ADVERTISEMENT

ಗೋದಾಮಿನಲ್ಲಿ ಬೆಂಕಿ ಅನಾಹುತ: ಲಕ್ಷಾಂತರ ರೂ ಮೌಲ್ಯದ ವಸ್ತುಗಳು ಭಸ್ಮ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2012, 20:20 IST
Last Updated 20 ಫೆಬ್ರುವರಿ 2012, 20:20 IST

ಬೆಂಗಳೂರು: ಹೊಸೂರು ರಸ್ತೆ ಸಮೀಪದ ಗಾರ್ವೆಬಾವಿ ಪಾಳ್ಯದ ಮುನೇಶ್ವರ ಲೇಔಟ್‌ನಲ್ಲಿರುವ ಚಿಂದಿ ವಸ್ತುಗಳ ಗೋದಾಮು ಒಂದರಲ್ಲಿ ಸೋಮವಾರ ಅಗ್ನಿ ಅನಾಹುತ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ.

ಗೋದಾಮಿನ ಒಳ ಭಾಗದಲ್ಲಿ ಮಧ್ಯಾಹ್ನ 12 ಗಂಟೆ ಸುಮಾರಿಗೆ ಬೆಂಕಿ ಹೊತ್ತಿಕೊಂಡು ಹೊಗೆ ಬರಲಾರಂಭಿಸಿತು. ಇದನ್ನು ನೋಡಿದ ಸ್ಥಳೀಯರು ಅಗ್ನಿಶಾಮಕ ನಿಯಂತ್ರಣ ಕೊಠಡಿಗೆ ಕರೆ ಮಾಡಿ ವಿಷಯ ತಿಳಿಸಿದರು.

ನಾಲ್ಕು ವಾಹನಗಳಲ್ಲಿ ಸ್ಥಳಕ್ಕೆ ಬಂದ ಅಗ್ನಿಶಾಮಕ ಸಿಬ್ಬಂದಿ ಅರ್ಧ ತಾಸಿಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.

ಗೋದಾಮಿನ ಮಾಲೀಕರಾದ ವೇಲು ಮತ್ತು ಇಳಂಗೋವನ್ ಅವರು ಅಗ್ನಿ ಅನಾಹುತದಲ್ಲಿ ಸುಮಾರು ಒಂದು ಲಕ್ಷ ರೂಪಾಯಿ ಮೌಲ್ಯದ ವಸ್ತುಗಳು ಸುಟ್ಟು ಹೋಗಿವೆ ಎಂದು ದೂರು ಕೊಟ್ಟಿದ್ದಾರೆ.

`ಗೋದಾಮಿನಲ್ಲಿ ಬೆಂಕಿ ಹೇಗೆ ಹೊತ್ತಿಕೊಂಡಿತು ಎಂಬುದು ಗೊತ್ತಾಗಿಲ್ಲ~ ಎಂದು ಜಯನಗರ ಅಗ್ನಿಶಾಮಕ ಠಾಣಾಧಿಕಾರಿ ಸಿ.ಕೆ.ಶಿವಕುಮಾರ್ `ಪ್ರಜಾವಾಣಿ~ಗೆ ತಿಳಿಸಿದರು.

ಆತ್ಮಹತ್ಯೆ
ತಿಲಕ್‌ನಗರ ಸಮೀಪದ ಎನ್‌ಎಎಲ್ ಲೇಔಟ್ ನಿವಾಸಿ ಕಿರಣ್ (30) ಎಂಬುವರು ಭಾನುವಾರ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಕಿರಣ್ ಅವರ ಪತ್ನಿ ನಿರ್ಮಲಾ ಅವರು ಹೆರಿಗೆ ಸಂದರ್ಭದಲ್ಲಿ ಆಸ್ಪತ್ರೆಯಲ್ಲೇ ಒಂದು ವಾರದ ಹಿಂದೆ   ಮೃತಪಟ್ಟಿದ್ದರು. ಒಬ್ಬಂಟಿಯಾಗಿದ್ದ ಕಿರಣ್ ಮನೆಯಲ್ಲೇ ಬೆಳಿಗ್ಗೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.

