ಬೆಂಗಳೂರು: ‘ಮಾಜಿ ಶಿಕ್ಷಣ ಸಚಿವ ಎಚ್.ಜಿ. ಗೋವಿಂದೇಗೌಡರು ರಾಜಕೀಯ ಪಾವಿತ್ರ್ಯವನ್ನು ಉಳಿಸಿಕೊಂಡಿದ್ದ ಅಪರೂಪದ ರಾಜಕಾರಣಿ’ ಎಂದು ಸಾಹಿತಿ ಗೊ.ರು.ಚನ್ನಬಸಪ್ಪ ಹೇಳಿದರು.
ಭಾರತ ಯಾತ್ರಾ ಕೇಂದ್ರ, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಬಿಎಂಪಿ ವತಿಯಿಂದ ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಮಲೆನಾಡ ಗಾಂಧಿ ಖ್ಯಾತಿಯ ಎಚ್.ಜಿ. ಗೋವಿಂದೇಗೌಡರ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು.
‘ಗೋವಿಂದೇಗೌಡರು ಜೀವನ ಶಿಸ್ತು, ವೈಯಕ್ತಿಕ ಶೀಲಚಾರಿತ್ರ್ಯ, ಸಾಮಾಜಿಕ ನ್ಯಾಯಪರತೆ, ಜೀವನ ಮೌಲ್ಯಗಳ ಒಟ್ಟು ಮೊತ್ತವಾಗಿದ್ದರು. ಜನಸೇವೆಗಾಗಿಯೇ ಹುಟ್ಟಿದ ಅವರು ಜನರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದಿದ್ದಾರೆ’ ಎಂದರು.
‘ಸ್ವಾಭಿಮಾನಿ, ಸ್ವತಂತ್ರ ಮನೋಭಾವ ಹೊಂದಿದ್ದ ಗೋವಿಂದೇಗೌಡರು, ಯಾರ ಹಂಗಿಗೂ ಒಳಗಾಗಿರಲಿಲ್ಲ. ಇತ್ತೀಚಿನ ರಾಜಕೀಯ ವ್ಯವಸ್ಥೆ, ನೈತಿಕ ಭ್ರಷ್ಟಾಚಾರವನ್ನು ಕಂಡು ಅವರು ಸಂಕಟ ಪಡುತ್ತಿದ್ದರು’ ಎಂದು ವಿಷಾದ ವ್ಯಕ್ತಪಡಿಸಿದರು.
ಶಾಸಕ ಸುರೇಶ್‌ಕುಮಾರ್ ಮಾತನಾಡಿ, ‘ರಾಜ್ಯ ಸಾಕಷ್ಟು ಶಿಕ್ಷಣ ಸಚಿವರನ್ನು ಕಂಡಿದೆ. ಅವರಲ್ಲಿ ಉತ್ತಮ ಸಚಿವರಾಗಿ ಗುರುತಿಸಿಕೊಂಡವರು ಗೋವಿಂದೇಗೌಡರು ಮಾತ್ರ. ಅವರು ಶಿಕ್ಷಣ ಸಚಿವರಾಗಿದ್ದ ವೇಳೆ ಎಲ್ಲ ತೊಡಕುಗಳನ್ನು ನಿವಾರಿಸಿ ಶಿಕ್ಷಕರನ್ನು ನೇಮಕ ಮಾಡಿದ್ದರು’ ಎಂದು ಹೇಳಿದರು.
‘ಮಹಾತ್ಮ ಗಾಂಧಿ ಅವರ ಮಾರ್ಗದಲ್ಲಿ ನಡೆದ ಗೋವಿಂದೇಗೌಡ ಅಂತಹ ಮಹನೀಯರು ಪ್ರಸ್ತುತ ಸಮಾಜಕ್ಕೆ ಬೇಕಾಗಿದ್ದಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.