ADVERTISEMENT

ಗ್ರಾಹಕರಿಗೆ ಖುಷಿ, ಬಂಕ್‌ ಸಿಬ್ಬಂದಿಗೆ ಫಜೀತಿ

ಪೆಟ್ರೋಲ್‌, ಡೀಸೆಲ್‌ ದರ ಪ್ರತಿದಿನವೂ ಪರಿಷ್ಕರಣೆ l ಶುಕ್ರವಾರ ಬೆಳಿಗ್ಗೆಯಿಂದಲೇ ಮಾರಾಟ ಜಾರಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2017, 19:30 IST
Last Updated 17 ಜೂನ್ 2017, 19:30 IST
ಗ್ರಾಹಕರಿಗೆ ಖುಷಿ, ಬಂಕ್‌ ಸಿಬ್ಬಂದಿಗೆ ಫಜೀತಿ
ಗ್ರಾಹಕರಿಗೆ ಖುಷಿ, ಬಂಕ್‌ ಸಿಬ್ಬಂದಿಗೆ ಫಜೀತಿ   

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ದರವನ್ನು ಪ್ರತಿದಿನವೂ ಪರಿಷ್ಕರಣೆ ಮಾಡುತ್ತಿರುವುದಕ್ಕೆ ಗ್ರಾಹಕರು ಖುಷಿ ವ್ಯಕ್ತಪಡಿಸಿದ್ದು, ಬಂಕ್‌ ಮಾಲೀಕರು ಹಾಗೂ ಸಿಬ್ಬಂದಿ ಫಜೀತಿ ಅನುಭವಿಸುತ್ತಿದ್ದಾರೆ.

ಶುಕ್ರವಾರ (ಜೂ. 16) ಬೆಳಿಗ್ಗೆ 6ರಿಂದಲೇ ನಗರದಲ್ಲಿ ಪರಿಷ್ಕೃತ ದರದಲ್ಲೇ ತೈಲ ಮಾರಾಟ ಶುರುವಾಗಿದೆ. ಕೆಲ ಬಂಕ್‌ಗಳಲ್ಲಿ ಗ್ರಾಹಕರೇ ಪಂಪ್‌ಗಳಲ್ಲಿ (ಯೂನಿಟ್‌) ದರ ಪರಿಷ್ಕರಣೆ ಆಗಿದೆಯೇ? ಎಂಬುದನ್ನು ಪರಿಶೀಲಿಸಿ ತೈಲ ಖರೀದಿಸುತ್ತಿದ್ದಾರೆ.

ದರ ಪರಿಷ್ಕರಣೆ ಬಗ್ಗೆ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಪದ್ಮನಾಭನಗರದ ಬೈಕ್‌ ಸವಾರ ಗೋವಿಂದರಾಜ್‌, ‘ಪ್ರತಿದಿನವೂ ದರ ನಿಗದಿ ಒಳ್ಳೆಯದು. ಗ್ರಾಹಕರಿಗೆ ಅನುಕೂಲವಾಗಲಿದೆ’ ಎಂದರು.

ADVERTISEMENT

‘ಇಷ್ಟು ದಿನ 15 ದಿನಕ್ಕೊಮ್ಮೆ ದರ ಬದಲಾವಣೆಯಾಗುತ್ತಿತ್ತು. ಬಂಕ್‌ನವರು ಸಂಗ್ರಹವಿದ್ದ ತೈಲವನ್ನು ಹೊಸ ದರಕ್ಕೆ ಮಾರುತ್ತಿದ್ದರು. ಇನ್ನು ಮುಂದೆ ನ್ಯಾಯಯುತವಾಗಿ ತೈಲ ಸಿಗಲಿದೆ’ ಎಂದರು.

ಇನ್ನೊಬ್ಬ ಬೈಕ್‌ ಸವಾರ ರಫೀಕ್‌ ಅಹ್ಮದ್‌ ಮಾತನಾಡಿ, ‘ಪರಿಷ್ಕರಣೆ  ಖುದ್ದಾಗಿ ತಿಳಿದುಕೊಳ್ಳಲು ಮೊಬೈಲ್‌ಗೆ ಆ್ಯಪ್‌ ಹಾಕಿಕೊಂಡಿದ್ದೇನೆ. ಬಂಕ್‌ನವರು ಮೋಸ ಮಾಡುವ ಮಾತೇ ಇಲ್ಲ’ ಎಂದು ಹೇಳಿದರು.