ಇದನ್ನು ಗಮನಿಸಿದ ನೆರೆಹೊರೆಯವರು ನೇಣಿನ ಕುಣಿಕೆಯಿಂದ ಅವರನ್ನು ಕೆಳಗಿಳಿಸಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಅವರು ಆಸ್ಪತ್ರೆಯಲ್ಲಿ ರಾತ್ರಿ ಮೃತಪಟ್ಟರು ಎಂದು ಪೊಲೀಸರು ತಿಳಿಸಿದ್ದಾರೆ. ತಿಲಕ್‌ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ಸರಗಳವು
 ದುಷ್ಕರ್ಮಿಗಳು ವೃದ್ಧೆಯ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಬಸವನಗುಡಿಯ ಕರಿಯಪ್ಪ ರಸ್ತೆಯ ಸಮೀಪ ಭಾನುವಾರ ಸಂಜೆ ನಡೆದಿದೆ.

ತಮಿಳುನಾಡು ಮೂಲದ ಪ್ರೇಮಾವತಿ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಬಸವನಗುಡಿಯಲ್ಲಿರುವ ಮಗಳ ಮನೆಗೆ ಬಂದಿದ್ದ ಪ್ರೇಮಾವತಿ ಅವರು ಸೌತ್‌ಎಂಡ್ ವೃತ್ತದ ಬಳಿಯ ಕರಿಯಪ್ಪ ರಸ್ತೆಯಲ್ಲಿ ಸಂಜೆ ವಾಯುವಿಹಾರ ಮಾಡುತ್ತಿದ್ದಾಗ ಇಬ್ಬರು ದುಷ್ಕರ್ಮಿಗಳು ಬೈಕ್‌ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ.

ಕಿಡಿಗೇಡಿಗಳು 110 ಗ್ರಾಂ ತೂಕದ ಸರ ಕಿತ್ತುಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಬಸವನಗುಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬಂಧನ
 ದರೋಡೆ ಮಾಡಲು ಹೊಂಚು ಹಾಕುತ್ತಿದ್ದ ಆರೋಪಿಗಳನ್ನು ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಸುಂಕದಕಟ್ಟೆಯ ಅರುಣ್‌ಕುಮಾರ್ (26), ಉಲ್ಲಾಳ ಉಪನಗರದ ವಾಸು (23), ಜೆ.ಸಿ.ನಗರದ ಕಾಂತರಾಜು (24), ಪಟ್ಟೇಗಾರ ಪಾಳ್ಯದ       ಮಂಜುನಾಥ (22), ಬನಶಂಕರಿಯ ಶ್ರೀಕಂಠ ಪ್ರಸಾದಿ (33) ಮತ್ತು   ಸುಲ್ತಾಪಾಳ್ಯದ ಕಾರ್ತಿಕೇಯನ್ (28) ಬಂಧಿತರು. ಆರೋಪಿಗಳಿಂದ ಕಾರು, ದ್ವಿಚಕ್ರ ವಾಹನ, ಐದು ಮೊಬೈಲ್ ಫೋನ್‌ಗಳು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳು ಬ್ಯಾಟರಾಯನಪುರದ ಸಮೀಪ ಕೈಗಾರಿಕೋದ್ಯಮಿಯೊಬ್ಬರನ್ನು ಅಡ್ಡಗಟ್ಟಿ ಕೊಲೆ ಮಾಡಿ ಹಣ ದೋಚಲು ಹೊಂಚು ಹಾಕುತ್ತಿದ್ದರು. ಈ ಬಗ್ಗೆ ಮಾಹಿತಿ ಕಲೆ ಹಾಕಿ ಅವರನ್ನು ಬಂಧಿಸಲಾಯಿತು.

ಕಾಂತರಾಜು, ಶ್ರೀಕಂಠ ಪ್ರಸಾದಿ ಮತ್ತು ಕಾರ್ತಿಕೇಯನ್ ಅಪರಾಧ ಹಿನ್ನೆಲೆಯುಳ್ಳ ವ್ಯಕಿಗಳಾಗಿದ್ದಾರೆ. ಅವರ ವಿರುದ್ಧ ಜೆ.ಸಿ.ನಗರ, ಬಸವನಗುಡಿ ಹಾಗೂ ಕಮರ್ಷಿಯಲ್‌ಸ್ಟ್ರೀಟ್ ಠಾಣೆಯಲ್ಲಿ ಕೊಲೆ ಮತ್ತಿತರ ಪ್ರಕರಣಗಳು ದಾಖಲಾಗಿದ್ದವು ಎಂದು ಪೊಲೀಸರು ಹೇಳಿದ್ದಾರೆ.

ಅಪರಾಧ ವಿಭಾಗದ (ಪೂರ್ವ) ಜಂಟಿ ಪೊಲೀಸ್ ಕಮಿಷನರ್ ಬಿ.ದಯಾನಂದ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಪಿ ಎಸ್.ವೈ.ಹಾದಿಮನಿ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT