ADVERTISEMENT

ಗೃಹ ಇಲಾಖೆ ಅಂಗಳಕ್ಕೆ ವಿಚಾರಣಾ ವರದಿ

​ಪ್ರಜಾವಾಣಿ ವಾರ್ತೆ
Published 6 ಡಿಸೆಂಬರ್ 2017, 20:17 IST
Last Updated 6 ಡಿಸೆಂಬರ್ 2017, 20:17 IST

ಬೆಂಗಳೂರು: ದಿಣ್ಣೂರಿನ ‘ಶೆಟ್ಟಿ ಲಂಚ್ ಹೋಮ್’ ಹೋಟೆಲ್‌ ಮಾಲೀಕರ ಮೇಲೆ ನ. 9ರಂದು ಹಲ್ಲೆ ನಡೆಸಿದ್ದ ಆರೋಪದಡಿ ಜೆ.ಸಿ.ನಗರ ಉಪವಿಭಾಗದ ಎಸಿಪಿ ಮಂಜುನಾಥ್‌ ಬಾಬು ವಿರುದ್ಧ ಕೈಗೊಳ್ಳಲಾಗಿದ್ದ ಇಲಾಖಾ ವಿಚಾರಣಾ ವರದಿಯು ಗೃಹ ಇಲಾಖೆಗೆ ಸಲ್ಲಿಕೆಯಾಗಿದೆ.

ಉತ್ತರ ವಿಭಾಗದ ಡಿಸಿಪಿ ಚೇತನ್‌ಸಿಂಗ್‌ ರಾಥೋಡ್‌ ನೀಡಿದ್ದ ವರದಿಯನ್ನು ಉಲ್ಲೇಖಿಸಿ, ಎಸಿಪಿ ಅವರ ವಿರುದ್ದ ಶಿಸ್ತುಕ್ರಮ ಜರುಗಿಸುವಂತೆ ನಗರ ಪೊಲೀಸ್‌ ಕಮಿಷನರ್‌ ಟಿ.ಸುನೀಲ್‌ಕುಮಾರ್ ಅವರು ಡಿಸಿಪಿ–ಐಜಿ ನೀಲಮಣಿ ರಾಜು ಅವರಿಗೆ ವರದಿ ಸಲ್ಲಿಸಿದ್ದರು. ಅದೇ ವರದಿಯನ್ನು ಡಿಜಿಪಿ, ಗೃಹ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಸುಭಾಷ್‌ ಚಂದ್ರ ಅವರಿಗೆ ಕಳುಹಿಸಿದ್ದಾರೆ.

‘ಎಸಿಪಿ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಅಧಿಕಾರ ನನಗಿಲ್ಲ. ಹೀಗಾಗಿ ಗೃಹ ಇಲಾಖೆಗೆ ಶಿಫಾರಸು ಮಾಡಿದ್ದೇನೆ. ಅಲ್ಲಿಯ ಉನ್ನತ ಅಧಿಕಾರಿಗಳೇ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳಬೇಕಿದೆ’ ಎಂದು ನೀಲಮಣಿ ರಾಜು ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಆಯೋಗಕ್ಕೆ ದೂರು: ‘ವಿನಾಕಾರಣ ಹಲ್ಲೆ ಮಾಡಿರುವ ಎಸಿಪಿ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಹೋಟೆಲ್ ಮಾಲೀಕ ರಾಜೀವ್‌ ಅವರು ಮಾನವ ಹಕ್ಕು ಆಯೋಗಕ್ಕೆ ನ.21ರಂದು ದೂರು ನೀಡಿದ್ದಾರೆ.

‘ಘಟನೆ ಬಗ್ಗೆ ಆರ್‌.ಟಿ.ನಗರ ಠಾಣೆಗೆ ದೂರು ನೀಡಿದ್ದೇನೆ. ಅಲ್ಲಿಯ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿಲ್ಲ. ನ್ಯಾಯಕ್ಕಾಗಿ ಆಯೋಗದ ಮೋರೆ ಹೋಗಿದ್ದೇನೆ’ ಎಂದು ರಾಜೀವ್‌ ತಿಳಿಸಿದರು.

‘ಎಸಿಪಿ ಅವರು ಅನಗತ್ಯವಾಗಿ ವರ್ತಿಸಿ ಹಲ್ಲೆ ಮಾಡಿರುವುದಾಗಿ ಡಿಸಿಪಿ ಅವರೇ ವರದಿ ಕೊಟ್ಟಿದ್ದಾರೆ. ಅಷ್ಟಾದರೂ ಅವರ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಕಾನ್‌ಸ್ಟೆಬಲ್‌ ವಿರುದ್ಧ ಕೈಗೊಂಡ ಕ್ರಮ ಎಸಿಪಿ ಮೇಲೆಕಿಲ್ಲ?

‘ಹಲ್ಲೆ ವೇಳೆ ಎಸಿಪಿ ಜತೆಗಿದ್ದ ಕಾನ್‌ಸ್ಟೆಬಲ್‌ ರಾಜಾ ನಾಯಕ್‌ ವಿರುದ್ಧ ಈಗಾಗಲೇ ಶಿಸ್ತುಕ್ರಮ ಕೈಗೊಳ್ಳಲಾಗಿದ್ದು, ಅದೇ ಕ್ರಮವನ್ನು ಎಸಿಪಿ ವಿರುದ್ಧ ಏಕೆ ಕೈಗೊಳ್ಳುತ್ತಿಲ್ಲ’ ಎಂದು ಹೋಟೆಲ್‌ ಮಾಲೀಕರ ಸಂಘದ ಅಧ್ಯಕ್ಷ ಚಂದ್ರಶೇಖರ್‌ ಹೆಬ್ಬಾರ್‌ ಪ್ರಶ್ನಿಸಿದರು.

'10 ದಿನಗಳ ಹಿಂದಷ್ಟೇ ಸಂಘದ ಪದಾಧಿಕಾರಿಗಳೆಲ್ಲ ಸೇರಿ ಗೃಹ ಸಚಿವರನ್ನು ಭೇಟಿಯಾಗಿದ್ದೆವು. ಆಗ ಅವರು, ’ಎಸಿಪಿ ಕ್ಲಾಸ್‌ 1 ಅಧಿಕಾರಿ. ಅವರ ವಿರುದ್ಧ  ಡಿಜಿಪಿ ಅವರೇ ಕ್ರಮ ಜರುಗಿಸಲಿದ್ದಾರೆ’ ಎಂದು ಭರವಸೆ ನೀಡಿದ್ದರು. ಈಗ ಗೃಹ ಇಲಾಖೆಗೆ ವರದಿ ಹೋಗಿದ್ದು, ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ’ ಎಂದು ದೂರಿದರು. ‘ಇನ್ನೊಮ್ಮೆ ಗೃಹಸಚಿವರನ್ನು ಭೇಟಿಯಾಗುತ್ತೇವೆ. ಅಲ್ಲಿ ನಮಗೆ ನ್ಯಾಯ ಸಿಗದಿದ್ದರೆ, ಪ್ರತಿಭಟನೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.