‘ಎರಡು ದಿನಕ್ಕೊಮ್ಮೆ ಪೆಟ್ರೋಲ್‌ ಹಾಕಿಸುತ್ತೇನೆ. 15 ದಿನಕ್ಕೊಮ್ಮೆ ದರ ಹೆಚ್ಚಾದಾಗ ಸಿಟ್ಟು ಬರುತ್ತಿತ್ತು. ಕಡಿಮೆಯಾದಾಗ ಖುಷಿಯಾಗುತ್ತಿತ್ತು. ಈಗ ನಿತ್ಯವೂ ಅವುಗಳ ಅನುಭವ ಸಿಗಲಿದೆ’ ಎಂದು ತಿಳಿಸಿದರು.


ಮೈಸೂರು ರಸ್ತೆಯ ರಚನಾ ಬಂಕ್‌ನಲ್ಲಿ ದರ ಪಟ್ಟಿಯಲ್ಲಿದ್ದ ಅಂಕಿಗಳನ್ನು ಪರಿಷ್ಕೃತ ದರಕ್ಕೆ ತಕ್ಕಂತೆ ಸಿಬ್ಬಂದಿ  ಶನಿವಾರ ಬೆಳಿಗ್ಗೆ ಬದಲಾಯಿಸಿದರು

ಬಾಡಿಗೆ ನಿರ್ಧಾರಕ್ಕೆ ಅನುಕೂಲ: ‘ವಾಹನದ ಬಾಡಿಗೆಯನ್ನೂ ಪ್ರತಿದಿನವೂ ಪರಿಷ್ಕರಣೆ ಮಾಡಲು ಅನುಕೂಲವಾಗಲಿದೆ’ ಎಂದ ಟೆಂಪೊ ಚಾಲಕ ಸೈಯದ್‌ ರೆಹಮತ್‌, ‘ದರ ಹೆಚ್ಚಳವಾದರೂ  ಕೇಳಿದಷ್ಟು ಬಾಡಿಗೆ ಸಿಗುತ್ತಿರಲಿಲ್ಲ. ಈಗ ದಿನವೂ ದರಕ್ಕೆ ತಕ್ಕಂತೆ ಬಾಡಿಗೆ ಕೇಳಬಹುದು’ ಎಂದು ಹೇಳಿದರು. ಗೋರಿಪಾಳ್ಯದ ಆಟೊ ಚಾಲಕ ಮೋಹನ್‌, ‘ದಿನದ ದುಡಿಮೆ ನಂಬಿ ಬದುಕುವವರಿಗೆ ದಿನವೂ ದರ ಪರಿಷ್ಕರಣೆ ಅನುಕೂಲ’ ಎಂದರು.

ಒಂದೇ ದಿನದಲ್ಲಿ ₹50 ಸಾವಿರ ನಷ್ಟ: ಬಂಕ್‌ ಸಿಬ್ಬಂದಿ ಅನುಭವಿಸುತ್ತಿರುವ ಫಜೀತಿ ಬಗ್ಗೆ ಮಾತನಾಡಿದ ಮೈಸೂರು ರಸ್ತೆಯ ‘ಪಿ.ಆರ್‌.ಕೆ ಆಟೊ ಸರ್ವಿಸ್‌ ಬಂಕ್‌’ ಮೇಲ್ವಿಚಾರಕ ನಂದ್‌ಕುಮಾರ್‌, ‘ಮೂರು ದಿನಕ್ಕೆ ಆಗುವಷ್ಟು ತೈಲವನ್ನು ಒಮ್ಮೆಯೇ ಖರೀದಿಸುತ್ತೇವೆ.   ದಿನವೂ ದರ ಕಡಿಮೆಯಾದರೆ ನಷ್ಟ ಉಂಟಾಗುತ್ತದೆ.   ಎರಡು ದಿನದಲ್ಲೇ ₹50,000 ನಷ್ಟವಾಗಿದೆ’ ಎಂದು ಹೇಳಿದರು.

