ADVERTISEMENT

ಚಿಕಿತ್ಸೆ ಬಳಿಕ ಯುವಕ ಸಾವು; ನಿರ್ಲಕ್ಷ್ಯ ಆರೋಪ

​ಪ್ರಜಾವಾಣಿ ವಾರ್ತೆ
Published 25 ಮೇ 2012, 19:30 IST
Last Updated 25 ಮೇ 2012, 19:30 IST

ಬೆಂಗಳೂರು: ಭುಜ ನೋವಿನ ಸಮಸ್ಯೆಗೆ ಸಂಬಂಧಿಸಿದಂತೆ ಪೀಣ್ಯದ ರವಿ ಕಿರ್ಲೋಸ್ಕರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ ವ್ಯಕ್ತಿಯೊಬ್ಬರು ಸ್ವಲ್ಪ ಸಮಯದಲ್ಲೇ ಸಾವನ್ನಪ್ಪಿರುವ ಘಟನೆ ಶುಕ್ರವಾರ ನಡೆದಿದೆ.
`ಕಮ್ಮಗೊಂಡನಹಳ್ಳಿ ನಿವಾಸಿ ಮಧುಕುಮಾರ್ (30) ಸಾವನ್ನಪ್ಪಿದವರು.

ಭುಜ ನೋವಿನ ಸಮಸ್ಯೆಗೆ ಚಿಕಿತ್ಸೆ ಪಡೆಯಲು ಬೆಳಿಗ್ಗೆ 6.30ಕ್ಕೆ ಆಸ್ಪತ್ರೆಗೆ ಹೋದ ಅವರಿಗೆ ವೈದ್ಯರು ಚುಚ್ಚುಮದ್ದು ಹಾಗೂ ನೋವು ನಿವಾರಕ ಮಾತ್ರೆಗಳನ್ನು ನೀಡಿದ್ದರು. ಚಿಕಿತ್ಸೆ ಪಡೆದು ಮನೆಗೆ ಬಂದ ಮಧು, ವಾಂತಿ ಮಾಡಿಕೊಂಡು ಕುಸಿದು ಬಿದ್ದರು. ಕೂಡಲೇ ಅವರನ್ನು ಅದೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆತ ಸಾವನ್ನಪ್ಪಿರುವುದಾಗಿ ವೈದ್ಯರು ಹೇಳಿದರು~ ಎಂದು ಮೃತರ ಸಂಬಂಧಿ ರಘು ತಿಳಿಸಿದರು.

ನಿರ್ಲಕ್ಷ್ಯ ಆರೋಪ: `ವೈದ್ಯರು ಬೇರೆ ಚುಚ್ಚುಮದ್ದು ನೀಡಿದ್ದರಿಂದ ಮಧು ಮೃತಪಟ್ಟಿದ್ದಾನೆ. ಜೂ. 5 ರಂದು ಅವನ ವಿವಾಹ ನಿಶ್ಚಯವಾಗಿತ್ತು. ಆತನ ಜೀವದ ಜತೆ ಆಟವಾಡಿರುವ ಆಸ್ಪತ್ರೆ ಸಿಬ್ಬಂದಿ ಮೇಲೆ ಕಠಿಣ ಕ್ರಮ ಜರುಗಿಸಬೇಕು~ ಎಂದು ಮೃತರ ಸಂಬಂಧಿ ಒತ್ತಾಯಿಸಿದರು.

ಮಧು ಅವರಿಗೆ ಚಿಕಿತ್ಸೆ ನೀಡಿದ ವೈದ್ಯ ವಿ.ಸಿ.ಪುರದ್ ಅಲಿಯಾಸ್ ಮುತ್ತು ಎಂಬುವರನ್ನು ವಶಕ್ಕೆ ತೆಗೆದುಕೊಂಡಿರುವ ಪೊಲೀಸರು ಅವರ ವಿರುದ್ಧ ನಿರ್ಲಕ್ಷ್ಯದ ಆರೋಪದ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
`ಮಧು ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣವೋ ಅಥವಾ ಹೃದಯಾಘಾತದಿಂದ ಅವರು ಮೃತಪಟ್ಟಿದ್ದಾರೋ ಎಂಬುದು ಮರಣೋತ್ತರ ಪರೀಕ್ಷೆ ನಂತರ ತಿಳಿಯಲಿದೆ~ ಎಂದು ಪೊಲೀಸರು ತಿಳಿಸಿದ್ದಾರೆ.

`ಮಧುಕುಮಾರ್‌ಗೆ ಡಿಕ್ಲೋಫೆನಾಕ್ ನೋವು ನಿವಾರಕ ಚುಚ್ಚುಮದ್ದು ನೀಡಲಾಗಿತ್ತು. ಇದರ ಪರಿಣಾಮ ಅವರ ಮೃತಪಟ್ಟಿದ್ದಾರೆ ಎಂಬುದು ಸತ್ಯಕ್ಕೆ ದೂರವಾದ ಮಾತು. ಡಿಕ್ಲೋಫೆನಾಕ್‌ನಿಂದ ವ್ಯಕ್ತಿ ಮೃತಪಟ್ಟಿರುವ ಒಂದು ಪ್ರಕರಣವನ್ನೂ ನಾನು ನೋಡಿಲ್ಲ. ಮರಣೋತ್ತರ ಪರೀಕ್ಷೆಯಿಂದ ಸತ್ಯ ಗೊತ್ತಾಗಲಿದೆ~ ಎಂದು ಆಸ್ಪತ್ರೆಯ ಮೇಲ್ವಿಚಾರಕ ಡಾ.ಮಂಜುನಾಥ್ ಹೇಳಿದರು.

`ವಿ.ಸಿ.ಪುರದ್ ಎಂಬಿಬಿಎಸ್ ಮಾಡಿಕೊಂಡಿದ್ದು, ಒಂದು ವರ್ಷದಿಂದ ನಮ್ಮ ಆಸ್ಪತ್ರೆಯಲ್ಲೇ ಸೇವೆ ಸಲ್ಲಿಸುತ್ತಿದ್ದಾರೆ. ಅವರ ಮೇಲೆ ಈ ರೀತಿ ಆರೋಪ ಬರುತ್ತಿರುವುದು ಇದೇ ಮೊದಲು~ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.