ADVERTISEMENT

ಚಾಲಕ–ನಿರ್ವಾಹಕನಿಗೆ ಬಿಎಂಟಿಸಿ ಶ್ರೀರಕ್ಷೆ

ಭೂತಾನ್ ಯುವತಿಯರ ಜತೆ ಅಸಭ್ಯ ವರ್ತನೆ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 20:16 IST
Last Updated 18 ಮಾರ್ಚ್ 2014, 20:16 IST

ಬೆಂಗಳೂರು: ಉತ್ತರಪ್ರದೇಶ ಮೂಲದ ಯುವತಿ ಜತೆ ಅನುಚಿತವಾಗಿ ವರ್ತಿಸಿದ ಆರೋಪದಡಿ ಬಿಎಂಟಿಸಿ ಚಾಲಕನನ್ನು ಸೇವೆಯಿಂದ ವಜಾ ಮಾಡಿರುವ ಬಿಎಂಟಿಸಿ, ಒಂದೂವರೆ ವರ್ಷದ ಹಿಂದೆ ಭೂತಾನ್‌ ಮೂಲದ ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದ ಚಾಲಕ ಹಾಗೂ ನಿರ್ವಾಹಕನ ವಿರುದ್ಧ ಈವರೆಗೂ ಕ್ರಮ ಕೈಗೊಂಡಿಲ್ಲ.

2012ರ ಡಿ.27ರಂದು ಬಿಎಂಟಿಸಿ ವೋಲ್ವೊ ಬಸ್‌ನ ಚಾಲಕ ಮಲ್ಲೇಶ್‌ ಮತ್ತು ನಿರ್ವಾಹಕ ಜಯರಾಂ ಎಂಬುವರು ಯುವತಿಯರ ಜತೆ ಅಸಭ್ಯವಾಗಿ ವರ್ತಿಸಿದ್ದರು. ಈ ಘಟನೆ ನಂತರ ಆರೋಪಿಗಳನ್ನು ನಾಲ್ಕು ವಾರಗಳ ಕಾಲ ಅಮಾನತು ಮಾಡಿದ್ದ ಬಿಎಂಟಿಸಿ, ಪ್ರಕರಣದ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಬಿಎಂಟಿಸಿ (ರಕ್ಷಣೆ ಮತ್ತು ವಿಚಕ್ಷಣ ವಿಭಾಗ) ನಿರ್ದೇಶಕ ಬಿ.ಕೆ.ಸಿಂಗ್ ಅವರಿಗೆ ಆದೇಶಿಸಿತ್ತು. ಆದರೆ, ಪ್ರಕರಣದ ತನಿಖೆ ಈವರೆಗೂ ಪೂರ್ಣಗೊಂಡಿಲ್ಲ. ಆರೋಪಿಗಳು ಪ್ರಸ್ತುತ ಬಿಎಂಟಿಸಿಯಲ್ಲೇ ಉತ್ತಮ ಹುದ್ದೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

2012ರ ಪ್ರಕರಣದ ಬಗ್ಗೆ ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಫರ್ವೇಜ್‌ ಅವರನ್ನು ಸಂಪರ್ಕಿಸಿದಾಗ, ‘ತನಿಖೆ ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದರು.

ಭೂತಾನ್‌ ಮೂಲದ ಯುವತಿಯರು ಆ ದಿನ ಬೆಳಿಗ್ಗೆ 7 ಗಂಟೆ ಸುಮಾರಿಗೆ ಬಿಎಂಟಿಸಿ ವೊಲ್ವೊ ಬಸ್‌ನಲ್ಲಿ (ಕೆಎ-01, 1751 ಮಾರ್ಗ ಸಂಖ್ಯೆ- 500ಡಿ) ಕಮ್ಮನಹಳ್ಳಿಯಿಂದ ಮಾರತ್‌ಹಳ್ಳಿಗೆ ಹೊರಟಿದ್ದರು. ದಿನದ ಪಾಸ್ ನೀಡುವ ಸಂಬಂಧ ಚಾಲಕ ಹಾಗೂ ನಿರ್ವಾಹಕ ಅವರ ಜತೆ ಜಗಳವಾಡಿದ್ದರು. ಬಸ್‌ ಟಿನ್ ಫ್ಯಾಕ್ಟರಿ ನಿಲ್ದಾಣದ ಬಳಿ ಬಂದಾಗ ಪ್ರಯಾಣಿಕರೆಲ್ಲ ಇಳಿದು ಹೋಗಿದ್ದರು. ಆ ನಂತರ ಆರೋಪಿಗಳು ಯುವತಿಯರ ಮೇಲೆ ಹಲ್ಲೆ ನಡೆಸಿ, ಅನುಚಿತವಾಗಿ ವರ್ತಿಸಿದ್ದರು ಎಂದು ದೂರಲಾಗಿತ್ತು.

‘ನಿರ್ವಾಹಕ ಮತ್ತು ಚಾಲಕ, ಅಕ್ಕನನ್ನು ಬಸ್‌ನೊಳಗೆ ಎಳೆದೊಯ್ದು ವಾಹನದ ಬಾಗಿಲು ಮುಚ್ಚಿದ್ದರು. ಆಗ ನಾನು ಬಸ್‌ಗೆ ಅಡ್ಡವಾಗಿ ನಿಂತು, ಮುಂದೆ ಹೋಗಲು ಅವಕಾಶ ನೀಡಲಿಲ್ಲ. ನಂತರ ನಿರ್ವಾಹಕ ಅಕ್ಕನನ್ನು ವಾಹನದಿಂದ ಹೊರ ದೂಡಿದ್ದ ಘಟನೆ ಸಂಬಂಧ ಬಿಎಂಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕ ನಾಗರಾಜ್ ಅವರಿಗೆ ದೂರು ನೀಡಿದ್ದೆ. ಆದರೆ, ಈವರೆಗೆ ಕ್ರಮ ಕೈಗೊಂಡಿಲ್ಲ’ ಎಂದು ಯುವತಿ ಆರೋಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.