ ಹಾಗೂ ಪರಿಸರವನ್ನು ಸುಸ್ಥಿರಗೊಳಿಸುವ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಮೇಲಿದೆ~ ಎಂದು ಅವರು ನುಡಿದರು.
ವಿಚಾರ ಸಂಕಿರಣದಲ್ಲಿ ಗುಬ್ಬಿಗಳ ಸ್ಥಿತಿಗತಿಗಳ ಕುರಿತು ಹೆಬ್ಬಾಳದ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಕೀಟಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಚಕ್ರವರ್ತಿ, ಅಲ್ ಅಮೀನ್ ಕಾಲೇಜಿನ ಉಪ ಪ್ರಾಂಶುಪಾಲ ಡಾ.ಅಥಾಜ್, `ನಮ್ಮ ಸೈಕಲ್~ ಸಂಘಟನೆಯ ಮುರಳಿ, ಗುಬ್ಬಿ ಲ್ಯಾಬ್ಸ್‌ನ ಸಂಸ್ಥಾಪಕ ಡಾ.ಸುಧೀಂದ್ರ ಮತ್ತಿತರರು ಪ್ರಬಂಧ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.