ದರ ಬದಲಾವಣೆ ಸ್ವಯಂಚಾಲಿತ: ದರ ಪರಿಷ್ಕರಣೆ ಅನುಷ್ಠಾನಕ್ಕೆ ಬಂಕ್‌ಗಳಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲಾಗುತ್ತಿದೆ. ಭಾರತೀಯ ತೈಲ ನಿಗಮದ (ಐಒಸಿ) ಬಂಕ್‌ಗಳಲ್ಲಿ ‘SITEOMAT’ ಸಾಫ್ಟ್‌ವೇರ್‌ ಬಳಕೆಯಲ್ಲಿದೆ. ಅದರ ಮೂಲಕ ದರ ಬದಲಾವಣೆ ಆಗುತ್ತಿದೆ.

‘ರಾತ್ರಿ ಕೆಲಸ ಮುಗಿದ ಮೇಲೆ ಪರಿಷ್ಕೃತ ದರವನ್ನು ಸಾಫ್ಟ್‌ವೇರ್‌ನಲ್ಲಿ ನಮೂದಿಸಿ ಮನೆಗೆ ಹೋಗುತ್ತೇವೆ. ಮರುದಿನ ಬೆಳಿಗ್ಗೆ 6 ಗಂಟೆಗೆ ಅದು ಸ್ವಯಂಚಾಲಿತವಾಗಿ ಬದಲಾಗುತ್ತದೆ’ ಎಂದು ಕಸ್ತೂರಬಾ ನಗರದ ‘ರಚನಾ ಆಟೊ ಸರ್ವಿಸ್‌ ಬಂಕ್‌’ ಮೇಲ್ವಿಚಾರಕ ಉಮಾಶಂಕರ್‌ ಹೇಳಿದರು.

‘ಕೆಲವು ಬಾರಿ ಸಾಫ್ಟ್‌ವೇರ್‌ ಸಹ ಕೆಲಸ ಮಾಡುವುದಿಲ್ಲ. ಹೀಗಾಗಿ ಪ್ರತಿದಿನವೂ ಬೆಳಿಗ್ಗೆ 6 ಗಂಟೆಗಿಂತ ಮುಂಚೆಯೇ ಬಂದು ಪಂಪ್‌ ಪರಿಶೀಲಿಸಬೇಕು. ರಾತ್ರಿ ತಡವಾಗಿ ಹೋಗಿ ಬೆಳಿಗ್ಗೆ ಬೇಗನೇ ಬರುವ ಸ್ಥಿತಿ ಬಂದಿದೆ’ ಎಂದರು.

ಹಿಂದೂಸ್ತಾನ್‌ ಪೆಟ್ರೋಲಿಯಂ ನಿಗಮದ (ಎಚ್‌ಪಿಸಿಎಲ್‌) ಬಂಕ್‌ಗಳ ದರ ಪರಿಷ್ಕರಣೆ ಜವಾಬ್ದಾರಿಯನ್ನು ನಿಗಮದ ಮುಂಬೈ ಕಚೇರಿಯ ಸಿಬ್ಬಂದಿ ವಹಿಸಿಕೊಂಡಿದ್ದಾರೆ.

***

ದರ ಪರಿಷ್ಕರಿಸದಿದ್ದರೆ ₹5 ಲಕ್ಷ ದಂಡ ವಿಧಿಸುತ್ತಾರೆ. ಪರವಾನಗಿಯೂ ರದ್ದಾಗುತ್ತದೆ. ಇದು ಬಂಕ್‌ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದ್ದು, ಸಿಬ್ಬಂದಿಯ ಬದುಕು ಸಹ ಹಾಳಾಗಲಿದೆ
ನಂದಕುಮಾರ್‌, ಮೇಲ್ವಿಚಾರ–ಪಿ.ಆರ್‌. ಕೆ ಆಟೊ ಸರ್ವಿಸ್‌ ಬಂಕ್‌, ಮೈಸೂರು ರಸ್ತೆ

***

25 ವರ್ಷದಿಂದ ಚಾಲಕನಾಗಿದ್ದೇನೆ. ತೈಲ ದರ ಏರಿಕೆ, ಇಳಿಕೆಯಿಂದ ಸಮಸ್ಯೆಯೂ ಆಗಿದೆ. ಪ್ರತಿದಿನ ದರ ನಿಗದಿಗಿಂತ ದರವನ್ನೇ ಇಳಿಕೆ ಮಾಡಿದರೆ ನಮ್ಮಂಥ ಚಾಲಕರಿಗೆ ಅನುಕೂಲ
ಸೈಯದ್‌ ರೆಹಮತ್‌, ಬಾಪೂಜಿನಗರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.