ADVERTISEMENT

ಚಾಕು ಇರಿತ; ದೂರು–ಪ್ರತಿದೂರು ದಾಖಲು

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2018, 19:30 IST
Last Updated 20 ಮಾರ್ಚ್ 2018, 19:30 IST

ಬೆಂಗಳೂರು: ಶಾಲೆ ಬಳಿ ಪಾರ್ಟಿ ಮಾಡುತ್ತಿದ್ದುದನ್ನು ಪ್ರಶ್ನಿಸಿದ್ದಕ್ಕೆ ಕಾಂಗ್ರೆಸ್ ಕಾರ್ಯಕರ್ತ ಸುರೇಶ್ ಹಾಗೂ ಅವರ ಸಹಚರರು ತಮಗೆ ಚಾಕುವಿನಿಂದ ಇರಿದಿದ್ದಾರೆ ಎಂದು ಆರೋಪಿಸಿ ಸಾಮಾಜಿಕ ಕಾರ್ಯಕರ್ತ ಪರಮೇಶ್ ಎಂಬುವರು ಕಾಡುಗೋಡಿ ಠಾಣೆಗೆ ದೂರು ಕೊಟ್ಟಿದ್ದಾರೆ.

ಆದರೆ, ಈ ಆರೋಪವನ್ನು ಅಲ್ಲಗೆಳೆದಿರುವ ಸುರೇಶ್ ಸಹಚರರು, ‘ಪರಮೇಶ್ ಅವರಿಗೆ ಚಾಕು ಚುಚ್ಚಿದ್ದು ಯಾರೆಂಬುದು ನಮಗೆ ಗೊತ್ತಿಲ್ಲ. ಮಾರ್ಚ್ 17ರ ರಾತ್ರಿ ಅವರೇ ನಮ್ಮ ಮೈಮೇಲೆ ಕಾರು ಹತ್ತಿಸಿ ಕೊಲ್ಲಲು ಯತ್ನಿಸಿದರು. ಹೀಗಾಗಿ, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು’ ಎಂದು ಪ್ರತಿದೂರು ನೀಡಿದ್ದಾರೆ.

ಹಾರ್ನ್ ಮಾಡಿದ್ದಕ್ಕೆ ಹಲ್ಲೆ: ‘ಕುಂಬೇನ ಅಗ್ರಹಾರ ನಿವಾಸಿಯಾದ ನಾನು, ಮಾರ್ಚ್ 17ರ ರಾತ್ರಿ ಕೆಲಸದ ನಿಮಿತ್ತ ಪತ್ನಿ ಜತೆ ಹೊರಗೆ ಹೋಗಿದ್ದೆ. ರಾತ್ರಿ 8.45ರ ಸುಮಾರಿಗೆ ಕಾರಿನಲ್ಲಿ ಮನೆಗೆ ವಾಪಸಾಗುತ್ತಿದ್ದಾಗ, ಮನೆ ಸಮೀಪದ ಸರ್ಕಾರಿ ಶಾಲೆ ಬಳಿ ಸುರೇಶ್ ಹಾಗೂ ಸಹಚರರು ಹುಟ್ಟುಹಬ್ಬ ಆಚರಿಸುತ್ತಿದ್ದರು. ರಸ್ತೆ ಮಧ್ಯೆ ಬಿಯರ್ ಬಾಟಲಿಗಳನ್ನು ಹಿಡಿದುಕೊಂಡು ಕಿರುಚಾಡುತ್ತಿದ್ದರು’ ಎಂದು ಪರಮೇಶ್ ಪೊಲೀಸರಿಗೆ ಹೇಳಿಕೆ ಕೊಟ್ಟಿದ್ದಾರೆ.

ADVERTISEMENT

‌‘ನಮಗೆ ದಾರಿ ಬಿಡದಿದ್ದಕ್ಕೆ ಪದೇ ಪದೇ ಹಾರ್ನ್ ಮಾಡಿದೆ. ಇದರಿಂದ ಕೋಪಗೊಂಡು ಅವರು ಗಲಾಟೆ ಶುರು ಮಾಡಿದರು. ಈ ಹಂತದಲ್ಲಿ ನಾನು ವೇಗವಾಗಿ ವಾಹನ ಚಾಲನೆ ಮಾಡಿಕೊಂಡು ಮನೆಯತ್ತ ಹೊರಟು ಹೋದೆ.

