ADVERTISEMENT

ಘನತ್ಯಾಜ್ಯ ವಿಲೇವಾರಿ ಟೆಂಡರ್: ಅನುಮತಿ ಪಡೆಯಲು ಆದೇಶ

​ಪ್ರಜಾವಾಣಿ ವಾರ್ತೆ
Published 12 ಜನವರಿ 2012, 19:30 IST
Last Updated 12 ಜನವರಿ 2012, 19:30 IST

ಬೆಂಗಳೂರು: ಘನತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ  ಇದೇ 17 ಹಾಗೂ 21ರಂದು ನಡೆಯಲಿರುವ ಟೆಂಡರ್ ಪ್ರಕ್ರಿಯೆಯನ್ನು ಹೈಕೋರ್ಟ್ ಅನುಮತಿ ಇಲ್ಲದೇ ಅಂತಿಮಗೊಳಿಸದಂತೆ ಕೋರ್ಟ್ ಗುರುವಾರ ಬಿಬಿಎಂಪಿಗೆ ಆದೇಶಿಸಿದೆ.

ಈ ಟೆಂಡರ್‌ಗೆ ಸಂಬಂಧಪಟ್ಟಂತೆ ಕಳೆದ ಡಿಸೆಂಬರ್ 13ರಂದು ಹೊರಡಿಸಲಾದ ಅಧಿಸೂಚನೆ ಪ್ರಶ್ನಿಸಿ ಎಚ್.ಟಿ.ಜಗದೀಶ್ ಹಾಗೂ ಇತರರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಬಿ.ಎಸ್.ಪಾಟೀಲ್ ನಡೆಸಿದರು.

ಪಾರದರ್ಶಕ ಕಾಯ್ದೆಯನ್ನು ಉಲ್ಲಂಘಿಸಿ ಈ ಅಧಿಸೂಚನೆ ಹೊರಡಿಸಲಾಗಿದೆ ಎನ್ನುವುದು ಅರ್ಜಿದಾರರ ದೂರು. `ಅಧಿಸೂಚನೆ ಹೊರಟ ದಿನ ಮತ್ತು ಟೆಂಡರ್ ಅಂತಿಮಗೊಳಿಸುವ ದಿನದ ಮಧ್ಯೆ ಕನಿಷ್ಠ 45 ದಿನಗಳ ಅಂತರ ಇರಬೇಕು ಎಂದು ಟೆಂಡರ್ ನಿಯಮದಲ್ಲಿ ಉಲ್ಲೇಖಿಸಲಾಗಿದೆ. ಆದರೆ ಈ ಪ್ರಕರಣದಲ್ಲಿ ಒಂದು ತಿಂಗಳಿಗಿಂತಲೂ ಕಡಿಮೆ ಅವಧಿ ನೀಡಲಾಗಿದೆ.

ADVERTISEMENT

ಇಂಡಿಯಾ ಟ್ರೇಡ್ ಜರ್ನಲ್‌ನಲ್ಲಿ ಅಧಿಸೂಚನೆ ಪ್ರಕಟ ಮಾಡಬೇಕು ಎನ್ನುವುದು ನಿಯಮ. ಆದರೆ ಸ್ಥಳೀಯ ಪತ್ರಿಕೆಗಳಲ್ಲಿ ಮಾತ್ರ ಅಧಿಸೂಚನೆ ಹೊರಡಿಸಲಾಗಿದ್ದು ಇದು ಕಾನೂನು ಬಾಹಿರ. 5 ಕೋಟಿ ಮೊತ್ತಕ್ಕಿಂತ ಅಧಿಕ ವೆಚ್ಚದ ಕಾಮಗಾರಿಯಾಗಿದ್ದರೆ ಅದಕ್ಕೆ ಸರ್ಕಾರದ ಪೂರ್ವಾನುಮತಿ ಅಗತ್ಯ ಇದೆ. ಆದರೆ ಇಲ್ಲಿ ಅದನ್ನೂ ಪಾಲನೆ ಮಾಡಿಲ್ಲ.

ಈ ಟೆಂಡರ್ ಅನ್ನು ವಿಶೇಷ ಉನ್ನತ ಮಟ್ಟದ ಸಮಿತಿಯ ಮುಂದಿಟ್ಟು ಅನುಮೋದನೆ ಪಡೆದುಕೊಳ್ಳಬೇಕು ಎಂದು 2010ರಲ್ಲಿ ನಡೆದ ಪಾಲಿಕೆ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ ಅದೂ ಆಗಿಲ್ಲ~ ಎನ್ನುವುದು ಅರ್ಜಿದಾರರ ಆರೋಪ.

ವಾದ, ಪ್ರತಿವಾದ ಆಲಿಸಿದ ನಂತರ ನ್ಯಾಯಮೂರ್ತಿಗಳು ವಿಚಾರಣೆಯನ್ನು ಇದೇ 30ಕ್ಕೆ ಮುಂದೂಡಿದರು. ಟೆಂಡರ್ ಅಧಿಸೂಚನೆಗೆ ಅವರು ತಡೆ ನೀಡಲು ನಿರಾಕರಿಸಿದರು. ಆದರೆ ಅದನ್ನು ಅಂತಿಮಗೊಳಿಸುವ ಮುನ್ನ ಕೋರ್ಟ್ ಅನುಮತಿ ಅಗತ್ಯ ಎಂದರು.

