ADVERTISEMENT

ಗೇಟ್ ಬಿದ್ದು ಬಾಲಕ ಸಾವು

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2018, 19:58 IST
Last Updated 16 ಮಾರ್ಚ್ 2018, 19:58 IST

ಬೆಂಗಳೂರು: ಜಯನಗರ 3ನೇ ಹಂತದ ಡಸ್ಟಾಲ್ ಸಿಸ್ಟಮ್ ಕಂಪನಿ ಬಳಿ ಕಬ್ಬಿಣದ ಗೇಟ್ ಬಿದ್ದು ಶಾಲಾ ವಿದ್ಯಾರ್ಥಿ ಶುಕ್ರವಾರ ಸಂಜೆ ಮೃತಪಟ್ಟಿದ್ದಾನೆ.

ಜಯನಗರ 1ನೇ ಹಂತದ ನಿವಾಸಿ ಚಂದ್ರಮ್ಮ ಅವರ ಮಗ ಕೆ.ಮಂಜುನಾಥ್ (12) ಮೃತ ವಿದ್ಯಾರ್ಥಿ. ವಿಜಯ ಕನ್ನಡ ಪ್ರೌಢ ಶಾಲೆಯಲ್ಲಿ ಆರನೇ ತರಗತಿ ಓದುತ್ತಿದ್ದ ಆತ, ಸ್ನೇಹಿತರ ಜತೆ ಶಾಲೆಯಿಂದ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ ಅವಘಡ ಸಂಭವಿಸಿದೆ.

ಪಾದಚಾರಿ ಮಾರ್ಗದಲ್ಲಿ ಮಂಜುನಾಥ್ ಸೇರಿದಂತೆ ಮೂವರು ಬಾಲಕರು ನಡೆದುಕೊಂಡು ಬರುತ್ತಿದ್ದರು. ಕಂಪನಿಯ ಪ್ರವೇಶ ದ್ವಾರದ ಬಳಿ ಬರುತ್ತಿದ್ದಂತೆ ಬಾಲಕನ ಮೇಲೆ ಗೇಟ್‌ ಬಿದ್ದಿದೆ. ಮತ್ತಿಬ್ಬರು ಬಾಲಕರು ಅಪಾಯದಿಂದ ಪಾರಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿ ಶ್ರೀಧರ್ ‘ಪ್ರಜಾವಾಣಿ’ಗೆ ತಿಳಿಸಿದರು.

ADVERTISEMENT

ಉರುಳಿಸಬಹುದಾದ ಗೇಟ್‌ ವ್ಯವಸ್ಥೆ ಅದಾಗಿತ್ತು. ಭದ್ರತಾ ಸಿಬ್ಬಂದಿ ಅದನ್ನು ಲಾಕ್ ಮಾಡಿರಲಿಲ್ಲ. ಹೀಗಾಗಿ, ಅದು ಟ್ರ್ಯಾಕ್‌ನಿಂದ ಆಕಸ್ಮಿಕವಾಗಿ ಹೊರಬಂದಿದೆ. ಅದರ ನಿರ್ವಹಣೆಗೆಂದು ನಾಲ್ವರು ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಅವರು ಅದನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿರಲಿಲ್ಲ. ಬಾಲಕನ ಮೇಲೆ ಬಿದ್ದಿದ್ದ ಗೇಟ್‌ ಎತ್ತಲು ಯಾವೊಬ್ಬ ಸಿಬ್ಬಂದಿಯೂ ಬರಲಿಲ್ಲ. ಸ್ಥಳೀಯರೇ ಅದನ್ನು ಎತ್ತಿದರು ಎಂದು ಹೇಳಿದರು.

‘ಗೇಟ್‌ ಅನ್ನು ಶೇ 90 ರಷ್ಟು ಯಾವಗಲೂ ಮುಚ್ಚಿರುತ್ತೇವೆ. ಆದರೆ, ಆಕಸ್ಮಿಕವಾಗಿ ಟ್ರ್ಯಾಕ್‌ನಿಂದ ಹೊರಬಂದಿದೆ’ ಎಂದು ಭದ್ರತಾ ಸಿಬ್ಬಂದಿ ಹೇಳಿಕೆ ಕೊಟ್ಟಿದ್ದಾರೆ. ನಿರ್ಲಕ್ಷ್ಯದ ಆರೋಪದಡಿ ಕಂಪನಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿಚಾರಣೆಗೆ ಹಾಜರಾಗುವಂತೆ ಕಂಪನಿಯ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ ಎಂದು ಜಯನಗರ ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.