ಬೆಂಗಳೂರು: ನಗರದ `ಕನ್ನಡ ಜನಶಕ್ತಿ~ ಸಂಸ್ಥೆಯು ನೀಡುವ `ಶಾಂತವೇರಿ ಗೋಪಾಲಗೌಡ ಪ್ರಶಸ್ತಿ~ಗೆ ಜಾನಪದ ವಿದ್ವಾಂಸ ಡಾ.ಹಿ.ಶಿ.ರಾಮಚಂದ್ರೇಗೌಡ ಅವರನ್ನು ಆಯ್ಕೆ ಮಾಡಲಾಗಿದೆ.
ಈ ತಿಂಗಳ 27ರಂದು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ 25,000 ನಗದು ಮತ್ತು ಸ್ಮರಣ ಫಲಕವನ್ನು ಒಳಗೊಂಡಿದೆ.
`ದಿವಂಗತ ಶಾಂತವೇರಿ ಗೋಪಾಲಗೌಡರು ಕನ್ನಡ ನಾಡು ಕಂಡ ಸಜ್ಜನ ಮತ್ತು ದಿಟ್ಟ ರಾಜಕಾರಣಿ. ಕನ್ನಡ ನಾಡು- ನುಡಿಯ ಬಗ್ಗೆ ಗೌಡರ ಕಾಳಜಿ, ಬದ್ಧತೆ ಆದರ್ಶ ಪ್ರಾಯವಾದುದು. ಗೌಡರ ಜೀವನಾದರ್ಶಗಳನ್ನು ಪಾಲಿಸಿಕೊಂಡು ಬರುತ್ತಿರುವ, ಆ ಮೂಲಕ ಅವರ ನೆನಪನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುತ್ತಿರುವ ನಾಡಿನ ಶ್ರೇಷ್ಠ ವ್ಯಕ್ತಿಗಳಿಗೆ ಗೌಡರ ಹೆಸರಲ್ಲಿ ಪ್ರತಿ ವರ್ಷ ಪ್ರಶಸ್ತಿ ನೀಡಲಾಗುತ್ತಿದೆ~ ಎಂದು ಸಂಸ್ಥೆಯ ಅಧ್ಯಕ್ಷ ಸಿ.ಕೆ.ರಾಮೇಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
`ಹಾಸನ ಜಿಲ್ಲೆಯ ಹಿರಿಸಾವೆಯವರಾದ ರಾಮಚಂದ್ರೇಗೌಡರು ಮೈಸೂರು ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿದ್ದರು. ಸಮಕಾಲೀನ ಚಳವಳಿಯ ಒಡನಾಡಿಯಾಗಿ, ಲೇಖಕರಾಗಿ ಕ್ರಿಯಾಶೀಲ ಬದುಕು ನಡೆಸಿಕೊಂಡು ಬಂದಿರುವ ಅವರಿಗೆ ಈ ಸಲದ ಗೋಪಾಲಗೌಡರ ಪ್ರಶಸ್ತಿ ನೀಡಲು ಸಂಸ್ಥೆಗೆ ಹೆಮ್ಮೆಯೆನಿಸುತ್ತದೆ~ ಎಂದು ಅವರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.