ADVERTISEMENT

ಚರ್ಚ್ ದಾಳಿ -ವರದಿ ನಿಷ್ಪಕ್ಷಪಾತವಾಗಿದೆ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2011, 20:15 IST
Last Updated 2 ಫೆಬ್ರುವರಿ 2011, 20:15 IST


ಬೆಂಗಳೂರು: ರಾಜ್ಯದಲ್ಲಿ ಚರ್ಚ್‌ಗಳ ಮೇಲೆ ನಡೆದ ದಾಳಿಯ ವರದಿ ಸಲ್ಲಿಸಿರುವ ನ್ಯಾಯಮೂರ್ತಿ ಸೋಮಶೇಖರ್ ಆಯೋಗ ಕಾರ್ಯ ನಿಷ್ಪಕ್ಷಪಾತ ವಾಗಿದೆ ಎಂದು ಸಾಹಿತಿ ಚಿದಾನಂದ ಮೂರ್ತಿ ಇಲ್ಲಿ ಅಭಿಪ್ರಾಯಪಟ್ಟರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ವಿರೋಧ ಪಕ್ಷಗಳು ರಾಜಕೀಯ ದುರುದ್ದೇಶದಿಂದ ವರದಿಯನ್ನು ಸಿ.ಬಿ.ಐ ಗೆ ವಹಿಸಬೇಕೆಂದು ಹೇಳುತ್ತಿವೆ ಎಂದ ಅವರು, ಈ ವರದಿಯನ್ನು ಆಡಳಿತ ಪಕ್ಷವೇ ಬರೆಸಿಕೊಂಡಿದೆ ಎಂಬ ಪ್ರತಿಪಕ್ಷಗಳ ಮಾತನ್ನು ತಳ್ಳಿಹಾಕಿದರು. ರಾಜ್ಯದಲ್ಲಿ ಒಡಿಶಾ, ಗುಜರಾತ್ ಮಾದರಿಯಲ್ಲೇ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು. ವಿದೇಶಿ ಹಣದಿಂದ ಕ್ರೈಸ್ತ ಮಿಷನರಿಗಳು ಬಡವರು, ಗಿರಿಜನರನ್ನು ಗುರಿಯಾಗಿಟ್ಟುಕೊಂಡು ಮತಾಂತರ ಕಾರ್ಯವನ್ನೇ ಅಸ್ತ್ರ ಮಾಡಿಕೊಂಡಿವೆ. ಪ್ರಕ್ರಿಯೆ ಹೀಗೆ ಮುಂದುವರೆದರೆ ಕೆಲವೇ ವಷರ್ರ್ಳಲ್ಲಿ ಹಿಂದುಗಳ ಪ್ರಾಬಲ್ಯ ಕಡಿಮೆಯಾಗಲಿದೆ ಎಂದು ವಿಷಾದಿಸಿದರು.

‘ದೇಶದಲ್ಲಿ ಮುಸ್ಲಿಮರ ಸಂಖ್ಯೆ ಗಣನೀಯವಾಗಿ ಬೆಳೆಯುತ್ತಿದೆ. ಆತಂಕಕಾರಿ ಸಂಗತಿ ಎಂದರೆ ಬೆಂಗಳೂರಿನ ಕೆಲ ಮುಸ್ಲಿಂ ಶಾಲೆಗಳಲ್ಲಿ ರಾಷ್ಟ್ರಗೀತೆ, ನಾಡಗೀತೆ ಹಾಡುವುದನ್ನು ನಿಷೇಧ ಮಾಡಿದ್ದಾರೆ. ಇಂತಹ ಮೂಲಭೂತವಾದಿಗಳ ಕೈಗೆ ಸಿಲುಕಿ ಹಿಂದೂ ಧರ್ಮ ಅವನತಿಯ ಹಾದಿಯಲ್ಲಿ ಸಾಗಿದೆ. ಈಗಲಾದರೂ ಹಿಂದೂಗಳು ಜಾಗೃತರಾಗಬೇಕು’ ಎಂದು ಕರೆ ನೀಡಿದರು.

ಆದರೆ ರಾಷ್ಟ್ರಗೀತೆ ನಿಷೇಧಿಸಿರುವ ಶಾಲೆಗಳ ಹೆಸರು ಹೇಳಲು ಅವರು ನಿರಾಕರಿಸಿದರು. ನ್ಯಾಯಮೂರ್ತಿ ಸೋಮಶೇಖರ್ ಮೇಲೆ ನನಗೆ ಸಂಪೂರ್ಣ ನಂಬಿಕೆ ಇದೆ. ಅವರು ಯಾರ ಒತ್ತಡಕ್ಕೂ ಮಣಿಯದೆ ನ್ಯಾಯಯುತ ವರದಿ ನೀಡಿದ್ದಾರೆ ಎಂದರು.
 ಈ ಹಿನ್ನೆಲೆಯಲ್ಲಿ ಈ ಪ್ರಕರಣಗಳ ಬಗ್ಗೆ ಮತ್ತೊಮ್ಮೆ ಸಿಬಿಐ ತನಿಖೆಗೆ ವಹಿಸುವುದು ಅನಗತ್ಯ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.