ಖುದ್ದು ಹಾಜರಿ: ಎಚ್ಚರಿಕೆ!

ನಗರದ ಅಂಚೆ ಕಚೇರಿಗಳಿಗೆ ಸಂಬಂಧಿಸಿದಂತೆ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿದಾರರು ಕೇಳಿರುವ ಮಾಹಿತಿಯನ್ನು ವಾರದೊಳಗೆ ನೀಡದೆ ಹೋದರೆ, `ಚೀಫ್ ಪೋಸ್ಟ್ ಮಾಸ್ಟರ್ ಜನರಲ್~ ಹೈಕೋರ್ಟ್‌ಗೆ ಖುದ್ದು ಹಾಜರು ಇರಬೇಕಾಗುತ್ತದೆ ಎಂದು ಕೋರ್ಟ್ ಗುರುವಾರ ಎಚ್ಚರಿಸಿದೆ.

ಮಲ್ಲೇಶ್ವರದ ಬಳಿ ಇರುವ ಅಂಚೆ ಕಚೇರಿಯನ್ನು ಪ್ರಧಾನ ಅಂಚೆ ಕಚೇರಿಗೆ ಸೇರ್ಪಡೆಗೊಳಿಸುತ್ತಿರುವ ಕ್ರಮ ಪ್ರಶ್ನಿಸಿ ಎಸ್. ಛೋಪ್ರಾ ಎನ್ನುವವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ.

ಎಲ್ಲ ಅಂಚೆ ಕಚೇರಿಗಳ ಆರ್ಥಿಕ ಸ್ಥಿತಿ, ಯಾವ ಯಾವ ಅಂಚೆ ಕಚೇರಿಗಳು ಪ್ರಧಾನ ಕಚೇರಿಗೆ ಸೇರ್ಪಡೆಗೊಳ್ಳುತ್ತಿವೆ ಎಂಬಿತ್ಯಾದಿ ವಿವರಗಳನ್ನು ಕೋರಿ ಅರ್ಜಿ ಸಲ್ಲಿಸಿದರೂ ಇದುವರೆಗೆ ಯಾವುದೇ ಮಾಹಿತಿ ಇಲ್ಲ ಎಂದು ಅರ್ಜಿದಾರರು ದೂರಿದ್ದಾರೆ. ಇದರಿಂದ ಪೀಠ ತೀವ್ರ ಅಸಮಾಧಾನ ವ್ಯಕ್ತಪಡಿಸಿ ವಾರದ ಗಡುವು ನೀಡಿದೆ.

`ಜಾಗ ತೆರವುಗೊಳಿಸಿ~

ಇಂದಿರಾನಗರದ ಎಚ್‌ಎಎಲ್ 2ನೇ ಹಂತದ ಅಪ್ಪರೆಡ್ಡಿಪಾಳ್ಯ ಬಳಿ ನಾಗರಿಕ ಸೌಲಭ್ಯಕ್ಕೆ ಮೀಸಲು ಇರಿಸಿರುವ ಜಾಗವನ್ನು ತೆರವುಗೊಳಿಸಿ ಹಿಂದಿನ ಸ್ಥಿತಿಗೆ ತರುವಂತೆ ಹೈಕೋರ್ಟ್ ಸರ್ಕಾರಕ್ಕೆ ಬುಧವಾರ ಆದೇಶಿಸಿದೆ.

ಇಲ್ಲಿಯ ಜಮೀನನ್ನು 30 ವರ್ಷಗಳ ಗುತ್ತಿಗೆಗೆ ಇಂದಿರಾನಗರ ಸಾಮಾಜಿಕ ಕ್ಷೇಮಾಭಿವೃದ್ಧಿ    ಟ್ರಸ್ಟ್‌ಗೆ ನೀಡಿರುವ ಕ್ರಮ ಪ್ರಶ್ನಿಸಿ `ಇಂದಿರಾನಗರ ಕ್ಷೇಮಾಭಿವೃದ್ಧಿ ಸಂಘ~ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ನಡೆಸುತ್ತಿದೆ. ಕೋರ್ಟ್ ಈ ಹಿಂದೆ ನೀಡಿದ್ದ ಆದೇಶದ ಹೊರತಾಗಿಯೂ ಅದನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ ಎನ್ನುವುದು ಅವರ ದೂರು. ಈ ಹಿನ್ನೆಲೆಯಲ್ಲಿ ತಮ್ಮ ಆದೇಶ ಪಾಲನೆ ಆದ ಕುರಿತು ವಸ್ತುಸ್ಥಿತಿ ವಿವರಿಸುವಂತೆ ಪೀಠ ಅಧಿಕಾರಿಗಳಿಗೆ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.