ADVERTISEMENT

ಗ್ರಾಹಕರ ವೇದಿಕೆಯಿಂದ 10 ಲಕ್ಷ ದಂಡ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 19:50 IST
Last Updated 16 ಫೆಬ್ರುವರಿ 2011, 19:50 IST

ಬೆಂಗಳೂರು: ನಿವೇಶನ ನೀಡುವುದಾಗಿ ವಂಚಿಸುತ್ತಿರುವ ಕಂಟ್ರಿಕ್ಲಬ್ ವಿರುದ್ಧ ಗ್ರಾಹಕರ ವೇದಿಕೆ ಮೊರೆ ಹೋಗುತ್ತಿರುವವರ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ಈಗ ವೈಯಾಲಿಕಾವಲ್ ಗೃಹ ನಿರ್ಮಾಣ ಸಹಕಾರ ಸಂಘದ ವಿರುದ್ಧವೂ ಅನೇಕ ಪ್ರಕರಣಗಳು ವೇದಿಕೆ ಮೆಟ್ಟಿಲೇರಿವೆ.

ಈಗಾಗಲೇ ಹಲವು ಪ್ರಕರಣಗಳಲ್ಲಿ ಈ ಸಂಘಕ್ಕೆ ಲಕ್ಷ-ಲಕ್ಷ ದಂಡ ವಿಧಿಸಿರುವ ವೇದಿಕೆ, ಅಪರೂಪದ ಪ್ರಕರಣವೊಂದರಲ್ಲಿ ್ಙ10 ಲಕ್ಷ ದಂಡ ವಿಧಿಸಿ ಆದೇಶಿಸಿದೆ. ಇದರ ವಿರುದ್ಧ ಜಯನಗರದ ಸಚ್ಚಿದಾನಂದ ಅವರು ಅರ್ಜಿ ಸಲ್ಲಿಸಿದ್ದರು.

ವಿಶ್ವೇಶ್ವರಯ್ಯನಗರ ಲೇಔಟ್‌ನಲ್ಲಿ 4000 ಚದರ ಅಡಿ ನಿವೇಶನ ನೀಡುವುದಾಗಿ ವಾಗ್ದಾನ ಮಾಡಿದ್ದ ಸಂಘ ಅರ್ಜಿದಾರರಿಂದ 1983ರಿಂದ 1992 ರವರೆಗೆ ಒಟ್ಟು ್ಙ1.10ಲಕ್ಷ  ಪಡೆದುಕೊಂಡಿತ್ತು. ಆದರೆ 2010ರ ಅಂತ್ಯದವರೆಗೂ ಹಣವಾಗಲೀ ನಿವೇಶನವಾಗಲಿ ಸಿಗಲಿಲ್ಲ. ಅರ್ಜಿದಾರರು ಹಲವಾರು ಬಾರಿ ಮಾಡಿಕೊಂಡ ಮನವಿಗಳು ವ್ಯರ್ಥವಾದವು.

ಈ ಹಿನ್ನೆಲೆಯಲ್ಲಿ ಅವರು 3ನೇ ಹೆಚ್ಚುವರಿ ಜಿಲ್ಲಾ ಗ್ರಾಹಕರ ವೇದಿಕೆ ಮೊರೆ ಹೋದರು. ಸಂಘದ ಕ್ರಮಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ವೇದಿಕೆ ಅಧ್ಯಕ್ಷ ಟಿ.ರಾಜಶೇಖರಯ್ಯ ನೇತೃತ್ವದ ಪೀಠ  ್ಙ10 ಲಕ್ಷ  ದಂಡ ವಿಧಿಸಿದೆ. ಅರ್ಜಿದಾರರು ನೀಡಿರುವ ್ಙ1.10 ಲಕ್ಷ ಜೊತೆಗೆ ನ್ಯಾಯಾಲಯದ ವೆಚ್ಚ ್ಙ5,000 ನೀಡುವಂತೆ ಆದೇಶಿಸಿದೆ.

ಮೊಬೈಲ್ ಕಂಪೆನಿಗೆ ದಂಡ
ದೋಷಪೂರಿತ ಮೊಬೈಲ್ ಹ್ಯಾಂಡ್‌ಸೆಟ್ ನೀಡಿದ್ದೂ ಅಲ್ಲದೇ ಅದನ್ನು ನಿಯಮದಂತೆ ರಿಪೇರಿ ಮಾಡಿಕೊಡಲು ವಿಫಲವಾದ ಸೋನಿ ಎರಿಕ್‌ಸನ್ ಮೊಬೈಲ್ ಕಮ್ಯುನಿಕೇಷನ್ ಕಂಪೆನಿ ಹಾಗೂ ಇತರರಿಗೆ ದಂಡ ವಿಧಿಸಿ 3ನೇ ಜಿಲ್ಲಾ ಹೆಚ್ಚುವರಿ ಗ್ರಾಹಕರ ವೇದಿಕೆ ಆದೇಶಿಸಿದೆ.

ಕಲ್ಯಾಣ ನಗರದ ಆರ್.ಲೋಕೇಶ್ ಎನ್ನುವವರು ಕಂಪೆನಿ ಹಾಗೂ ಮೊಬೈಲ್ ಡೀಲರ್‌ಗಳಾದ ರಾಜಾಜಿನಗರದ ನಾಗಾ ಎಲೆಕ್ಟ್ರಾನಿಕ್ಸ್ ಹಾಗೂ ಎಕ್ಸೆಲ್ ಫ್ರಂಟ್‌ಲೈನ್ ಸರ್ವೀಸ್‌ಗಳ ವಿರುದ್ಧ ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಇದರ ಜೊತೆಗೆ ಮೊಬೈಲ್‌ಗೆ ನೀಡಲಾಗಿರುವ 25 ಸಾವಿರ ರೂಪಾಯಿಗಳನ್ನು ಮರು ಪಾವತಿಸುವಂತೆ ವೇದಿಕೆಯ ಅಧ್ಯಕ್ಷ ಟಿ. ರಾಜಶೇಖರಯ್ಯ ನೇತೃತ್ವದ ಪೀಠ ಆದೇಶಿಸಿದೆ.

ಅರ್ಜಿದಾರರು ಖರೀದಿಸಿದ್ದ ಮೊಬೈಲ್‌ನ ಕ್ಯಾಮೆರಾ ಸರಿಯಾಗಿ ಕೆಲಸ ಮಾಡುತ್ತಿರಲಿಲ್ಲ. ಒಂದು ವರ್ಷದ ವಾರೆಂಟಿ ಇದ್ದ ಕಾರಣ, ಅವರು ಪ್ರತಿವಾದಿಗಳಲ್ಲಿ ರಿಪೇರಿ ಮಾಡುವಂತೆ ಹಲವಾರು ಬಾರಿ ಮನವಿ ಮಾಡಿಕೊಂಡರು. ಒಂದು ಬಾರಿ ರಿಪೇರಿಯಾಗಿದೆ ಎಂದು ಕಂಪೆನಿ ತಿಳಿಸಿದ್ದರೂ, ಅದು ನಿಜವಾಗಿ ರಿಪೇರಿ ಆಗಿರಲಿಲ್ಲ. ಇದರಿಂದ ಬೇಸತ್ತು ಅವರು ಗ್ರಾಹಕರ ವೇದಿಕೆ ಮೊರೆ ಹೋಗಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.