ADVERTISEMENT

ಗೆಜೆಟ್‌ನಲ್ಲಿ ಆಚಾರ್ಯರ ಹೆಸರೇ ನಾಪತ್ತೆ !

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2012, 19:30 IST
Last Updated 15 ಫೆಬ್ರುವರಿ 2012, 19:30 IST

ಬೆಂಗಳೂರು: ಉನ್ನತ ಶಿಕ್ಷಣ ಸಚಿವರಾಗಿದ್ದ ಡಾ.ವಿ.ಎಸ್.ಆಚಾರ್ಯ ಅವರ ನಿಧನ ವಾರ್ತೆ ಕುರಿತು ಸರ್ಕಾರ ಮಂಗಳವಾರ ಹೊರಡಿಸಿರುವ ಗೆಜೆಟ್, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶದಲ್ಲಿ ಆಚಾರ್ಯ ಅವರ ಹೆಸರನ್ನು ಪ್ರಸ್ತಾಪಿಸದೆ ಅಗೌರವ ತೋರಿರುವ ಅಂಶ ಬೆಳಕಿಗೆ ಬಂದಿದೆ.

ಸರ್ಕಾರಿ ಗೆಜೆಟ್‌ನಲ್ಲಿ ಆಚಾರ್ಯ ಅವರ ಹೆಸರನ್ನೇ ಪ್ರಸ್ತಾಪಿಸಿಲ್ಲ. ಬದಲಿಗೆ ಉನ್ನತ ಶಿಕ್ಷಣ, ಯೋಜನೆ ಮತ್ತು ಸಾಂಖ್ಯಿಕ, ಮುಜರಾಯಿ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವರು ಮಂಗಳವಾರ ಮಧ್ಯಾಹ್ನ 1.02ಕ್ಕೆ ನಿಧನರಾದರು ಎಂದಷ್ಟೇ ತಿಳಿಸಲಾಗಿದೆ. ಆದೇಶದಲ್ಲೂ ಇದೇ ರೀತಿ ಇದೆ.

ಗೆಜೆಟ್‌ನಲ್ಲಿ ಫೆ.14ರಿಂದ 16ರವರೆಗೆ ಮೂರು ದಿನ ಶೋಕ ಆಚರಿಸಲಾಗುವುದು ಎಂದು ತಿಳಿಸಲಾಗಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಆದೇಶದಲ್ಲಿ 14 ಮತ್ತು 15ರಂದು ಮಾತ್ರ ಶೋಕಾಚರಣೆ ಎಂದು ಪ್ರಕಟಿಸಲಾಗಿದೆ.

ಎರಡು ದಿನಗಳ ಶೋಕಾಚರಣೆ ಎಂದು ಆದೇಶ ಹೊರಡಿಸಿದ ನಂತರ ತಪ್ಪಿನ ಅರಿವಾಗಿ, ಅದನ್ನು ಹಿಂದಕ್ಕೆ ಪಡೆದು ಮೂರು ದಿನಗಳ ಶೋಕಾಚರಣೆ ಎಂದು ಮತ್ತೊಂದು ಆದೇಶ ಹೊರಡಿಸಲಾಗಿದೆ. ಆದರೆ ಅದರಲ್ಲೂ ಆಚಾರ್ಯರ ಹೆಸರು ಉಲ್ಲೇಖವಾಗಿಲ್ಲ.

ಮೃತರ ಗೌರವಾರ್ಥ ಬೆಂಗಳೂರು ನಗರ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮಂಗಳವಾರ ಸಾರ್ವಜನಿಕ ರಜೆ ಘೋಷಿಸಲಾಗಿದ್ದು, ಈ ಮೂರೂ ಜಿಲ್ಲೆಗಳಲ್ಲಿ ಎಲ್ಲ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳನ್ನು ಮುಚ್ಚಲು ಆದೇಶಿಸಲಾಗಿದೆ ಎಂದು ಗೆಜೆಟ್‌ನಲ್ಲಿದೆ.

ಆದರೆ ಇಲಾಖೆಯ ಆದೇಶದಲ್ಲಿ ಬೆಂಗಳೂರು ನಗರ ಮತ್ತು ಉಡುಪಿ ಜಿಲ್ಲೆಯಾದ್ಯಂತ ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂದು ತಿಳಿಸಲಾಗಿದೆ. ಸರ್ಕಾರದ ಪ್ರಮುಖ ಇಲಾಖೆಯೊಂದು ಹೊರಡಿಸುವ ಆದೇಶಗಳಲ್ಲೇ ಈ ರೀತಿ ತಪ್ಪುಗಳು ಆಗಿರುವುದು ಚರ್ಚೆಗೆ ಗ್ರಾಸವಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.