ADVERTISEMENT

ಚಿನ್ನದ ಹಕ್ಕಿಗಳಿಗೆ ಏನಾಗುವ ಆಸೆ..?

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 19:55 IST
Last Updated 15 ಫೆಬ್ರುವರಿ 2011, 19:55 IST

ಬೆಂಗಳೂರು:  ಬೆಂಗಳೂರು ವಿಶ್ವವಿದ್ಯಾಲಯದ 46ನೇ ಘಟಿಕೋತ್ಸವದಲ್ಲಿ ಬಹುಪಾಲು ಚಿನ್ನದ ಪದಕಗಳನ್ನು ಬಾಚಿಕೊಂಡದ್ದು ವಿದ್ಯಾರ್ಥಿನಿಯರು. ಪರೀಕ್ಷಾ ಫಲಿತಾಂಶದಲ್ಲಿ ವಿದ್ಯಾರ್ಥಿನಿಯರು ಮೇಲುಗೈ ಸಾಧಿಸುವಂತೆ ಸಹಜವಾಗಿ ಇಲ್ಲಿಯೂ ಅವರದೇ ಪ್ರಾಬಲ್ಯ.ಪದಕಗಳನ್ನು ಪಡೆದ ವಿವಿಧ ವಿಭಾಗಗಳ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತಮ್ಮ ಭವಿಷ್ಯತ್ತು, ತಾವು ಸಾಗಿಬಂದ ಹಾದಿ ಹಾಗೂ ತಮಗಾದ ಸಂತಸವನ್ನು ಬಣ್ಣಿಸಿದ್ದು ಹೀಗೆ...

ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕನ್ನಡ ವಿಭಾಗದಲ್ಲಿ ಪದವಿ ಪೂರೈಸಿದ ಸಿ.ಜಿ.ಲಕ್ಷ್ಮಿ ಅವರು ಅತ್ಯಂತ ಅಧಿಕ ಅಂದರೆ ಏಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ತಮ್ಮ ಪೋಷಕರೊಂದಿಗೆ ಆಗಮಿಸಿದ್ದ ಲಕ್ಷ್ಮಿ ಅವರ ಊರು ಚನ್ನಪಟ್ಟಣ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಏಳು ಚಿನ್ನ ಬಂದದ್ದರಿಂದ ಖುಷಿಯಾಗಿದೆ. ರ್ಯಾಂಕ್ ಬರುತ್ತದೆ ಎಂದು ನಿರೀಕ್ಷೆ ಮಾಡಿದ್ದೆನಾದರೂ ಪ್ರಥಮ ರ್ಯಾಂಕ್ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ನಾನು ಏನು ಓದುತ್ತೇನೆಯೋ ಅದಕ್ಕೆ ಪ್ರೋತ್ಸಾಹ ನೀಡಿದ ನನ್ನ ತಂದೆ-ತಾಯಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಈಗ ಮೈಸೂರು ವಿ.ವಿ.ಯಲ್ಲಿ ಎಂ.ಫಿಲ್ ಓದುತ್ತಿದ್ದು, ಮುಂದೆ ಪಿಎಚ್.ಡಿ ಮಾಡುವ ಆಸೆ ಇದೆ’ ಎಂದರು.