‘ಸ್ವಲ್ಪ ಸಮಯದಲ್ಲೇ ಮನೆ ಹತ್ತಿರವೂ ಬಂದ ಅವರು, ‘ಹಾರ್ನ್ ಮಾಡಿ ತೊಂದರೆ ಕೊಡುತ್ತೀಯಾ. ಹಿಂದೆಯೂ ಇದೇ ರೀತಿ ನಮ್ಮೊಂದಿಗೆ ಗಲಾಟೆ ಮಾಡಿದ್ದೆ. ಆಗ ಹೇಗೋ ಬಚಾವ್ ಆಗಿದ್ದೆ. ಆದರೆ, ಈಗ ಸುಮ್ಮನೆ ಬಿಡುವುದಿಲ್ಲ’ ಎನ್ನುತ್ತ ಬಟನ್ ಚಾಕುವಿನಿಂದ ಹೊಟ್ಟೆಗೆ ಇರಿದರು. ಕೂಡಲೇ ಸ್ಥಳೀಯರು ನನ್ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದರು. ಗಂಭೀರ ಸ್ವರೂಪದ ಗಾಯವಾಗಿದ್ದು, ವೈದ್ಯರು ಹತ್ತು ಹೊಲಿಗೆಗಳನ್ನು ಹಾಕಿದ್ದಾರೆ. ಕೊಲೆ ಉದ್ದೇಶದಡಿ ಆರೋಪಿಗಳ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

‘ಶಾಲೆ ನಿಮ್ಮಪ್ಪನದ್ದಾ ಎಂದ’: ‘ಆ ದಿನ ನಾನು, ಸುರೇಶ್, ಮುರಳಿ ಹಾಗೂ ಗಿರೀಶ್ ಶಾಲೆ ಬಳಿ ನಿಂತಿದ್ದು ನಿಜ. ಆದರೆ, ಪಾನಮತ್ತರಾಗಿರಲಿಲ್ಲ. ಕಾರಿನಲ್ಲಿ ಬಂದ ಪರಮೇಶ್ ಹಾಗೂ ಆತನ ಪತ್ನಿ, ‘ಏನ್ರೋ ಇಲ್ಲಿ ನಿಂತಿದ್ದೀರಾ. ಶಾಲೆ ನಿಮ್ಮಪ್ಪನದ್ದಾ ಎಂದರು. ಅಲ್ಲದೇ, ಅಲ್ಲೆ ಬಿದ್ದಿದ್ದ ದೊಣ್ಣೆಯಿಂದ ನಮ್ಮ ಮೇಲೆ ಹಲ್ಲೆ ನಡೆಸಿದರು. ಮೈಮೇಲೆ ಕಾರನ್ನೂ ಹತ್ತಿಸಲು ಮುಂದಾದರು. ಹೀಗಾಗಿ, ದಂಪತಿಯನ್ನು ಬಂಧಿಸಿ ನಮಗೆ ನ್ಯಾಯ ಕೊಡಿಸಬೇಕು’ ಎಂದು ಶ್ರೀನಿವಾಸ್ ಎಂಬುವರು ಭಾನುವಾರ ಪ್ರತಿದೂರು ಕೊಟ್ಟಿದ್ದಾರೆ.

ಹಳೇ ವೈಷಮ್ಯ, ವಿಚಾರಣೆ

‘ಸುರೇಶ್ ಹಾಗೂ ಪರಮೇಶ್ ಇಬ್ಬರೂ ಸ್ಥಳೀಯ ನಿವಾಸಿಗಳೇ ಆಗಿದ್ದು, ಹಳೇ ವೈಷಮ್ಯದದಿಂದ ಪುನಃ ಗಲಾಟೆ ಮಾಡಿಕೊಂಡಿದ್ದಾರೆ. ಪರಮೇಶ್‌ಗೆ ಚಾಕು ಇರಿದಿದ್ದು ಯಾರು ಎಂಬುದು ಗೊತ್ತಾಗಿಲ್ಲ. ಎಲ್ಲರನ್ನೂ ಠಾಣೆಗೆ ಕರೆಸಿ ವಿಚಾರಣೆ ನಡೆಸುತ್ತಿದ್ದೇವೆ. ಶಾಲೆ ಸಮೀಪದ ಸಿ.ಸಿ ಟಿ.ವಿ ಕ್ಯಾಮೆರಾಗಳನ್ನೂ ಪರಿಶೀಲಿಸುತ್ತಿದ್ದೇವೆ’ ಎಂದು ಕಾಡುಗೋಡಿ ಪೊಲೀಸರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.