ಬಿ.ಕಾಂನಲ್ಲಿ ನಾಲ್ಕು ಚಿನ್ನದ ಪದಕ ಪಡೆದ ಬಿಎಂಎಸ್ ಮಹಿಳಾ ಕಾಲೇಜಿನ ಅಂಧ ವಿದ್ಯಾರ್ಥಿನಿ ಸ್ವಾತಿ ಟಿ.ಪಿ. ತಾವು ಅಂಧರು ಎಂದು ಕರೆಸಿಕೊಳ್ಳುವುದನ್ನು ಒಪ್ಪಲಿಲ್ಲ. ‘ಆರು ವರ್ಷಗಳ ಹಿಂದೆ ಭಾಗಶಃ ದೃಷ್ಟಿ ಸಾಮರ್ಥ್ಯ ಕಳೆದುಕೊಂಡಿದ್ದೇನೆ. ಹಾಗಂತ ನಾನು ಯಾವುದೇ ಮೀಸಲಾತಿ ಪಡೆಯದೇ ಕಾಲೇಜಿಗೆ ಪ್ರವೇಶ ಪಡೆದಿದ್ದೆ. ಈಗಲೂ ಅಷ್ಟೇ ಸಾಮಾನ್ಯ ವಿದ್ಯಾರ್ಥಿಗಳೊಂದಿಗೆ ಪರೀಕ್ಷೆ ಬರೆದೇ ಪ್ರಥಮ ಸ್ಥಾನ ಪಡೆದಿದ್ದೇನೆ. ಯಾರ ಸಹಾಯವೂ ಇಲ್ಲದೇ ಕಂಪ್ಯೂಟರ್ ಮೂಲಕ ಪಾಠ ಓದುತ್ತೇನೆ. ಇದಕ್ಕೆ ನನ್ನ ತಂದೆ-ತಾಯಿ, ತಂಗಿ ಕಾರಣ. ಸ್ವಾಮಿ ವಿವೇಕಾನಂದ ನನ್ನ ರೋಲ್ ಮಾಡೆಲ್. ದೇಶದ ಪ್ರತಿಷ್ಠಿತ ಮ್ಯಾನೇಜ್‌ಮೆಂಟ್ ಸಂಸ್ಥೆಯಲ್ಲಿ ಓದುವ ಆಸೆ ಇದೆ’ ಎಂದು ತಮ್ಮ ಅನುಭವ ಹಂಚಿಕೊಂಡರು.

ಎಂ.ಎಸ್ಸಿ ರಸಾಯನಶಾಸ್ತ್ರದಲ್ಲಿ ಆರು ಚಿನ್ನದ ಪದಕ ಪಡೆದಿರುವ ರಮೇಶ್‌ಕುಮಾರ್ ಮಾತನಾಡಿ, ‘ಚಿನ್ನದ ಪದಕಗಳು ಬಂದದ್ದರಿಂದ ಸಹಜವಾಗಿಯೇ ಖುಷಿಯಾಗಿದೆ. ಈಗಾಗಲೇ ಆಸ್ಟ್ರೊಜೆನಿಕ್ ಔಷಧಿ ಕಂಪೆನಿಯಲ್ಲಿ ಕೆಲಸ ಮಾಡುತ್ತೇನೆ. ಇದರಲ್ಲೇ ಮುಂದುವರೆಯುತ್ತೇನೆ’ ಎಂದರು.

ಎಂ.ಎ. ಇಂಗ್ಲಿಷ್‌ನಲ್ಲಿ ಮೂರು ಚಿನ್ನದ ಪದಕ ಪಡೆದ ಪೀಣ್ಯದ ಆಚಾರ್ಯ ಇನ್‌ಸ್ಟಿಟ್ಯೂಟ್‌ನ ವಿದ್ಯಾರ್ಥಿನಿ ಚರಿತ್ರ ಎಚ್.ಜಿ. ಆ ಕಾಲೇಜಿಗೆ ಶೇ 100ರಷ್ಟು ಫಲಿತಾಂಶ ತರುವ ಮೂಲಕ ಚರಿತ್ರೆ ಬರೆದಿದ್ದಾರೆ. ಏಕೆಂದರೆ ಆ ಕಾಲೇಜಿನ ಇಂಗ್ಲಿಷ್ ವಿಭಾಗಕ್ಕೆ ಇವರೊಬ್ಬರೇ ವಿದ್ಯಾರ್ಥಿನಿ! ‘ಎರಡು ವರ್ಷ ಒಬ್ಬಳೇ ಕ್ಲಾಸ್‌ಗೆ ಹೋಗ್ತಿದ್ದೆ. ಇಂಗ್ಲಿಷ್ ಬಹಳ ಕಷ್ಟ ಎನಿಸಿತ್ತು. ನಗುವಿನಿಂದಲೂ ನನ್ನ ಖುಷಿಯನ್ನು ವ್ಯಕ್ತಪಡಿಸುವುದಾಗುವುದಿಲ್ಲ. ಮುಂದೆ ಪಿಎಚ್.ಡಿ, ಐಎಎಸ್ ಮಾಡುವ ಆಸೆ ಇದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.